Site icon Vistara News

Cloudburst: ಮೇಘಸ್ಫೋಟದಿಂದ ಹಿಮಾಚಲ ಪ್ರದೇಶದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆ; 40ಕ್ಕೂ ಹೆಚ್ಚು ಮಂದಿ ನಾಪತ್ತೆ

Cloudburst

ಧರ್ಮಶಾಲಾ: ಹಿಮಾಚಲ ಪ್ರದೇಶ (Himachal Pradesh)ದ 3 ಜಿಲ್ಲೆಗಳಲ್ಲಿ ಕಂಡುಬಂದ ಮೇಘಸ್ಫೋಟ (Cloudburst)ದಿಂದ ಉಂಟಾದ ದಿಢೀರ್‌ ಪ್ರವಾಹ (Flash floods)ದಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಮಂಡಿ ಮತ್ತು ಶಿಮ್ಲಾ ಜಿಲ್ಲೆಗಳಲ್ಲಿ ಭಾನುವಾರ 4 ಮೃತದೇಹ ಪತ್ತೆಯಾಗಿದೆ. ಕಾಣೆಯಾದ 40ಕ್ಕೂ ಅಧಿಕ ಮಂದಿ ಇನ್ನೂ ಪತ್ತೆಯಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಜುಲೈ 31ರ ರಾತ್ರಿ ಹಿಮಾಚಲ ಪ್ರದೇಶದ ಕುಲ್ಲುವಿನ ನಿರ್ಮಾಂಡ್, ಸೈಂಜ್ ಮತ್ತು ಮಲಾನಾ, ಮಂಡಿಯ ಪಧರ್ ಮತ್ತು ಶಿಮ್ಲಾದ ರಾಂಪುರ ಉಪವಿಭಾಗದಲ್ಲಿ ಸರಣಿ ಮೇಘಸ್ಫೋಟ ಸಂಭವಿಸಿತ್ತು. ಕಳೆದ ಐದು ದಿನಗಳಲ್ಲಿ ಉಂಟಾದ ಮೇಘಸ್ಫೋಟ, ಪ್ರವಾಹ ಮತ್ತು ಭೂಕುಸಿತದಿಂದಾಗಿ ಹಿಮಾಚಲ ಪ್ರದೇಶದಲ್ಲಿನ ಒಟ್ಟು 87 ರಸ್ತೆಗಳ ಸಂಚಾರ ನಿರ್ಬಂಧಿಲಾಗಿದೆ.

ಕಾರ್ಯಾಚರಣೆ

ಯಂತ್ರೋಪಕರಣಗಳು, ಸ್ನಿಫರ್ ಶ್ವಾನದಳ, ಡ್ರೋನ್‌ ಮತ್ತು ಇತರ ಉಪಕರಣಗಳ ಮೂಲಕ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಅವಶೇಷಗಳಡಿ ಸಿಲುಕಿರುವವರ ಪತ್ತೆ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. ಶಿಮ್ಲಾ ಮತ್ತು ಕುಲ್ಲು ಗಡಿಯಲ್ಲಿರುವ ಸಮೇಜ್, ಧಾರಾ ಸರ್ದಾ ಮತ್ತು ಕುಶ್ವಾ ಎಂಬ ಮೂರು ಹಳ್ಳಿಗಳಲ್ಲಿ ದುರಂತ ಸಂಭವಿಸಿದಾಗಿನಿಂದ ವಿದ್ಯುತ್ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಹೀಗಾಗಿ ವಿದ್ಯುತ್‌ ವ್ಯವಸ್ಥೆಯನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಸೇನೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಐಟಿಬಿಪಿ, ಸಿಐಎಸ್ಎಫ್, ಹಿಮಾಚಲ ಪ್ರದೇಶ ಪೊಲೀಸ್ ಮತ್ತು ಗೃಹರಕ್ಷಕ ದಳದ 410 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ʼʼಹೆಚ್ಚುವರಿಯಾಗಿ ಇನ್ನೂ 4 ಜೆಸಿಬಿ ಯಂತ್ರಗಳನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಕಾರಣ ಶೋಧ ಕಾರ್ಯಕ್ಕೆ ವೇಗ ಸಿಕ್ಕಿದೆʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದೇ ಗ್ರಾಮದ 30 ಮಂದಿ ನಾಪತ್ತೆ

ರಾಂಪುರ ಉಪವಿಭಾಗದ ಸಮೇಜ್ ಗ್ರಾಮದ 30ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಬುಧವಾರ ರಾತ್ರಿ ಹಠಾತ್ ಪ್ರವಾಹ ಸಂಭವಿಸಿದಾಗಿನಿಂದ ಹಳ್ಳಿಗಳಲ್ಲಿ ವಿದ್ಯುತ್‌ ಇಲ್ಲ ಮತ್ತು ರಸ್ತೆಗಳು ಸಹ ಹಾನಿಗೊಳಗಾಗಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಜೈ ರಾಮ್ ಠಾಕೂರ್ ಸೋಮವಾರ ಸಮೇಜ್ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಸಂಸತ್ರಸ್ತರೊಂದಿಗೆ ಸಮಾಲೋಚನೆ ನಡೆಸಿದರು.

ಇದನ್ನೂ ಓದಿ: Cloudburst: ಮೇಘಸ್ಫೋಟದಿಂದ ಉತ್ತರ ಭಾರತದಲ್ಲಿ ಅಲ್ಲೋಲ ಕಲ್ಲೋಲ; ಏನಿದು ವಿದ್ಯಮಾನ? ಹೇಗೆ ಸಂಭವಿಸುತ್ತದೆ? ಇಲ್ಲಿದೆ ವಿವರ

ಪರಿಹಾರ ಧನ ಘೋಷಣೆ

ರಾಜ್ಯ ಸರ್ಕಾರವು ಶುಕ್ರವಾರ ಸಂತ್ರಸ್ತರಿಗೆ 50,000 ರೂ.ಗಳ ತಕ್ಷಣದ ಪರಿಹಾರವನ್ನು ಘೋಷಿಸಿದೆ ಮತ್ತು ಮುಂದಿನ ಮೂರು ತಿಂಗಳವರೆಗೆ ಗ್ಯಾಸ್, ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ನೀಡುವುದಾಗಿ ತಿಳಿಸಿದೆ. ಜತೆಗೆ ತಿಂಗಳಿಗೆ 5,000 ರೂ.ಗಳನ್ನು ಬಾಡಿಗೆಗೆ ನೀಡಲಾಗುವುದು ಎಂದು ಹೇಳಿದೆ. ಮಳೆಗಾಲ ಆರಂಭವಾದಾಗಿನಿಂದ ಜೂನ್ 27ರಿಂದ ಆಗಸ್ಟ್ 4ರವರೆಗೆ ಹಿಮಾಚಲ ಪ್ರದೇಶ ಸುಮಾರು 662 ಕೋಟಿ ರೂ.ಗಳ ನಷ್ಟ ಅನುಭವಿಸಿದೆ. ಮಳೆ ಸಂಬಂಧಿತ ಘಟನೆಗಳಲ್ಲಿ ಒಟ್ಟು 85 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.

Exit mobile version