ಮುಂಬೈ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆ ಖಂಡಿಸಿ ಹಾಗೂ ಸಾವರ್ಕರ್ ಅವರಿಗೆ ಗೌರವ ಸಲ್ಲಿಸುವ ನಿಮಿತ್ತ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದಲ್ಲಿ ಠಾಣೆಯಲ್ಲಿ ‘ಸಾವರ್ಕರ್ ಗೌರವ ಯಾತ್ರಾ’ (Savarkar Gaurav Yatra) ಕೈಗೊಳ್ಳಲಾಗಿದೆ. ಬಿಜೆಪಿ-ಶಿವಸೇನೆ ವತಿಯಿಂದ ಠಾಣೆಯಲ್ಲಿ ಬೃಹತ್ ಯಾತ್ರೆ ನಡೆಸಲಾಗಿದ್ದು, ಇದರ ನೇತೃತ್ವವನ್ನು ಶಿಂಧೆ ಅವರೇ ವಹಿಸಿಕೊಂಡಿದ್ದಾರೆ.
ಥಾಣೆಯಲ್ಲಿರುವ ರಾಮ್ ಗಣೇಶ್ ಗಡ್ಕರಿ ರಂಗಯತನ್ ಆಡಿಟೋರಿಯಂನಲ್ಲಿ ಸಾವರ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರೊಂದಿಗೆ ಗೌರವ ಯಾತ್ರೆಗೆ ಚಾಲನೆ ನೀಡಲಾಯಿತು. ಯಾತ್ರೆ ಭಾಗವಹಿಸಿದ ನೂರಾರು ಜನ ‘ನಾನೂ ಸಾವರ್ಕರ್’ ಎಂಬ ಬರಹವುಳ್ಳ ಕೇಸರಿ ಟೋಪಿ ಧರಿಸಿದ್ದರು. ರಾಹುಲ್ ಗಾಂಧಿ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ, “ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ, ಗಾಂಧಿ. ಗಾಂಧಿಗಳು ಕ್ಷಮೆಯಾಚಿಸಲ್ಲ” ಎಂದಿದ್ದರು. ಇವರ ಹೇಳಿಕೆಯನ್ನು ಖಂಡಿಸಿ ಯಾತ್ರೆ ಕೈಗೊಳ್ಳಲಾಗಿದೆ.
ರಾಹುಲ್ ವಿರುದ್ಧ ಶಿಂಧೆ ವಾಗ್ದಾಳಿ
ಗೌರವ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಏಕನಾಥ್ ಶಿಂಧೆ, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. “ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವುದು ಕಾಂಗ್ರೆಸ್‌ಗೆ ರೂಢಿಯಾಗಿದೆ. ಇದು ದೇಶದ ಪ್ರತಿಯೊಬ್ಬ ನಾಗರಿಕನಿಗೆ ಮಾಡುವ ಅವಮಾನವಾಗಿದೆ. ರಾಹುಲ್ ಗಾಂಧಿ ಅವರಂಥವರು ಸಾವರ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡುವುದು ಖಂಡನೀಯ” ಎಂದರು.
ಹೀಗೆ ನಡೆಯಿತು ಸಾವರ್ಕರ್ ಗೌರವ ಯಾತ್ರೆ
ಅಘಾಡಿಯೊಳಗೇ ಅಸಮಾಧಾನ
ಸಾವರ್ಕರ್ ಕುರಿತು ರಾಹುಲ್ ಗಾಂಧಿ ನೀಡಿರುವುದಕ್ಕೆ ಮಹಾ ವಿಕಾಸ್ ಅಘಾಡಿಯಲ್ಲಿಯೇ ಭಿನ್ನಾಭಿಪ್ರಾಯವಿದೆ. ರಾಹುಲ್ ಹೇಳಿಕೆಗೆ ಇತ್ತೀಚೆಗೆ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮತ್ತು ಶಿವಸೇನೆಯ ಉದ್ಧವ್ ಠಾಕ್ರೆ ಬಣ ಮೈತ್ರಿಕೂಟವೇ ಆಗಿದ್ದರೂ ಇದೀಗ ರಾಹುಲ್ ಗಾಂಧಿಯವರ ಸಾವರ್ಕರ್ ಹೇಳಿಕೆ, ಉದ್ಧವ್ ಠಾಕ್ರೆಯಲ್ಲಿ ಸಿಟ್ಟು ತರಿಸಿದೆ. ಹೀಗೆ ನೀವು ಸಾವರ್ಕರ್ ಅವರನ್ನು ತೆಗಳುತ್ತಿದ್ದರೆ, ನಮ್ಮ ಮೈತ್ರಿಯಲ್ಲಿ ಬಿರುಕು ಸೃಷ್ಟಿಯಾಗಬಹುದು’ ಎಂದು ಎಚ್ಚರಿಕೆಯನ್ನೂ ನೀಡಿದ್ದರು. ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಕೂಡ, “ವೀರ ಸಾವರ್ಕರ್ ಅವರ ಕೊಡುಗೆಯನ್ನು ಅಲ್ಲಗಳೆಯಲು ಆಗದು” ಎಂದಿದ್ದಾರೆ.
2019ರಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷ, ತನ್ನ ಬಹುಕಾಲದ ಮೈತ್ರಿಪಕ್ಷವಾದ ಬಿಜೆಪಿಯನ್ನು ತೊರೆದು, ಕಾಂಗ್ರೆಸ್ ಮತ್ತು ಎನ್ಸಿಪಿಯೊಟ್ಟಿಗೆ ಸೇರಿ ಮಹಾ ವಿಕಾಸ್ ಅಘಾಡಿಯನ್ನು ರಚಿಸಿಕೊಂಡಿತು. ಉದ್ಧವ್ ಠಾಕ್ರೆ ತಮ್ಮ ಆಸೆಯಂತೆ ಮುಖ್ಯಮಂತ್ರಿಯೂ ಆದರು. ಆದರೆ ಮೂರು ಪಕ್ಷಗಳು ಸೈದ್ಧಾಂತಿಕವಾಗಿ ಎಂದಿಗೂ ಒಂದಾಗಲೇ ಇಲ್ಲ. ಈಗ ಶಿವಸೇನೆಯಲ್ಲೇ ಎರಡು ಬಣವಾಗಿ, ಏಕನಾಥ ಶಿಂಧೆ ಬಣ ಬಿಜೆಪಿಯೊಟ್ಟಿಗೆ ಸೇರಿದೆ. ಆದರೆ ಶಿವಸೇನೆ ಉದ್ಧವ್ ಠಾಕ್ರೆ ಬಣ, ಎನ್‌ಸಿಪಿ/ಕಾಂಗ್ರೆಸ್ನೊಂದಿಗೆ ಸ್ನೇಹ ಮುಂದುವರಿಸಿದೆ.