Site icon Vistara News

bill in rajya sabha: ಮುಖ್ಯ ಚುನಾವಣಾ ಆಯುಕ್ತರ ನೇಮಕ ಸಮಿತಿಯಿಂದ ಸಿಜೆಐಗೆ ಕೊಕ್! ರಾಜ್ಯಸಭೆಯಲ್ಲಿ ಬಿಲ್ ಮಂಡನೆ

Chief Election commissioner selection

ನವದೆಹಲಿ: ಕೇಂದ್ರ ಚುನಾವಣಾ ಆಯುಕ್ತರ ನೇಮಕ ಸಮಿತಿಯಲ್ಲಿ (Election Commission’s selection Committee) ಮುಖ್ಯ ನ್ಯಾಯಮೂರ್ತಿಯನ್ನು (Chief Justice of India) ಕೈ ಬಿಡುವ ವಿಧೇಯಕವನ್ನು ರಾಜ್ಯಸಭೆಯಲ್ಲಿ (bill in rajya sabha) ಕೇಂದ್ರ ಸರ್ಕಾರವು ಮಂಡಿಸಿದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ಆಯ್ಕೆಯ ಸಮಿತಿಯಲ್ಲಿ ಪ್ರಧಾನ ಮಂತ್ರಿಯವರು (Prime Minister of India) ನಾಮನಿರ್ದೇಶನ ಮಾಡಿದ ಸಂಪುಟ ಸಚಿವರನ್ನು ಸೇರ್ಪಡೆ ಮಾಡುವ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಈ ಪ್ರಕ್ರಿಯೆಯಿಂದ ಹೊರಗಿಡುವ ವಿಧೇಯಕವನ್ನು ಸರ್ಕಾರ ಗುರುವಾರ ರಾಜ್ಯಸಭೆಯಲ್ಲಿ ಮಂಡಿಲಿದೆ. ಈ ಸಮಿತಿಯಲ್ಲಿ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರನ್ನು ಒಳಗೊಂಡಿದೆ.

ಕಾನೂನು ರಚನೆಯಾಗೋವರೆಗೂ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಹಾಗೂ ಚುನಾವಣಾ ಆಯುಕ್ತರ ನೇಮಕವನ್ನು ಪ್ರಧಾನಿ ನೇತೃತ್ವದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಮೂವರು ಸದಸ್ಯರ ಸಮಿತಿಯು ಮಾಡಲಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ಐದು ತಿಂಗಳ ಬಳಿಕ ಈ ವಿಧೇಯಕವನ್ನು ಮಂಡಿಸಲಾಗುತ್ತಿದೆ.

ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ಮತ್ತು ಚುನಾವಣಾ ಆಯುಕ್ತರ ನೇಮಕಕ್ಕೆ ಸ್ವತಂತ್ರ ಕಾರ್ಯವಿಧಾನವನ್ನು ಕೋರಿ ಸಲ್ಲಿಸಲಾದ ಅರ್ಜಿಗಳ ಮೇಲೆ ತೀರ್ಪು ನೀಡಿದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು, ಯಾವುದೇ ವಿರೋಧ ಪಕ್ಷದ ನಾಯಕರು ಲಭ್ಯವಿಲ್ಲದಿದ್ದಲ್ಲಿ, ಸಂಖ್ಯಾ ಬಲದ ಪ್ರಕಾರ ಲೋಕಸಭೆಯ ಅತಿದೊಡ್ಡ ವಿರೋಧ ಪಕ್ಷದ ನಾಯಕನನ್ನು ಸಮಿತಿಯು ಒಳಗೊಂಡಿರುತ್ತದೆ ಎಂದು ಹೇಳಿತ್ತು.

ಈ ಸುದ್ದಿಯನ್ನೂ ಓದಿ: Supreme court Verdict: ಚುನಾವಣಾ ಆಯುಕ್ತರ ನೇಮಕಕ್ಕೆ ಮೂವರ ಸಮಿತಿ ಕಡ್ಡಾಯ: ಪಿಎಂ, ಸಿಜೆಐ, ಪ್ರತಿಪಕ್ಷ ನಾಯಕ

ಗುರುವಾರ ರಾಜ್ಯಸಭೆಯ ಕಲಾಪದ ವೇಳೆ, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಈ ವಿಧೇಯಕವನ್ನು ಮಂಡಿಸಿದರು. ಮುಖ್ಯ ಚುನಾವಣಾ ಆಯುಕ್ತ (CEC) ಮತ್ತು ಇತರ ಚುನಾವಣಾ ಆಯುಕ್ತರ (ECs) ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿಯನ್ನು ನಿಯಂತ್ರಿಸುವ ಮಸೂದೆಯನ್ನು ಕೇಂದ್ರ ಕಾನೂನು ಸಚಿವರು ಮಂಡಿಸಿದರು.

ಸದ್ಯಕ್ಕೆ ಕೇಂದ್ರ ಸರ್ಕಾರವು ಸಂವಿಧಾನದ 324(2) ವಿಧಿಯ ಅನುಸಾರ ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ಹಾಗೂ ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತದೆ. ಚುನಾವಣಾ ಆಯೋಗವು ಮುಖ್ಯ ಚುನಾವಣಾ ಆಯುಕ್ತರು ಮತ್ತು ಅಂತಹ ಸಂಖ್ಯೆಯ ಇತರ ಚುನಾವಣಾ ಆಯುಕ್ತರನ್ನು ಒಳಗೊಂಡಿರುತ್ತದೆ. ಈ ಆಯುಕ್ತರ ಸಂಖ್ಯೆಯನ್ನು ಅಗತ್ಯ ಬಿದ್ದರೆ ರಾಷ್ಟ್ರಪತಿಗಳು ಕಾಲಕಾಲಕ್ಕೆ ನಿಗದಿಪಡಿಸಬಹುದು ಮತ್ತು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿಯು ನಿಬಂಧನೆಗಳು ಸಂಸತ್ತಿನ ಪರವಾಗಿ ಮಾಡಿದ ಯಾವುದೇ ಕಾನೂನಿಗೆ ಒಳಪಟ್ಟಿರುತ್ತದೆ ಎಂದು ಈ ವಿಧಿಯಲ್ಲಿ ತಿಳಿಸಲಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version