Site icon Vistara News

Cloudburst: ಮೇಘಸ್ಫೋಟದಿಂದ ಉತ್ತರ ಭಾರತದಲ್ಲಿ ಅಲ್ಲೋಲ ಕಲ್ಲೋಲ; ಏನಿದು ವಿದ್ಯಮಾನ? ಹೇಗೆ ಸಂಭವಿಸುತ್ತದೆ? ಇಲ್ಲಿದೆ ವಿವರ

Cloudburst

ಬೆಂಗಳೂರು: ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮೇಘಸ್ಫೋಟ (Cloudburst) ಸಂಭವಿಸಿ ಧಾರಾಕಾರ ಮಳೆ ಸುರಿದು ಭಾರಿ ಅನಾಹುತ ಸಂಭವಿಸಿದೆ. ನದಿ ಅಪಾಯ ಮಟ್ಟ ಮೇರೆ ಮೀರಿ ಹರಿಯುತ್ತಿದ್ದು, ಕೆಲವರ ಸಾವಿಗೂ ಕಾರಣವಾಗಿದೆ. ಒಂದು ಗ್ರಾಮವಂತೂ ನಾಮಾವಶೇಷವಾಗಿದೆ. ಮೇಘಸ್ಫೋಟ ಇತ್ತೀಚಿನ ವರ್ಷಗಳಲ್ಲಿ ನಾವು ಪದೇ ಪದೆ ಕೇಳುವ ಶಬ್ದ. ಮೇಘಸ್ಫೋಟದಿಂದ ವ್ಯಾಪಕ ನಷ್ಟ ಎನ್ನುವ ಸುದ್ದಿ ಸಾಮಾನ್ಯ ಎಂಬಂತಾಗಿದೆ. ಹಾಗಾದರೆ ಮೇಘಸ್ಫೋಟ ಎಂದರೇನು? ಇದು ಹೇಗೆ ಸಂಭವಿಸುತ್ತದೆ? ಇದು ಯಾಕೆ ಅಪಾಯಕಾರಿ ? ಎನ್ನುವುದನ್ನು ನೋಡೋಣ.

ವ್ಯಾಪಕ ಮಳೆ

ಮೇಘಸ್ಫೋಟ ಎಂದರೆ ಇದು ಮಳೆಯೇ. ಆದರೆ ಸಾಮಾನ್ಯ ಮಳೆಗಿಂತ ಭಿನ್ನವಾಗಿರುತ್ತದೆ ಮತ್ತು ಶಕ್ತಿಶಾಲಿಯಾಗಿರುತ್ತದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, 20ರಿಂದ 30 ಸ್ಕ್ವೈರ್‌ ಕಿ.ಮೀ.ಯಲ್ಲಿ ಒಂದು ಗಂಟೆಯ ಅವಧಿಯಲ್ಲಿ 100 ಮಿ.ಲೀ. ಅಥವಾ ಅದಕ್ಕಿಂತ ಅಧಿಕ ಮಳೆ ಸುರಿದರೆ ಅದನ್ನು ಮೇಘಸ್ಫೋಟ ಎಂದು ಕರೆಯಲಾಗುತ್ತದೆ. ಅಂದರೆ ಒಂದು ಚಿಕ್ಕ ಪ್ರದೇಶದಲ್ಲಿ ಸ್ವಲ್ಪ ಹೊತ್ತಿನಲ್ಲಿ ಅಧಿಕ ಮಳೆ ಸುರಿಯುವ ವಿದ್ಯಾಮಾನ ಇದಾಗಿದೆ. ಹೀಗಾಗಿ ಇದು ಸುರಿದಾಗ ನಾಶ-ನಷ್ಟ ಅಧಿಕವಾಗಿರುತ್ತದೆ. ಇದು ಹೇಗೆ ಸಂಭವಿಸುತ್ತದೆ ಎನ್ನುವುದನ್ನು ನೋಡುವ ಮುನ್ನ ಮಳೆ ಸುರಿಯುವ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಬೇಕು.

