ನವ ದೆಹಲಿ: ಭಾರತ, ಬ್ರಿಟನ್ ಸೇರಿದಂತೆ ಜಗತ್ತಿನ ನಾನಾ ದೇಶಗಳನ್ನು ಕಾಡುತ್ತಿರುವ ಭಾರಿ ತಾಪಮಾನ ಮತ್ತು ಬಿಸಿಗಾಳಿಯ ಸಮಸ್ಯೆಗೆ ಹವಾಮಾನ ವೈಪರೀತ್ಯದ ಬಿಕ್ಕಟ್ಟು ಕಾರಣ ಎಂದು ಹವಾಮಾನ ವಿಜ್ಞಾನಿಗಳ ಸಂಶೋಧನಾ ವರದಿ ತಿಳಿಸಿದೆ.
ಅತಿಯಾದ ಬಿಸಿಗಾಳಿಗೆ ವಿಶ್ವದ ಹಲವೆಡೆ ಜನಜೀವನ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ, ಜಾಗತಿಕ ಹವಾಮಾನದ ಅಧ್ಯಯನ ನಡೆಸುವ ಅಂತಾರಾಷ್ಟ್ರೀಯ ವೇದಿಕೆಯಾಗಿರುವ ವರ್ಲ್ಡ್ ವೆದರ್ ಆಟ್ರಿಬ್ಯೂಷನ್ (World Weather Attribution), ವಿವರವಾಗಿ ವಿಶ್ಲೇಷಣೆ ನಡೆಸಿದೆ. ಹವಾಮಾನ ವೈಪರೀತ್ಯದಿಂದ ಇಂಥ ಬಿಸಿಗಾಳಿಯ ಅಪಾಯ ಇನ್ನಷ್ಟು ಹೆಚ್ಚಲಿದೆ ಎಂದು ಎಚ್ಚರಿಸಿದೆ.
ಭಾರತ, ಬ್ರಿಟನ್, ಅಮೆರಿಕದಲ್ಲಿ ತೀವ್ರ ಬಿಸಿಗಾಳಿ:
ವಿಶ್ವದ ಸರಾಸರಿ ಉಷ್ಣತೆಯೇ ಹೆಚ್ಚುತ್ತಿರುವುದರಿಂದ, ಜಗತ್ತಿನೆಲ್ಲೆಡೆಯ ಹವಾಮಾನ ಬದಲಾವಣೆಯ ಮಾದರಿಗಳು ವ್ಯತ್ಯಯವಾಗುತ್ತಿವೆ. ಇದರಿಂದಾಗಿ ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಉಷ್ಣತೆಯನ್ನು ಹಲವಾರು ದೇಶಗಳು ದಾಖಲಿಸಿದವು. ಭಾರತ ಮತ್ತು ಪಾಕಿಸ್ತಾನದಲ್ಲಿ ಮಾರ್ಚ್-ಎಪ್ರಿಲ್ ಹೊತ್ತಿಗೆ, ಜುಲೈ ಮಧ್ಯಭಾಗದಲ್ಲಿ ಬ್ರಿಟನ್‌ನಲ್ಲಿ ಮತ್ತು ಈಗ ಅಮೆರಿಕದಲ್ಲಿ ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಉಷ್ಣತೆ ಏರಿಕೆಯಾಗಿದೆ.
ಭಾರತ-ಪಾಕ್‌ನಲ್ಲಿ ಕಳೆದ ಮಾರ್ಚ್- ಎಪ್ರಿಲ್‌ನಲ್ಲಿ ಕಂಡುಬಂದ ತಾಪಮಾನ ಏರಿಕೆಯಂತೂ ಹಿಂದೆಂದೂ ಕಾಣದಂಥದ್ದು. ಭಾರತದಲ್ಲಿಯೂ ಮಾರ್ಚ್- ಏಪ್ರಿಲ್‌ನಲ್ಲಿ ಬೀಸಿದ ಬಿಸಿಗಾಳಿಯ ನಂತರ, ಮುಂಗಾರು ಪೂರ್ವದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿರಲಿಲ್ಲ. ನಿಸರ್ಗದ ಮೇಲಿನ ಮಾನವನ ಹಸ್ತಕ್ಷೇಪ ಅತಿಯಾದ್ದರಿಂದ ಉಂಟಾಗುತ್ತಿರುವ ಹವಾಮಾನ ವೈಪರಿತ್ಯದಿಂದಾಗಿ, ಬಿಸಿಗಾಳಿಯ ಸಾಧ್ಯತೆಗಳು ಸುಮಾರು ೩೦ ಪಟ್ಟು ಹೆಚ್ಚಿದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಬ್ರಿಟನ್‌ನಲ್ಲಿ ಬಿಸಿಗಾಳಿಯ ಅಬ್ಬರಕ್ಕೆ ೮೪೦ ಸಾವು: ಬ್ರಿಟನ್‌ನ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ, ಈ ವರ್ಷ ಏಪ್ರಿಲ್‌ನಲ್ಲಿ ತಾಪಮಾನ ೪೦ ಡಿಗ್ರಿ ಸೆಲ್ಶಿಯಸ್‌ನ ಗಡಿ ದಾಟಿತು. ನಂತರದ ದಿನಗಳಲ್ಲಿ ಬಿಸಿಗಾಳಿಯಿಂದ ಒಣಹವೆ ಇನ್ನಷ್ಟು ದೀರ್ಘವಾಯಿತು. ೧೯೧೧ರ ನಂತರ, ಈ ವರ್ಷ ಜುಲೈನಲ್ಲಿ ಅತಿ ಕಡಿಮೆ ಮಳೆ ಬ್ರಿಟನ್‌ನಲ್ಲಿ ದಾಖಲಾಗಿದೆ. ಯುರೋಪ್‌ನ ಉದ್ದಗಲಕ್ಕೂ ಹಲವು ದೇಶಗಳು ಬರಗಾಲದ ಅಂಚಿನಲ್ಲಿವೆ. ಬ್ರಿಟನ್‌ನಲ್ಲಿ ೮೪೦ ಮಂದಿ ಬಿಸಿಗಾಳಿಯ ತೀವ್ರತೆ ತಾಳಲಾರದೆ ಮೃತಪಟ್ಟಿದ್ದಾರೆ.
