Site icon Vistara News

Tamil Nadu | ಸರ್ಕಾರದ ಭಾಷಣ ಮಾತ್ರ ಪರಿಗಣಿಸಲು ಸಿಎಂ ಸ್ಟಾಲಿನ್ ನಿರ್ಣಯ, ಸಭೆಯಿಂದಲೇ ಹೊರ ನಡೆದ ರಾಜ್ಯಪಾಲ!

R N Ravi @ Tamil Nadu

ಚೆನ್ನೈ: ತಮಿಳುನಾಡು (Tamil Nadu) ರಾಜ್ಯಪಾಲ ಆರ್ ಎನ್ ರವಿ (R N Ravi) ಹಾಗೂ ಆಡಳಿತ ಪಕ್ಷ ಡಿಎಂಕೆ ನಡುವಿನ ಸಂಘರ್ಷವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸೋಮವಾರ ಆರಂಭವಾದ ತಮಿಳುನಾಡು ವಿಧಾನ ಮಂಡಳ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಿದರು. ಆದರೆ, ಸರ್ಕಾರವು ಸಿದ್ಧಪಡಿಸಿದ ಭಾಷಣದ ಕೆಲವು ಭಾಗವನ್ನು ಕೈಬಿಟ್ಟು ತಮ್ಮದೇ ಆದ ಭಾಷಣ ಮಾಡಿದ್ದು ಸಂಘರ್ಷಕ್ಕೆ ಕಾರಣವಾಗಿದೆ. ರಾಜ್ಯಪಾಲರ ನಡೆಯನ್ನು ವಿರೋಧಿಸಿ ಸಿಎಂ ಸ್ಟಾಲಿನ್ (CM Stalin) ನಿರ್ಣಯವನ್ನು ಮಂಡಿಸಿದರು. ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಮಾತ್ರವೇ ಸ್ಪೀಕರ್ ಕಡತಕ್ಕೆ ಸೇರಿಸಬೇಕೆಂಬ ನಿರ್ಣಯಕ್ಕೆ ಒಪ್ಪಿಗೆ ದೊರೆಯಿತು. ಈ ವೇಳೆ, ರಾಜ್ಯಪಾಲರು, ರಾಷ್ಟ್ರಗೀತೆಗೂ ಕಾಯದೇ ಸಭೆಯಿಂದಲೇ ಹೊರ ನಡೆದರು.

ವಿಧಾನಸಭೆ ಕಲಾಪ ಆರಂಭದಲ್ಲಿ ರಾಜ್ಯಪಾಲರ ಭಾಷಣ ಮಾಡಿದರು. ಈ ವೇಳೆ, ರಾಜ್ಯಪಾಲ ಆರ್ ಎನ್ ರವಿ, ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ಕೆಲವೊಂದಿಷ್ಟು ಭಾಗಗಳನ್ನು ಕೈ ಬಿಟ್ಟಿದ್ದರು. ವಿಶೇಷವಾಗಿ ಜಾತ್ಯತೀತತೆಯನ್ನು ಉಲ್ಲೇಖಿಸಿ ತಮಿಳುನಾಡು ಶಾಂತಿಯ ಸ್ವರ್ಗವಾಗಿದೆ, ನಾಯಕರಾದ ಪೆರಿಯಾರ್, ಬಿ ಆರ್ ಅಂಬೇಡ್ಕರ್, ಕೆ ಕಾಮರಾಜ್, ಸಿ ಎನ್ ಅಣ್ಣಾದೊರೈ, ಕರುಣಾನಿಧಿ ಸಂಬಂಧಿಸಿದ ಮಾಹಿತಿಯನ್ನು ಅವರು ಓದಲಿಲ್ಲ. ಜತೆಗೆ, ಆಡಳಿತ ಪಕ್ಷದ ದ್ರಾವಿಡಿಯನ್ ಮಾಡೆಲ್ ಸಂಬಂಧ ಇದ್ದ ಮಾಹಿತಿಯನ್ನು ರಾಜ್ಯಪಾಲರು ಓದಲಿಲ್ಲ. ಈ ಕಾರಣದಿಂದ, ಸಿಎಂ ಸ್ಟಾಲಿನ್ ಅವರು ನಿರ್ಣಯವನ್ನು ಮಂಡಿಸಿ, ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಮಾತ್ರವೇ ಪರಿಗಣಿಸುವಂತೆ ಸ್ಪೀಕರ್‌ಗೆ ಕೋರಿದರು. ಇದಕ್ಕೆ ವಿಧಾನಸಭೆ ಒಪ್ಪಿಗೆ ಕೂಡ ನೀಡಿತು. ಅಲ್ಲದೇ, ರಾಜ್ಯಪಾಲರ ನಡೆಯು ವಿಧಾನಸಭೆಯ ಸಂಪ್ರದಾಯದ ವಿರುದ್ಧವಾಗಿದೆ ಎಂದು ಸ್ಟಾಲಿನ್ ಅವರು ಆರೋಪಿಸಿದರು.

