Site icon Vistara News

ಸಿಎಂ ಹುದ್ದೆ ಅಲಂಕಾರಿಕ ಅಲ್ಲ; 24×7 ಜನರಿಗೆ ಲಭ್ಯ ಇರಬೇಕು; ರಾಜೀನಾಮೆ ನೀಡದ ಕೇಜ್ರಿವಾಲ್‌ಗೆ ಕೋರ್ಟ್‌ ಚಾಟಿ

Arvind Kejriwal

ED names Arvind Kejriwal, AAP as accused in Delhi excise policy case

ನವದೆಹಲಿ: ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಆದರೆ, ಅರವಿಂದ್‌ ಕೇಜ್ರಿವಾಲ್‌ ಅವರು ಜೈಲಿನಿಂದಲೇ ಆಡಳಿತ ನಡೆಸುತ್ತಿದ್ದು, ರಾಜೀನಾಮೆ ನೀಡುತ್ತಿಲ್ಲ. ಇದರ ಬೆನ್ನಲ್ಲೇ, “ಮುಖ್ಯಮಂತ್ರಿ ಸ್ಥಾನ ಎಂಬುದು ಔಪಚಾರಿಕ ಅಲ್ಲ. ಸಿಎಂ ಆದವರು 24/7 ಜನರಿಗೆ ಲಭ್ಯ ಇರಬೇಕು” ಎಂದು ದೆಹಲಿ ಹೈಕೋರ್ಟ್‌ (Delhi High Court) ಚಾಟಿ ಬೀಸಿದೆ.

ನೂತನ ಶೈಕ್ಷಣಿಕ ವರ್ಷ ಆರಂಭವಾದರೂ ಶಾಲೆಗಳಿಗೆ ಶೈಕ್ಷಣಿಕ ಉಪಕರಣಗಳು ಸೇರಿ ಹಲವು ಸೌಲಭ್ಯಗಳನ್ನು ನೀಡುತ್ತಿಲ್ಲ ಎಂಬುದಾಗಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯವನ್ನು ವಿಚಾರಣೆ ನಡೆಸುವ ವೇಳೆ ನ್ಯಾಯಪೀಠವು, ಕೇಜ್ರಿವಾಲ್‌ ಅವರು ಜೈಲಿನಿಂದಲೇ ಆಡಳಿತ ನಡೆಸುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿತು. “ಯಾವುದೇ ರಾಜ್ಯದ ಮುಖ್ಯಮಂತ್ರಿಯಾದವರು ಜನರಿಗೆ ಲಭ್ಯ ಇರಬೇಕು. ಅದರಲ್ಲೂ, ದೆಹಲಿಯಂತಹ ದೊಡ್ಡ ನಗರದಲ್ಲಿ ಮುಖ್ಯಮಂತ್ರಿಯಾದವರು ಯಾವಾಗಲೂ ಜನರಿಗೆ ಲಭ್ಯ ಇರಬೇಕು” ಎಂದು ತಿಳಿಸಿತು.

“ಮುಖ್ಯಮಂತ್ರಿ ಹುದ್ದೆ ಎಂಬುದು ಔಪಚಾರಿಕ ಅಲ್ಲ. ಪ್ರವಾಹ, ಅಗ್ನಿ ದುರಂತ ಸೇರಿ ಯಾವುದೇ ತುರ್ತು ಸಂದರ್ಭದಲ್ಲಿ ಮುಖ್ಯಮಂತ್ರಿಯಾದವರು ಜನರಿಗೆ ಲಭ್ಯ ಇರಬೇಕು. ಬಂಧನದ ಬಳಿಕ ಅರವಿಂದ್‌ ಕೇಜ್ರಿವಾಲ್‌ ಅವರು ರಾಜೀನಾಮೆ ನೀಡುವುದು, ಬಿಡುವುದು ಅವರ ವೈಯಕ್ತಿಕ ತೀರ್ಮಾನ. ಆದರೆ, ಸಿಎಂ ಸ್ಥಾನದಲ್ಲಿದ್ದವರು ಜನರಿಗೆ ಸಿಗುವಂತಿರಬೇಕು. ಕ್ಷಿಪ್ರವಾಗಿ ತೀರ್ಮಾನ ತೆಗೆದುಕೊಳ್ಳುವಂತಿರಬೇಕು” ಎಂದಿತು.

ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ.5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಅರವಿಂದ್‌ ಕೇಜ್ರಿವಾಲ್‌ ಮಾತ್ರವಲ್ಲ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರನ್ನೂ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ದೆಹಲಿ ಜಲ ಮಂಡಳಿ ಗುತ್ತಿಗೆ ಮಂಜೂರು ಮಾಡುವಾಗ ಕೂಡ ಅಕ್ರಮ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಜಾರಿ ನಿರ್ದೇಶನಾಲಯವು ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಿದೆ. ಮತ್ತೊಂದೆಡೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇ.ಡಿ ಸಲ್ಲಿಸಿದ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಈಗಾಗಲೇ ಜಾಮೀನು ಸಿಕ್ಕಿದೆ. ಇದರಿಂದ ಅವರು ತಾತ್ಕಾಲಿಕವಾಗಿ ರಿಲೀಫ್‌ ಪಡೆದಿದ್ದರು. ಆದರೆ, ಈಗ ಬಂಧನದಿಂದ ರಕ್ಷಣೆಗೆ ನೀಡದ ಕಾರಣ ಅವರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ: Arvind Kejriwal: ಕೇಜ್ರಿವಾಲ್‌, ಕವಿತಾ ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

Exit mobile version