Site icon Vistara News

Mango Gift: ಕಹಿ ಮರೆತು ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ಮಾವಿನ ಹಣ್ಣು ಕಳುಹಿಸಿದ ‘ಮಮತಾ’ಮಯಿ ದೀದಿ!

CM Mamata Banerjee and PM Narendra Modi

ಕೋಲ್ಕೊತಾ: ಪಶ್ಚಿಮ ಬಂಗಾಳ ಸಿಎಂ ಎಮಮತಾ ಬ್ಯಾನರ್ಜಿ (Mamata Banerjee) ಅವರು ಪ್ರತಿ ವರ್ಷ ಮಾವಿನ ಹಣ್ಣಿನ ಸೀಸನ್‌ನಲ್ಲಿ ಬಂಗಾಳದ ವಿಶೇಷ ಮಾವಿನ ಹಣ್ಣುಗಳನ್ನು ತಮ್ಮ ಸ್ನೇಹಿತರು ರಾಜಕೀಯ ಎದುರಾಳಿಗಳಿಗೂ ಕಳುಹಿಸಿ ಕೊಡುತ್ತಾರೆ. ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ವಿಷಯವನ್ನು ಪ್ರಸ್ತಾಪಿಸಿ, ಮಮತಾರಿಂದ ತೀವ್ರ ಟೀಕೆಯನ್ನೂ ಎದುರಿಸಿದ್ದರು. ಅದೆಲ್ಲಾ ಈಗ ಕತೆ. ಅಭಿಮಾನಿಗಳಿಂದ ದೀದಿ ಎಂದು ಕರೆಯಿಸಿಕೊಳ್ಳುವ ಮಮತಾ ಬ್ಯಾನರ್ಜಿ ಅವರು ಈಗ ಪ್ರಧಾನಿಗೆ ಪ್ರೀತಿಯಿಂದ ಮಾವಿನ ಹಣ್ಣುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ(Mango Gift).

ಈ ಹಿಂದೆಯೂ ಉಭಯ ರಾಷ್ಟ್ರಗಳ ನಡುವಿನ ಸುಲಭ ರಾಜತಾಂತ್ರಿಕತೆಗಾಗಿ ಮಾವಿನ ಹಣ್ಣುಗಳನ್ನು ಕಾಣಿಕೆಯಾಗಿ ನೀಡುವ ಸಂಪ್ರದಾಯವಿದೆ. ಜವಾಹರ್ ಲಾಲ್ ನೆಹರು ಅವರಿಂದ ಹಿಡಿದು ಮಾವೋ ಜೆಡಾಂಗ್, ಶೇಖ್ ಹಸೀನಾ ಅವರಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿ ಅವರವರೆಗೂ ಈ ಮಾವು ಉಡುಗೊರೆ ಸಂಪ್ರದಾಯವು ಮುಂದುವರಿದಿದೆ.

ಪಶ್ಚಿಮ ಬಂಗಾಳದಲ್ಲಿ ಸದ್ಯದಲ್ಲೇ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಲಿದೆ. ಈಗಾಗಲೇ ಟಿಎಂಸಿ ಮತ್ತು ಬಿಜೆಪಿ ನಡುವೆ ಸಾಕಷ್ಟು ಸಂಘರ್ಷ ಶುರುವಾಗಿದೆ. ಈ ರಾಜಕೀಯ ಬಿಸಿಯನ್ನು ತಣ್ಣಗಾಗಿಸಬೇಕಿದ್ದರೆ ಹಿಮಸಾಗರ್ ಮಾವು ಉಡುಗೊರೆ ಕೆಲಸ ಮಾಡುತ್ತಾ? ಈ ಪ್ರಶ್ನೆಗೆ ಉತ್ತರವಿಲ್ಲವಾದರೂ, ಮಮತಾ ಬ್ಯಾನರ್ಜಿ ಅವರು, ಪಶ್ಚಿಮ ಬಂಗಾಳದ ಹೆಸರಾಂತ ಹಿಮಸಾಗರ್, ಫಜ್ಲಿ, ಲಾಂಗ್ರಾ ಮತ್ತು ಲಕ್ಷ್ಮಣ್ ಭೋಗ್ ಮಾವಿನ ಹಣ್ಣುಗಳನ್ನು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಇತರ ಎಲ್ಲ ನಾಯಕರಿಗೆ ಕಳುಹಿಸಿ ಕೊಟ್ಟಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ಮಮತಾ ಅವರು ಮಾವಿನ ಹಣ್ಣುಗಳನ್ನು ಕಳುಹಿಸುತ್ತಿರುವುದು ಇದೇ ಮೊದಲ್ಲ. 12 ವರ್ಷಗಳಿಂದಲೂ ಅವರು ಈ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಮಮತಾ ಬ್ಯಾನರ್ಜಿ ಅವರು ಕಳೆದ ವರ್ಷ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಮಾವಿನ ಹಣ್ಣುಗಳನ್ನು ಕಳುಹಿಸಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಮೈತ್ರಿಯಿಲ್ಲ, ಏಕಾಂಗಿ ಸ್ಪರ್ಧೆ; ಸ್ಪಷ್ಟಪಡಿಸಿದ ಮಮತಾ ಬ್ಯಾನರ್ಜಿ

2019ರ ಚುನಾವಣೆ ವೇಳೆ ಅಕ್ಷಯ್ ಕುಮಾರ್‌ ಅವರಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಪ್ರತಿಪಕ್ಷಗಳಲ್ಲಿ ಅನೇಕ ಸ್ನೇಹಿತರಿದ್ದಾರೆ. ಮಮತಾ ದೀದಿ ಈಗಲೂ ನನಗೆ ಪ್ರತಿ ವರ್ಷ ಒಂದೋ, ಎರಡೋ ಕುರ್ತಾಗಳನ್ನು ಕಳುಹಿಸುತ್ತಾರೆಂದರೆ ನೀವು ನಂಬುವುದಿಲ್ಲ ಎಂದು ಹೇಳಿದ್ದರು.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version