ಪ್ರಧಾನಿ ನರೇಂದ್ರ ಮೋದಿ (PM Modi) ಯವರು ಮೇ 28ರಂದು ಹೊಸ ಸಂಸತ್ ಭವನವನ್ನು (New Parliament) ಉದ್ಘಾಟನೆ ಮಾಡಲಿದ್ದಾರೆ. ನೂತನ ಸಂಸತ್ ಭವನದ ಉದ್ಘಾಟನೆ ನಿಮಿತ್ತ ಅಂದು ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು, ವಿವಿಧ ಸಮಾರಂಭಗಳು ನಡೆಯಲಿದೆ. ಅದರಲ್ಲೂ ಬಹುಮುಖ್ಯವಾಗಿ ಲೋಕಸಭೆ ಸ್ಪೀಕರ್ ಕುರ್ಚಿಯ ಬಳಿ ಪ್ರಧಾನಿ ಮೋದಿ ಅವರು ‘ಸೆಂಗೋಲ್’ನ್ನು (Sengol In New Parliament) ಅಳವಡಿಸಲಿದ್ದಾರೆ. ತಮಿಳುನಾಡು ಮೂಲದ ಚೋಳ ರಾಜವಂಶದ ಆಡಳಿತದ ಅವಧಿಯಲ್ಲಿ ಧಾರ್ಮಿಕ, ರಾಜತಾಂತ್ರಿಕವಾಗಿ ಪ್ರಾಮುಖ್ಯತೆ ಪಡೆದಿದ್ದ ಈ ಸೆಂಗೋಲ್ ಅಥವಾ ರಾಜದಂಡವನ್ನು 1947ರ ಆಗಸ್ಟ್ 14ರಂದು, ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡುವ ವೇಳೆ ತಮಿಳುನಾಡಿನ ಮಠಧೀಶರು ಜವಾಹರ್ ಲಾಲ್ ನೆಹರೂ ಅವರಿಗೆ ಕೊಟ್ಟರು ಎಂದು ಹೇಳಲಾಗುತ್ತಿದೆ. ಸೆಂಗೋಲ್ ಎಂಬುದು ಬ್ರಿಟಿಷರಿಂದ ಭಾರತಕ್ಕೆ ಅಧಿಕಾರ ಹಸ್ತಾಂತರಗೊಂಡಿದ್ದರ ಸಂಕೇತ ಎನ್ನಲಾಗಿದೆ.
ಸೆಂಗೋಲ್ನ್ನು ನೂತನ ಸಂಸತ್ ಭವನದಲ್ಲಿ ಅಳವಡಿಸಬೇಕು ಎಂಬುದು ಪ್ರಧಾನಿ ಮೋದಿಯವರ ಇಚ್ಛೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಸೆಂಗೋಲ್ ಮಹತ್ವವನ್ನೂ ವಿವರಿಸಿ ಹೇಳಿದ್ದರು. ಇನ್ನು ಅಲಹಾಬಾದ್ ಮ್ಯೂಸಿಯಂನಲ್ಲಿದ್ದ ಸೆಂಗೋಲ್ ಬಗ್ಗೆ ಪ್ರಧಾನಿ ಮೋದಿಯವರಿಗೆ ಗೊತ್ತಾಗಿದ್ದು ಹೇಗೆ? ಯಾರಿಂದ ಈ ವಿಷಯ ತಿಳಿಯಿತು? ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೆ ಉತ್ತರ ಸಿಕ್ಕಿದೆ. ಜನಮಾನಸದಿಂದ ಮರೆಗೆ ಸೇರಿದ್ದ ಈ ರತ್ನಖಚಿತ ರಾಜದಂಡದ ಬಗ್ಗೆ ಪ್ರಧಾನಿ ಮೋದಿ ಗಮನಕ್ಕೆ ತಂದಿದ್ದು ಖ್ಯಾತ ಕ್ಲಾಸಿಕಲ್ ಡ್ಯಾನ್ಸರ್ ಪದ್ಮಾ ಸುಬ್ರಹ್ಮಣ್ಯಮ್. 2021ರಲ್ಲಿ ಇವರು ಪ್ರಧಾನಿ ಮೋದಿಯವರಿಗೆ ಒಂದು ಪತ್ರ ಬರೆದಿದ್ದರು. ಅದರಲ್ಲಿ ಸೆಂಗೋಲ್ (ರಾಜದಂಡ) ಬಗ್ಗೆ ಉಲ್ಲೇಖ ಮಾಡಿದ್ದರು. ಅಷ್ಟೇ ಅಲ್ಲ, ಸೆಂಗೋಲ್ ಬಗ್ಗೆ ಪ್ರಕಟವಾದ ಒಂದು ತಮಿಳು ಆರ್ಟಿಕಲ್ನ ಭಾಷಾಂತರವನ್ನು ತಮ್ಮ ಪತ್ರದೊಂದಿಗೆ ಲಗತ್ತಿಸಿದ್ದರು. ಐತಿಹಾಸಿಕವಾಗಿ ಇಷ್ಟು ಮಹತ್ವ ಇರುವ ರಾಜದಂಡಕ್ಕೆ ಸೂಕ್ತ ಪ್ರಚಾರ ಸಿಗಬೇಕು. ದೇಶದ ಜನರಿಗೆ ಈ ಬಗ್ಗೆ ತಿಳಿಯುವಂತಾಗಬೇಕು ಎಂದಿದ್ದರು.