ನೂರು ವರ್ಷಕ್ಕೊಮ್ಮೆ ಬಿಸಿಗಾಳಿಯ ಅಬ್ಬರ: ಇಂಥ ಹವಾಮಾನ ವೈಪರೀತ್ಯದ ವಿದ್ಯಮಾನಗಳು ನೂರು ವರ್ಷಕ್ಕೊಮ್ಮೆ ಮರುಕಳಿಸುವ ಸಾಧ್ಯತೆಯನ್ನೂ ವಿಜ್ಞಾನಿಗಳು ಅಲ್ಲಗಳೆದಿಲ್ಲ. ಬ್ರಿಟನ್ ಮತ್ತು ಭಾರತದಲ್ಲಿ ಬೀಸಿದ ಬಿಸಿಗಾಳಿಯ ಪ್ರತಿಕೂಲ ಪರಿಣಾಮಗಳು ಹಲವು. ಭಾರತದಲ್ಲಿ ಸುಮಾರು ೯೦ ಮಂದಿ ಮೃತಪಟ್ಟ ವರದಿಯಿದ್ದರೆ, ಬ್ರಿಟನ್‌ನಲ್ಲಿ ಈಗಾಗಲೇ ತಿಳಿಸಿರುವಂತೆ ೮೪೦ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಬಳಲಿ ಆಸ್ಪತ್ರೆಗೆ ದಾಖಲಾದವರು ಇನ್ನಷ್ಟು ಮಂದಿ. ಭಾರತದಲ್ಲಿ ಈ ಬಿಸಿಗಾಳಿಯ ನೇರ ಪರಿಣಾಮದ ಜೊತೆಗೆ, ಪರೋಕ್ಷ ಪರಿಣಾಮವಾಗಿ ಗೋಧಿಯ ಇಳುವರಿ ಕುಸಿದಿದೆ. ಇದರಿಂದ ಗೋಧಿಯ ರಫ್ತು ಕಡಿತಗೊಳಿಸಲಾಗಿದೆ. ಮಾತ್ರವಲ್ಲ, ವಿದ್ಯುತ್‌ಗೆ ಬೇಡಿಕೆ ಗಣನೀಯ ವೃದ್ಧಿಸಿದ್ದರಿಂದ ಕಲ್ಲಿದ್ದಲು ಕೊರತೆಯೂ ಕಾಣಿಸಿಕೊಂಡಿತ್ತು.
ಸಹಾರಾ ಮರುಭೂಮಿಯಿಂದ ಹೆಚ್ಚಿದ ಬಿಸಿಗಾಳಿ: ಉತ್ತರ ಅಟ್ಲಾಂಟಿಕ್ ವಲಯದಲ್ಲಿ “ಅಜೋರ್ಸ್ ಹೈʼ ಎಂಬ ಹವಾಮಾನದ ಅಧಿಕ ಒತ್ತಡದ ಪರಿಣಾಮ ಸಹಾರಾ ಮರುಭೂಮಿಯ ಕಡೆಯಿಂದ ಈ ವರ್ಷ ಬಿಸಿಗಾಳಿಯ ತೀವ್ರತೆ ಹೆಚ್ಚಿತ್ತು. ಮರುಭೂಮಿಯ ಒಣಹವೆ ಒತ್ತರಿಸಿತ್ತು ಎಂದು ಅಧ್ಯಯನ ನಿರತ ವಿಜ್ಞಾನಿಗಳು ಹೇಳಿದ್ದಾರೆ. ದಕ್ಷಿಣ ಏಷ್ಯಾ ಮತ್ತು ಯುರೋಪ್ ಮಾತ್ರವಲ್ಲದೆ, ಅಮೆರಿಕದ ಬಹುತೇಕ ಭಾಗಗಳಲ್ಲಿ ಉಷ್ಣಾಂಶ ಏರಿರುವ ಬಗ್ಗೆ ಈ ಅಧ್ಯಯನ ವಿವರಿಸಿದೆ. ಸುಮಾರು ೮.೫ ಕೋಟಿ ಜನರ ಬದುಕು ಈಗಾಗಲೇ ಹವಾಮಾನ ವೈಪರೀತ್ಯದ ಬವಣೆಗೆ ಸಿಲುಕಿದೆ. ಬರಗಾಲ ಮತ್ತು ಅತಿವೃಷ್ಟಿ ಎರಡೂ ಬಗೆಯ ಅನಾಹುತಗಳು ಸಂಭವಿಸುತ್ತಿವೆ. ಇಂಥ ಹವಾಮಾನ ವೈಪರೀತ್ಯಗಳಿಂದ ಸಾರ್ವಜನಿಕರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ.
