Site icon Vistara News

ಸೋಷಿಯಲ್ ಮೀಡಿಯಾ ಪೋಸ್ಟ್​​ ಕಾರಣಕ್ಕೆ ಮಾರಾಮಾರಿ; ಒಬ್ಬ ಸಾವು, ಪೊಲೀಸರು ಸೇರಿ 8ಮಂದಿಗೆ ಗಾಯ

Clash Over Social Media Post 1 killed 8 Injured in Maharashtra

#image_title

ಅಕೋಲಾ:  ಸಾಮಾಜಿಕ ಜಾಲತಾಣದ ಪೋಸ್ಟ್​ವೊಂದರ (Social Media Post) ಕಾರಣಕ್ಕೆ ಮಹಾರಾಷ್ಟ್ರದ ಅಕೋಲಾದಲ್ಲಿ ಎರಡು ಸಮುದಾಯಗಳ ನಡುವೆ ಮಾರಾಮಾರಿ ಜಗಳ ಆಗಿದೆ. ಈ ಸಂಘರ್ಷದಲ್ಲಿ ಒಬ್ಬಾತ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ಹೀಗೆ ಗಾಯಗೊಂಡವರಲ್ಲಿ ಇಬ್ಬರು ಪೊಲೀಸರೂ ಸೇರಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಒಟ್ಟು 26ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ನಡೆದಿದ್ದು ಶನಿವಾರ ರಾತ್ರಿ ಸುಮಾರು 11.30ರ ಹೊತ್ತಿಗೆ. ಅಕೋಲಾದ ಸೂಕ್ಷ್ಮ ಪ್ರದೇಶವಾದ ಹಳೇ ಸಿಟಿ ಏರಿಯಾದಲ್ಲಿ ಗಲಾಟೆ ಶುರುವಾಗಿ, ಅದು ವಿಕೋಪಕ್ಕೆ ಏರಿತು. ಸದ್ಯ ಅಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ನೀಮಾ ಅರೋರಾ ಮಾಹಿತಿ ನೀಡಿದ್ದಾರೆ. ಧಾರ್ಮಿಕ ವಿಷಯಕ್ಕೆ ಸಂಬಂಧಪಟ್ಟಂತೆ ಒಂದು ಅವಹೇಳನಕಾರಿ ಪೋಸ್ಟ್​ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿತ್ತು. ಇದು ಎರಡು ಸಮುದಾಯಗಳ ಮಧ್ಯೆ ಮೊದಲು ಜಗಳ ಹುಟ್ಟುಹಾಕಿತು. ಬಳಿಕ ಕಲ್ಲುತೂರಾಟ-ಪರಸ್ಪರ ದಾಳಿ ಹಂತಕ್ಕೆ ಹೋಯಿತು. ನಿಯಂತ್ರಿಸಲು ಹೋದ ಪೊಲೀಸರ ಮೇಲೆಯೂ ಹಲ್ಲೆ ನಡೆಸಿದರು. ಕೆಲವು ವಾಹನಗಳೂ ಹಾನಿಗೊಳಗಾಗಿವೆ. ಒಬ್ಬ ವ್ಯಕ್ತಿ ಮೃತಪಟ್ಟಿದ್ದಾಗಿ ವರದಿಯಾಗಿದೆ ಎಂದು ಎಎಸ್​​ಪಿ ಮೋನಿಕಾ ರಾವತ್​ ತಿಳಿಸಿದ್ದಾರೆ.

ಇದನ್ನೂ ಓದಿ: Tree Fall tragedy: ಮಹಾರಾಷ್ಟ್ರದ ಅಕೋಲಾದಲ್ಲಿ ಮರ ಬಿದ್ದು 7 ಭಕ್ತರ ಸಾವು

ಗಲಾಟೆ-ಸಂಘರ್ಷ ಬರುಬರುತ್ತ ಮಿತಿಮೀರಿತ್ತು. ಎರಡೂ ಸಮುದಾಯದವರನ್ನು ನಿಯಂತ್ರಣಕ್ಕೆ ತರುವುದು ಕಷ್ಟವಾಗಿ, ಕೊನೆಗೆ ಅಶ್ರುವಾಯು ಪ್ರಯೋಗ ಮಾಡಲಾಯಿತು ಎಂದೂ ಮೋನಿಕಾ ಮಾಹಿತಿ ನೀಡಿದ್ದಾರೆ. ಸದ್ಯ ಅಲ್ಲಿ ರಾಜ್ಯ ಮೀಸಲು ಪಡೆ ಪಡೆಯ ಸಾವಿರಾರು ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಅಕೋಲಾ ಜಿಲ್ಲೆಯ ಉಸ್ತುವಾರಿ ಸಚಿವ ದೇವೇಂದ್ರ ಫಡ್ನವೀಸ್ ಅವರು ಅಲ್ಲಿನ ಸಮಗ್ರ ಮಾಹಿತಿ ಪಡೆದಿದ್ದಾರೆ.

Exit mobile version