ಮಳೆಯಲ್ಲಿ ಎರಡು ವಿಧ

ಭೂಮಿಯಲ್ಲಿನ ನೀರು ಉಷ್ಣತೆಯಿಂದ ನೀರು ಆವಿಯಾಗಿ ಮೇಲೇರುತ್ತದೆ. ಭೂಮಿಯ ಮೇಲ್ಮೈಗೆ ಹೋಗುತ್ತಿದ್ದ ಹಾಗೆ ತಂಪು ಹೆಚ್ಚಾಗುತ್ತ ಹೋಗುತ್ತದೆ. ನೀರಾವಿ ಮೇಲೆ ಹೋಗುತ್ತ ಮೋಡವಾಗಿ ಬದಲಾಗುತ್ತದೆ. ಇದು ಬಳಿಕ ಮಳೆಯಾಗಿ ಸುರಿಯುತ್ತದೆ. ಇದು ಮೊದಲ ವಿಧ.

ಇನ್ನು ಎರಡನೇ ವಿಧದ ಮಳೆ ಬೆಟ್ಟಗಳ ಸಹಾಯದಿಂದ ಸುರಿಯುತ್ತದೆ. ಅದು ಹೇಗೆಂದರೆ, ನೀರಾವಿ ಚಲಿಸುತ್ತಿರುವಾಗ ಬೆಟ್ಟ ಅಡ್ಡ ಬಂದರೆ ಅದು ನೇರ ಮೇಲಕ್ಕೆ ಸಾಗುತ್ತದೆ. ಹೀಗೆ ಮೇಲೇರಿ ಬಳಿಕ ಭೂಮಿಗೆ ಮಳೆಯ ರೂಪದಲ್ಲಿ ಸುರಿಯುತ್ತದೆ. ಸಾಮಾನ್ಯವಾಗಿ ಇಂತಹ ಮಳೆ ಮೇಘಸ್ಫೋಟವಾಗಿ ಬದಲಾಗುತ್ತದೆ (ಅಪರೂಪಕ್ಕೆ ಸಮತಲ ಭೂ ಭಾಗದಲ್ಲಿ ಮೇಘಸ್ಫೋಟ ನಡೆದರೂ ಹೆಚ್ಚಿನ ಹಾನಿ ಸಂಭವಿಸುವುದಿಲ್ಲ).

ಹೇಗೆ ಉಂಟಾಗುತ್ತದೆ?

ಏಕಕಾಲಕ್ಕೆ ನಿರಂತರವಾಗಿ ನೀರಾವಿ ಬೆಟ್ಟಕ್ಕೆ ಡಿಕ್ಕಿ ಹೊಡೆದು ಮೇಲೇರಿ ಮೋಡಗಳ ಸಮೂಹ ರೂಪುಗೊಳ್ಳುತ್ತದೆ. ಈ ಸಂದರ್ಭದಲ್ಲಿ ಕೆಳಗಿನಿಂದ ಬಿಸಿ ಗಾಳಿ ಮೇಲಕ್ಕೆ ಚಲಿಸಿ ಮೋಡಗಳಿಂದ ಉದುರುವ ನೀರ ಹನಿಗಳನ್ನು ಪುನಃ ಮೇಲಕ್ಕೇ ತಳ್ಳುತ್ತದೆ. ಹೀಗೆ ಮತ್ತೆ ಮೇಲಕ್ಕೆ ಮರಳುವ ನೀರ ಹನಿ ಉಳಿದವುಗಳ ಜೊತೆ ಸೇರಿ ದೊಡ್ಡದಾಗುತ್ತ ಹೋಗುತ್ತದೆ. ಕೆಲವು ಸಮಯಗಳ ಬಳಿಕ ಈ ಬಿಸಿ ಗಾಳಿ ಬೀಸುವುದು ನಿಲ್ಲುತ್ತದೆ. ಆಗ ಅದುವರೆಗೆ ಸಂಗ್ರಹವಾಗಿದ್ದ ನೀರ ಹನಿಗಳು ಮೇಲಕ್ಕೆ ತಳ್ಳುವ ಒತ್ತಡ ಇಲ್ಲದ ಕಾರಣ ಒಮ್ಮೆಲೆ ಕೆಳಗೆ ಸುರಿಯುತ್ತವೆ. ಅಧಿಕ ಸಾಂದ್ರತೆಯುಳ್ಳ, ಭಾರವುಳ್ಳ ನೀರ ಹನಿಗಳು ಒಮ್ಮೆಲೆ ಸುರಿಯುವುದರಿಂದ ಆ ಪ್ರತ್ಯೇಕ ಪ್ರದೇಶದಲ್ಲಿ ಸ್ವಲ್ಪ ಹೊತ್ತಿನಲ್ಲೇ ಅಧಿಕ ಮಳೆ ಸುರಿದಂತಾಗುತ್ತದೆ.