ಅಮೆರಿಕದಲ್ಲಿ ತಾಪಮಾನ ಹೆಚ್ಚಿಸಿದ “ಲಾ ನಿನಾʼ ಎಫೆಕ್ಟ್: ದಕ್ಷಿಣ ಅಮೆರಿಕದ ಉಷ್ಣವಲಯದ ಪಶ್ಚಿಮ ಕರಾವಳಿಯಲ್ಲಿ ಸಮುದ್ರದ ಮೇಲ್ಮೈ ನೀರನ್ನು ತಂಪಾಗಿಸುವ “ಲಾ ನಿನಾʼದ ಪರಿಣಾಮಗಳಲ್ಲಿ ಉಂಟಾಗಿರುವ ಬದಲಾವಣೆಗಳನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ತಂಪಾದ ಹವಾಮಾನವನ್ನು ತರುವ ʻಲಾ ನೀನʼ ಈ ವರ್ಷ ಬಿಸಿಗಾಳಿಗೆ ಕಾರಣವಾಗಿರುವುದು ಗಮನಾರ್ಹ. ಭಾರತ ಮತ್ತು ಯೂರೋಪ್‌ನ ತಾಪಮಾನ ಏರಿಕೆಗಳು ಒಂದಕ್ಕೊಂದು ಖಂಡಿತಾ ಸಂಬಂಧ ಹೊಂದಿವೆ. ಅಂಟಾರ್ಕಟಿಕ್‌ನಲ್ಲಿ ಉದಿಸಿದ ರೋಸ್ಬೀ ಮಾರುತಗಳು ಮಧ್ಯ ಏಷ್ಯಾ ಮತ್ತು ಯುರೋಪ್‌ವರೆಗೂ ಚಾಚಿದ್ದು ಒಂದು ಕಾರಣವಿರಬಹುದು. ಆದರೆ ದೊಡ್ಡ ಪ್ರಮಾಣದಲ್ಲಿ ಇಂಥ ವಿದ್ಯಮಾನಗಳು ಸಂಭವಿಸುತ್ತಿರುವುದು ಜಾಗತಿಕ ಹವಾಮಾನ ವೈಪರೀತ್ಯದಿಂದ ಎಂಬುದು ಖಚಿತ. ಭಾರತದಲ್ಲಿ ಮುಂಗಾರು ಪೂರ್ವ ಮಳೆ ಕಡಿಮೆಯಾಗಿದ್ದು, ಉಷ್ಣತೆಯ ಹೊಡೆತವನ್ನು ಇನ್ನಷ್ಟು ಹೆಚ್ಚಿಸುವುದಕ್ಕೆ ಬಿಸಿಗಾಳಿ ಕಾರಣವಾಗಿರಬಹುದುʼ ಎನ್ನುತ್ತಾರೆ ಭೂ ವಿಜ್ಞಾನ ಸಚಿವಾಲಯದ ಮಾಜಿ ಕಾರ್ಯದರ್ಶಿ ಎಂ. ರಾಜೀವನ್.
೨೦೧೧ರ ನಂತರ, ಅತಿ ಹೆಚ್ಚು ಬಿಸಿಗಾಳಿಯ ಹೊಡೆತವನ್ನು ಈ ವರ್ಷ ಭಾರತ ಎದುರಿಸಿದೆ. ಈ ವರ್ಷದಲ್ಲಿ ಹೆಚ್ಚಿನ ತಾಪಮಾನದ ೨೦೩ ದಿನಗಳನ್ನು ದೇಶ ದಾಖಲಿಸಿದೆ. ೧೦೨೧ರಲ್ಲಿ ೨೦೧ ದಿನಗಳು ಮತ್ತು ೨೦೧೯ರಲ್ಲಿ ೧೭೪ ದಿನ ತಾಪಮಾನ ಏರಿತ್ತು. ಅದರಲ್ಲೂ, ಹರಿಯಾಣ, ರಾಜಸ್ಥಾನ, ಪಂಜಾಬ್, ಉತ್ತರಾಖಂಡ ಮತ್ತು ದೆಹೆಲಿಯಲ್ಲಿ ಬಿಸಿಗಾಳಿಯ ಅಬ್ಬರ ಅತಿ ಹೆಚ್ಚಾಗಿತ್ತು ಎಂದು ಭೂವಿಜ್ಞಾನ ಸಚಿವಾಲಯ ತಿಳಿಸಿದೆ.