ರಾಜ್ಯಪಾಲರ ವಿರುದ್ಧ ಪ್ರತಿಭಟನೆ
ಸೋಮವಾರ ಬೆಳಗ್ಗೆ ವಿಧಾನಸಭೆ ಅಧಿವೇಶನ ಆರಂಭವಾಗುತ್ತಿದ್ದಂತೆ ಡಿಎಂಕೆ, ಕಾಂಗ್ರೆಸ್, ವಿಸಿಕೆ, ಸಿಪಿಐ ಮತ್ತು ಸಿಪಿಎಂ ಪಕ್ಷಗಳು ರಾಜ್ಯಪಾಲರ ಭಾಷಣವನ್ನು ಬಹಿಷ್ಕರಿಸಿದವು. ಇತ್ತೀಚೆಗೆ ರಾಜ್ಯಪಾಲ ಆರ್ ಎನ್ ರವಿ ಅವರು, ತಮಿಳುನಾಡಿಗೆ ತಮಿಳುನಾಡಿಗಿಂತ ತಮಿಳಗಂ ಹೆಚ್ಚು ಸೂಕ್ತವಾದ ಹೆಸರು ಎಂದು ಹೇಳಿದ್ದರು. ಈ ಹಿನ್ನೆಯಲ್ಲಿ ಶಾಸಕರು ರಾಜ್ಯಪಾಲರ ಭಾಷಣವನ್ನು ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದರು. ಅಲ್ಲದೇ, ಆನ್‌ಲೈನ್ ಗ್ಯಾಂಬ್ಲಿಂಗ್ ನಿಷೇಧ, ರಾಜ್ಯ ಸರ್ಕಾರಗಳ ವಿವಿಗಳಿಗೆ ವಿಸಿಗಳ ನೇಮಕದಲ್ಲಿ ರಾಜ್ಯಪಾಲರ ಅಧಿಕಾರ ಮೊಟಕು ಸೇರಿದಂತೆ 21 ವಿಧೇಯಕಗಳಿಗೆ ರಾಜ್ಯಪಾಲರು ಅಂಕಿತ ಹಾಕಿಲ್ಲ ಎಂದು ಡಿಎಂಕೆ ಹಾಗೂ ಮಿತ್ರ ಪಕ್ಷಗಳ ಶಾಸಕರು ಆರೋಪಿಸಿದರು.

ತಮಿಳುನಾಡು ಬಿಟ್ಟು ಹೊರಡಿ, ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತವನ್ನು ಹೇರಬೇಡಿ ಎಂದು ಶಾಸಕರು ರಾಜ್ಯಪಾಲರ ವಿರುದ್ಧ ಕೂಗಿದರು. ಏತನ್ಮಧ್ಯೆ, ಕಾಂಗ್ರೆಸ್ ನಾಯಕ, ಸಂಸದ ಕಾರ್ತಿ ಚಿದಂಬರಂ ಅವರು, ಟ್ವೀಟ್ ಮಾಡಿ ರಾಜ್ಯಪಾಲರನ್ನು ವಾಪಸ್ ಕರೆಯಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ | Thamizhagam | ತಮಿಳುನಾಡಿಗಿಂತ ತಮಿಳಗಂ ಹೆಚ್ಚು ಸೂಕ್ತ ಎಂದ ರಾಜ್ಯಪಾಲರ ವಿರುದ್ಧ ಆಕ್ರೋಶ

Exit mobile version