ಇನ್ನೊಂದು ವಿಧ

ಮೇಘಸ್ಫೋಟ ಇನ್ನೊಂದು ವಿಧದಲ್ಲೂ ಸಂಭವಿಸುವ ಸಾಧ್ಯತೆ ಇದೆ. ಅತ್ಯಧಿಕ ಉಷ್ಣತೆ, ನೀರಿನಾಂಶ ಹೊಂದಿರುವ ವಾಯು ಮತ್ತು ಕಡಿಮೆ ಉಷ್ಣತೆ ಹೊಂದಿರುವ ವಾಯು ಪರಸ್ಪರ ಡಿಕ್ಕಿ ಹೊಡೆದು ಮೋಡ ರೂಪುಗೊಂಡು ಮೇಘಸ್ಫೋಟ ಸಂಭವಿಸುತ್ತದೆ. ಇದು ಅಪರೂಪಕ್ಕೆ ನಡೆಯುವ ವಿದ್ಯಾಮಾನ ಎನ್ನುತ್ತಾರೆ ತಜ್ಞರು.

ಯಾಕಾಗಿ ಅಪಾಯಕಾರಿ?

ಮೇಘಸ್ಫೋಟದಿಂದ ಇದ್ದಕ್ಕಿದ್ದ ಹಾಗೆ ಲಕ್ಷಗಟ್ಟಲೆ ಲೀಟರ್‌ ನೀರು ಹರಿದು ಪ್ರವಾಹ ಉಂಟಾಗುತ್ತದೆ. ಅನಿರೀಕ್ಷಿತವಾಗಿ ಇದು ಉಂಟಾಗುವುದರಿಂದ ರಕ್ಷಣಾ ಕಾರ್ಯ ನಡೆಸಲೂ ಸಾಧ್ಯವಾಗದೆ ಅಪಾಯ ಅಂಭವಿಸುತ್ತದೆ. ಅದರಲ್ಲೂ ಸೂಕ್ಷ್ಮ ಭೂ ಪ್ರದೇಶಗಳಲ್ಲಿ ಗುಡ್ಡ ಕುಸಿತದಂತಹ ಅವಘಡ ಸಂಭವಿಸುತ್ತದೆ.

ನಿಯಂತ್ರಣ ಸಾಧ್ಯವೆ?

ಮೇಘಸ್ಫೋಟ ಎನ್ನುವುದು ನಿಸರ್ಗದ ಸಾಮಾನ್ಯ ಪ್ರಕ್ರಿಯೆಯಾದರೂ ಇತ್ತೀಚೆಗೆ ಹೆಚ್ಚಾಗಲು ನಮ್ಮ ಅತಿಯಾದ ಚಟುವಟಿಕೆಗಳೇ ಕಾರಣ ಎನ್ನುವುದನ್ನು ಗಮನಿಸಬೇಕು. ಪ್ರಕೃತಿಯಲ್ಲಿನ ಬದಲಾವಣೆ ಇದು ಹೆಚ್ಚಾಗುವಂತೆ ಮಾಡಿದೆ. ವಾತಾವರಣದ ಉಷ್ಣಾಂಶ ಹೆಚ್ಚಾಗಿ ನೀರಾವಿ ಪ್ರಮಾಣ ವೃದ್ಧಿಸಿದೆ. ಇದು ಅಧಿಕ ಪ್ರಮಾಣದ ಮೇಘಸ್ಫೋಟಕ್ಕೆ ಕಾರಣವಾಗಿದೆ ಎನ್ನುತ್ತಾರೆ ಹವಾಮಾನ ತಜ್ಞರು.

ಇದನ್ನೂ ಓದಿ: Wayanad Landslide: ಭೂಕುಸಿತದ ಹಾಟ್‌ಸ್ಪಾಟ್‌ಗಳಲ್ಲಿ ಕಾಮಗಾರಿಗೆ ಅನುಮತಿ ನೀಡಿದ್ದೇಕೆ? ಹಸಿರು ನ್ಯಾಯ ಮಂಡಳಿ ಪ್ರಶ್ನೆ

Exit mobile version