ರಾಂಚಿ: ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್ ಯಾವುದೇ ಕ್ಷಣದಲ್ಲಾದರೂ ಅನರ್ಹಗೊಳ್ಳಬಹುದು. ಇದು ಸಹಜವಾಗಿಯೇ ಅಲ್ಲಿನ ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಮತ್ತು ಆರ್ಜೆಡಿ ಮೈತ್ರಿ ಸರ್ಕಾರಕ್ಕೆ ಆತಂಕ ತಂದೊಡ್ಡಿದೆ. ಹೇಮಂತ್ ಸೊರೆನ್ ಅವರು ತಮ್ಮ ಒಡೆತನದ ಕಲ್ಲು ಗಣಿಯ ಗುತ್ತಿಗೆಯನ್ನು ತಾವೇ, ಅಕ್ರಮವಾಗಿ ವಿಸ್ತರಿಸಿಕೊಂಡಿದ್ದಾರೆ ಎಂದು ಬಿಜೆಪಿ ಕೊಟ್ಟಿದ್ದ ಆರೋಪವನ್ನು ಪರಿಗಣಿಸಿ, ಚುನಾವಣಾ ಆಯೋಗ ತನಿಖೆ ನಡೆಸಿತ್ತು. ಈ ತನಿಖೆಯಲ್ಲಿ ಆರೋಪ ಸಾಬೀತಾದ ಕಾರಣ ಸೊರೆನ್ರನ್ನು ಅನರ್ಹಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿತ್ತು. ಈ ಅನರ್ಹತೆ ಆದೇಶ ಸಿದ್ಧವಾಗಿದ್ದು ಯಾವುದೇ ಕ್ಷಣದಲ್ಲೂ ಅಧಿಕೃತವಾಗಿ ಹೊರಬೀಳಬಹುದು.
ಹೀಗೆ ಜಾರ್ಖಂಡ್ನಲ್ಲಿ ಮೈತ್ರಿ ಸರ್ಕಾರದ ರಾಜಕೀಯ ಸ್ಥಿತಿ ಅಲ್ಲಾಡುತ್ತಿರುವ ಹೊತ್ತಲ್ಲಿ, ಕುದುರೆ ವ್ಯಾಪಾರದ ಭಯವೂ ಕಾಡುತ್ತಿದೆ. ಯುಪಿಎ ಒಕ್ಕೂಟದ ಶಾಸಕರು-ಸಚಿವರು ಪಕ್ಷ ಬದಲಾಯಿಸದಂತೆ ತಡೆಯಲು, ಹೇಮಂತ್ ಸೊರೆನ್, ಅವರನ್ನೆಲ್ಲ ಖುಂತಿ ಜಿಲ್ಲೆಯ ಲತರಾತೂ ಜಲಾಶಯಕ್ಕೆ ಕರೆದುಕೊಂಡು ಹೋಗಿದ್ದಾರೆ. ಇಂದು ಬೆಳಗ್ಗೆ ಹಲವು ಶಾಸಕರು ಗಂಟುಮೂಟೆ ಕಟ್ಟಿಕೊಂಡು, ಮುಖ್ಯಮಂತ್ರಿ ಸೊರೆನ್ ನಿವಾಸಕ್ಕೆ ತಲುಪಿದ್ದರು. ಅಲ್ಲಿಂದ ಅವರೆಲ್ಲ ಛತ್ತೀಸ್ಗಢ್ಗೆ ಹೋಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ನಂತರ ಪ್ಲ್ಯಾನ್ ಬದಲಾಯಿಸಿದ್ದಾರೆ. ಹೇಮಂತ್ ಸೊರೆನ್ ಅವರೇ ಖುದ್ದಾಗಿ ಎಲ್ಲರನ್ನೂ ಬಸ್ನಲ್ಲಿ ಲತರಾತೂ ಜಲಾಶಯಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ಗೆಸ್ಟ್ಹೌಸ್ನಲ್ಲಿ ಇವರೆಲ್ಲ ತಂಗಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇಂದು ರಾತ್ರಿಯ ಹೊತ್ತಿಗೆ ಶಾಸಕರೆಲ್ಲ ವಾಪಸ್ ರಾಂಚಿಗೆ ಬರಬಹುದು ಎಂದು ಹೇಳಲಾಗಿದೆ.
ಹೇಮಂತ್ ಸೊರೆನ್ರನ್ನು ಅನರ್ಹಗೊಳಿಸಲು ಚುನಾವಣಾ ಆಯೋಗ ಶಿಫಾರಸ್ಸು ಮಾಡಿದ್ದು, ರಾಜ್ಯಪಾಲರು ಆದೇಶ ಸಿದ್ಧ ಮಾಡಿಟ್ಟಿದೆ ಎಂದು ಹೇಳಲಾಗಿದೆ. ಆದರೆ ಇವತ್ತಿನವರೆಗೆ ನನಗೆ ಯಾವುದೇ ಸೂಚನೆ ಬಂದಿಲ್ಲ ಎಂದು ನಿನ್ನೆಯಷ್ಟೇ ಹೇಳಿದ್ದರು. ಹಾಗೊಮ್ಮೆ ಸೊರೆನ್ ಅನರ್ಹರಾದರೆ ಅವರ ಪತ್ನಿಯೇ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆಗಳು ದಟ್ಟವಾಗಿವೆ.
ಇದನ್ನೂ ಓದಿ: ಹೇಮಂತ್ ಸೊರೆನ್ ಸಿಎಂ ಗಾದಿ ಮೇಲೆ ತೂಗುಗತ್ತಿ; ದೊಡ್ಡ ಬ್ಯಾಗ್ನೊಂದಿಗೆ ರಾಜ್ಯ ಬಿಟ್ಟು ಹೊರಟ ಶಾಸಕರು!