Site icon Vistara News

ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಚೇತನರೇ ಮುನ್ನಡೆಸುವ ‘ಮಿಟ್ಟಿ ಕೆಫೆ’ಗೆ ಸಿಜೆಐ ಚಂದ್ರಚೂಡ್‌ ಚಾಲನೆ

CJI DY CHandrachud Mitti Cafe

CJI DY Chandrachud inaugurates Mitti cafe run by differently abled in Supreme Court

ನವದೆಹಲಿ: ವಿಶೇಷ ಚೇತನರ ಆತ್ಮವಿಶ್ವಾಸವನ್ನು ಹೆಚ್ಚಿಸುವ, ಅವರಲ್ಲಿ ಆತ್ಮಬಲವನ್ನು ತುಂಬುವ ದಿಸೆಯಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ಹೆಜ್ಜೆ ಇರಿಸಿದೆ. ಸುಪ್ರೀಂ ಕೋರ್ಟ್‌ (Supreme Court) ಆವರಣದಲ್ಲಿ ವಿಶೇಷ ಚೇತನರೇ ನಿರ್ವಹಿಸುವ ‘ಮಿಟ್ಟಿ ಕೆಫೆ’ಗೆ (Mitti Cafe) ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ (CJI DY Chandrachud) ಅವರು ಶುಕ್ರವಾರ (ನವೆಂಬರ್‌ 10) ಚಾಲನೆ ನೀಡಿದ್ದಾರೆ.

ಇಡೀ ಕೆಫೆಯನ್ನು ವಿಶೇಷ ಚೇತನರೇ ನಿರ್ವಹಿಸುವ ಕಾರಣದಿಂದಾಗಿ ಇದು ಪ್ರಾಮುಖ್ಯತೆ ಪಡೆದಿದೆ. ಸುಪ್ರೀಂ ಕೋರ್ಟ್‌ನಲ್ಲಿ ಈಗಾಗಲೇ ಹಲವು ಕೆಫೆಟೇರಿಯಾಗಳು ಇದ್ದರೂ ‘ಮಿಟ್ಟಿ ಕೆಫೆ’ ವಿಶೇಷ ಎನಿಸಿದೆ. ವಿಶೇಷ ಚೇತನರ ಜತೆ ಕೆಫೆಗೆ ಆಗಮಿಸಿದ ಡಿ.ವೈ.ಚಂದ್ರಚೂಡ್‌ ಅವರು ಚಾಲನೆ ನೀಡಿದರು. “ಮಿಟ್ಟಿ ಕೆಫೆಗೆ ನನ್ನ ಬೆಂಬಲ ಇದೆ. ಬಾರ್‌ ಕೌನ್ಸಿಲ್‌ ಸದಸ್ಯರು ಸೇರಿ ಎಲ್ಲರೂ ಇದಕ್ಕೆ ಬೆಂಬಲ ನೀಡೋಣ” ಎಂದು ಬಳಿಕ ಸಿಜೆಐ ಕರೆ ನೀಡಿದರು.

ದೇಶದ 38 ಕಡೆ ಮಿಟ್ಟಿ ಕೆಫೆಗಳಿವೆ. ವಿಶೇಷ ಚೇತನರೇ ಇವುಗಳನ್ನು ನಿರ್ವಹಿಸುವ ಕಾರಣ ಎಲ್ಲರ ಗಮನ ಸೆಳೆದಿದೆ. “ಮಿಟ್ಟಿ ಕೆಫೆ ಸದಸ್ಯರು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ 60 ಲಕ್ಷ ಊಟಗಳನ್ನು ಪೂರೈಸಿದ್ದಾರೆ. ಇವರ ಸೇವೆ ಅನನ್ಯವಾಗಿದೆ. ಎಲ್ಲ ವಕೀಲರು, ಇಲ್ಲಿನ ಸಿಬ್ಬಂದಿಯು ಮಿಟ್ಟಿ ಕೆಫೆ ಸದಸ್ಯರಿಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ” ಎಂದು ಡಿ.ವೈ.ಚಂದ್ರಚೂಡ್‌ ತಿಳಿಸಿದರು.

ಮಿಟ್ಟಿ ಕೆಫೆ ಸಿಬ್ಬಂದಿಯೊಂದಿಗೆ ಸಿಜೆಐ ಡಿ.ವೈ.ಚಂದ್ರಚೂಡ್.

ಇದನ್ನೂ ಓದಿ: Article 35A: 35ಎ ವಿಧಿಯಿಂದ ಜನರ ಮೂಲಭೂತ ಹಕ್ಕು ಕಸಿತ: ರದ್ದಾದ ವಿಧಿ ಕುರಿತು ಸಿಜೆಐ ಚಂದ್ರಚೂಡ್ ಮಹತ್ವದ ಹೇಳಿಕೆ

ಅಟಾರ್ನಿ ಜನರಲ್‌ ಅಟಾರ್ನಿ ಜನರಲ್‌ ಆರ್.‌ ವೆಂಕಟರಮಣಿ ಅವರು ಮಿಟ್ಟಿ ಕೆಫೆಗೆ ಚಾಲನೆ ನೀಡಿರುವುದು, “ಸಹಾನುಭೂತಿಯ ಸಂಕೇತ” ಎಂದು ಬಣ್ಣಿಸಿದ್ದಾರೆ. ಇನ್ನು ಡಿ.ವೈ.ಚಂದ್ರಚೂಡ್‌ ಅವರು ಇಂತಹ ವಿಶೇಷ ಕೆಫೆಗೆ ಚಾಲನೆ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ವಿಶೇಷ ಚೇತನರಿಗೆ ನೆರವು ನೀಡುವಲ್ಲಿ ಇದು ಮಹತ್ವದ ತೀರ್ಮಾನ ಎಂದು ಹೊಗಳಿದ್ದಾರೆ. ‌

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version