ಸೆಂಗೋಲ್ ಇತಿಹಾಸವೇನು?-ತಿಳಿಯಲು ಈ ಲೇಖನ ಓದಿ: ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಕಂಗೊಳಿಸಲಿದೆ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದು ರಾಜದಂಡ?
ಇದೀಗ ಸೆಂಗೋಲ್ನ್ನು ನೂತನ ಸಂಸತ್ ಭವನದಲ್ಲಿ ಅಳವಡಿಸುತ್ತಾರೆ ಎಂಬ ಸುದ್ದಿ ಕೇಳುತ್ತಿದ್ದಂತೆ ಎಎನ್ಐ ಜತೆ ಮಾತನಾಡಿದ ಪದ್ಮಾ ಸುಬ್ರಹ್ಮಣ್ಯಮ್ ‘ನಾನು ನನ್ನ ಸಾಂಸ್ಕೃತಿಕ ವೈಭವದ ಇತಿಹಾಸಗಳ ಬಗ್ಗೆ ಓದುತ್ತೇನೆ, ಬರೆಯುತ್ತೇನೆ. ನನಗೂ ಮೊದಲು ಸೆಂಗೋಲ್ ಬಗ್ಗೆ ಗೊತ್ತಿರಲಿಲ್ಲ. ಯಾವುದೇ ಪಠ್ಯದಲ್ಲೂ ನಾನು ಈ ಕುರಿತು ಓದಿರಲಿಲ್ಲ. ಆದರೆ ಬೇರೆನೋ ಓದುವಾಗ ಸೆಂಗೋಲ್ ಬಗ್ಗೆ ಒಂದು ಲೇಖನ ಓದಿದೆ. ಅದನ್ನು ಹೆಚ್ಚು ಪ್ರಚುರ ಪಡಿಸಬೇಕು ಎಂಬ ಆಸೆಯಾಯಿತು. ತಮಿಳು ಭಾಷೆಯಲ್ಲಿದ್ದ ಅದನ್ನು ಪೂರ್ತಿಯಾಗಿ ಇಂಗ್ಲಿಷ್ಗೆ ಭಾಷಾಂತರ ಮಾಡಿದೆ. ನಂತರ ಪ್ರಧಾನಿ ಮೋದಿಯವರಿಗೆ ಒಂದು ಪತ್ರ ಬರೆದು, ಅದರೊಂದಿಗೆ ಈ ಆರ್ಟಿಕಲ್ ಇಟ್ಟು ಕಳಿಸಿದ್ದೆ’ ಎಂದು ಹೇಳಿದ್ದಾರೆ.
ಅಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿದ್ದ ಪತ್ರಕ್ಕೆ ಏನೂ ಉತ್ತರ ಬಂದಿರಲಿಲ್ಲ. ಆದರೆ ಈಗ ನೂತನ ಸಂಸತ್ ಭವನದಲ್ಲೇ ಅಳವಡಿಸಲು ಮುಂದಾಗಿರುವುದು ಖುಷಿಕೊಟ್ಟಿದೆ. ಸೆಂಗೋಲ್ಗೆ ತಮಿಳು ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವ ಇದೆ. ಇದು ಅಧಿಕಾರ, ನ್ಯಾಯದ ಪ್ರತೀಕ ಎಂದು ತಮಿಳಿನ ಕಾವ್ಯಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಪದ್ಮಾ ಸುಬ್ರಹ್ಮಣ್ಯಮ್ ಮಾಹಿತಿ ನೀಡಿದ್ದಾರೆ.