ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ಹಗರಣ (Delhi Liquor Policy Case:) ನಡೆದಿದೆ ಎನ್ನಲಾದ ಪ್ರಕರಣದ ಉರುಳು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಕೊರಳಿಗೂ ಸುತ್ತುವ ಸಾಧ್ಯತೆಗಳಿವೆ. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 2ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಇ.ಡಿ (Enforcement Directorate) ಸಮನ್ಸ್ ಜಾರಿ ಮಾಡಿದೆ.
ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ 2023ರ ಫೆಬ್ರವರಿಯಲ್ಲಿ ಆಗ ಉಪ ಮುಖ್ಯಮಂತ್ರಿ ಆಗಿದ್ದ ಮನೀಶ್ ಸಿಸೋಡಿಯಾ ಹಾಗೂ ಆಪ್ ನಾಯಕ ಸಂಜಯ್ ಸಿಂಗ್ ಅವರನ್ನು ಅಕ್ಟೋಬರ್ 4ರಂದು ಇ.ಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೆ, ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದ ಬೆನ್ನಲ್ಲೇ, ಅರವಿಂದ್ ಕೇಜ್ರಿವಾಲ್ ಅವರಿಗೆ ಇ.ಡಿ ಸಮನ್ಸ್ ಜಾರಿಗೊಳಿಸಿದೆ.
ED (Enforcement Directorate) summons Delhi CM and AAP national convener Arvind Kejriwal, asking him to appear before them on 2nd November in connection with the Delhi excise policy case.
— ANI (@ANI) October 30, 2023
(File photo) pic.twitter.com/ZAyJsOPVZa
ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಅಕ್ರಮ: ಆಪ್ ಸಂಸದ ರಾಘವ್ ಚಡ್ಡಾಗೆ ಶುರುವಾಯ್ತು ಸಂಕಷ್ಟ
ಖಂಡಿಸಿದ ಆಪ್ ಸಚಿವ
ಅರವಿಂದ್ ಕೇಜ್ರಿವಾಲ್ ಅವರಿಗೆ ಇ.ಡಿ ಸಮನ್ಸ್ ಜಾರಿಗೊಳಿಸಿರುವುದನ್ನು ಸಚಿವ ಸೌರಭ್ ಭಾರದ್ವಾಜ್ ಖಂಡಿಸಿದ್ದಾರೆ. “ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಗಳ ಮೂಲಕ ಕೇಂದ್ರ ಸರ್ಕಾರ ಇಂತಹ ಕುತಂತ್ರ ಮಾಡುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಲು ಎಲ್ಲ ಕುತಂತ್ರ ಮಾಡಲಾಗುತ್ತಿದೆ” ಎಂದು ದೂರಿದ್ದಾರೆ. ಆಪ್ ಸಚಿವರು, ನಾಯಕರ ಬಂಧನವಾದಾಗಲೂ ಆಪ್ ಇದೇ ಆರೋಪ ಮಾಡಿತ್ತು.
#WATCH | Delhi: On ED summoning CM Arvind Kejriwal, Delhi Minister Saurabh Bhardwaj says, "As per the news that the Central Government's ED has sent summon to Delhi CM, it gets clear that the Centre has only one aim to somehow finish AAP. They are not leaving a stone unturned in… pic.twitter.com/QHvgBbHrts
— ANI (@ANI) October 30, 2023
ಏನಿದು ಪ್ರಕರಣ?
ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವು ಅಬಕಾರಿ ನೀತಿ 2021-22 ಜಾರಿಗೆ ತಂದಿತ್ತು. ಖಾಸಗಿ ಸಂಸ್ಥೆಗಳು ಚಿಲ್ಲರೆ ಮದ್ಯ ಮಾರಾಟ ವಲಯಕ್ಕೆ ಪ್ರವೇಶಿಸಲು ಅನುಕೂಲ ಮಾಡಿಕೊಡುವ ದಿಸೆಯಲ್ಲಿ ನೀತಿ ಜಾರಿಗೆ ತರಲಾಗಿದ್ದು, ಇದಕ್ಕಾಗಿ ಭಾರಿ ಪ್ರಮಾಣದ ಹಣ ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ನೀತಿಯು ವಿವಾದಕ್ಕೆ ಕಾರಣವಾಗುತ್ತಲೇ ಅರವಿಂದ್ ಕೇಜ್ರಿವಾಲ್ ಸರ್ಕಾರವು ವಾಪಸ್ ಪಡೆದಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಸೇರಿ ಹಲವರನ್ನು ಬಂಧಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಅವರನ್ನೂ ಇ.ಡಿ ವಿಚಾರಣೆ ನಡೆಸಿದೆ.