Site icon Vistara News

Divya Ayodhya: ರಾಮಮಂದಿರ ಯಾತ್ರಿಕರಿಗಾಗಿ ಬಂತು ಆ್ಯಪ್; ಆಲ್‌ ಇನ್‌ ಒನ್‌ ಗೈಡ್‌ನಲ್ಲೇನಿದೆ?

Divya Ayodhya App

CM Yogi Adityanath launches Divya Ayodhya mobile app for tourism; All You Know About It

ಲಖನೌ: ಭವ್ಯ ರಾಮಮಂದಿರ ನಿರ್ಮಾಣವಾಗಿದ್ದು, ಜನವರಿ 22ರಂದು ನರೇಂದ್ರ ಮೋದಿ (Narendra Modi) ಅವರು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಇದರಿಂದಾಗಿ ಅಯೋಧ್ಯೆಗೆ ಭೇಟಿ ನೀಡುವವರ, ಮುಂದೆ ನೀಡಲಿರುವ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಲಿದೆ. ದೇಶ-ವಿದೇಶಗಳ ಕೋಟ್ಯಂತರ ಜನ ರಾಮನ ದರ್ಶನಕ್ಕಾಗಿ (Lord Ram) ಅಯೋಧ್ಯೆಗೆ ಆಗಮಿಸಲಿದ್ದಾರೆ. ಇದನ್ನು ಮನಗಂಡ ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ‘ದಿವ್ಯ ಅಯೋಧ್ಯಾ’ (Divya Ayodhya) ಎಂಬ ಆ್ಯಪ್ ಅಭಿವೃದ್ಧಿಪಡಿಸಿದ್ದು, ಯಾತ್ರಿಕರಿಗೆ ಇದು ಆಲ್‌ ಇನ್‌ ಒನ್‌ ಗೈಡ್‌ ಆಗಲಿದೆ.

ಆ್ಯಪ್‌ನಲ್ಲಿ ಏನೇನಿದೆ?

ಇಡೀ ಅಯೋಧ್ಯೆ ನಗರವನ್ನು ವೀಕ್ಷಿಸಲು ಬೇಕಾದ ಎಲ್ಲ ಮಾಹಿತಿಯನ್ನು ದಿವ್ಯ ಅಯೋಧ್ಯಾ ಆ್ಯಪ್ ಒಳಗೊಂಡಿದೆ. ರಾಮಮಂದಿರ ಸೇರಿ ಅಯೋಧ್ಯೆ ನಗರದಲ್ಲಿರುವ ದೇವಾಲಯಗಳು, ಸರಯೂ ನದಿ, ಅಯೋಧ್ಯೆಯ ಐತಿಹಾಸಿಕ ಹಿನ್ನೆಲೆ, ರಾಮಮಂದಿರದ ಇತಿಹಾಸ, ದೇವಾಲಯಗಳಿಗೆ ತೆರಳಲು ಮಾರ್ಗ, ಸ್ಮಾರಕಗಳು, ಅವುಗಳ ಕಾಲಘಟ್ಟ ಸೇರಿ ನೂರಾರು ಮಾಹಿತಿಯು ಆ್ಯಪ್‌ನಲ್ಲಿದೆ. ಅಯೋಧ್ಯೆಗೆ ಆಗಮಿಸುವ ಯಾತ್ರಿಕರು ಈ ಒಂದು ಆ್ಯಪ್ ಇನ್‌ಸ್ಟಾಲ್‌ ಮಾಡಿಕೊಂಡರೆ ಸಾಕು, ಎಲ್ಲ ಮಾಹಿತಿ ಸಿಗುವ ಹಾಗೆ ಅಭಿವೃದ್ಧಿಪಡಿಸಲಾಗಿದೆ.

ವಾಹನ, ಹೋಟೆಲ್‌ ಬುಕ್ಕಿಂಗ್‌ ಕೂಡ ಸಾಧ್ಯ

ದಿವ್ಯ ಅಯೋಧ್ಯಾ ಆ್ಯಪ್ ಮೂಲಕ ಐತಿಹಾಸಿಕ ಸ್ಥಳಗಳ ಮಾಹಿತಿ, ಇತಿಹಾಸ, ಲೊಕೇಷನ್‌ ಜತೆಗೆ ಇ-ಕಾರ್‌ಗಳು, ಇ-ಕ್ಯಾಬ್‌ಗಳನ್ನು ಕೂಡ ಆ್ಯಪ್ ಮೂಲಕವೇ ಬುಕ್‌ ಮಾಡಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲ, ಅಯೋಧ್ಯೆ ಸುತ್ತಮುತ್ತ ಇರುವ ಹೋಮ್‌ಸ್ಟೇಗಳು, ಐಷಾರಾಮಿ ಹೋಟೆಲ್‌ಗಳು, ಟೂರಿಸ್ಟ್‌ ಗೈಡ್‌ಗಳು, ವ್ಹೀಲ್‌ ಚೇರ್‌ಗಳು, ಸೈಟ್‌ ಸೀಯಿಂಗ್‌ ಗಾಲ್ಫ್‌ ಕಾರ್ಟ್‌ಗಳನ್ನು ಕೂಡ ಬುಕ್‌ ಮಾಡಿಕೊಳ್ಳಬಹುದಾಗಿದೆ. ಗ್ರಾಮೀಣ ಭಾಗದಲ್ಲಿರುವ ಹೋಮ್‌ಸ್ಟೇಗಳನ್ನೂ ಬುಕ್‌ ಮಾಡಿಕೊಂಡು ಐತಿಹಾಸಿಕ ಸಿಟಿಯ ಸುತ್ತಮುತ್ತಲಿನ ಪ್ರದೇಶಗಳನ್ನೂ ನೋಡಬಹುದಾಗಿದೆ.

ನೀವು ಕೂಡ ಆ್ಯಪ್ ಡೌನ್‌ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ; https://play.google.com/store/apps/details?id=com.ayodhyadevelopmentauthority&hl=az&gl=US

ಇದನ್ನೂ ಓದಿ: Ram Mandir: ಸಾಮಾನ್ಯ ಜನರಿಗೂ ರಾಮಮಂದಿರಕ್ಕೆ ಆಮಂತ್ರಣ; ಇವರೇ ಆ ಅದೃಷ್ಟವಂತರು!

ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಉದ್ಘಾಟನೆ ದಿನ ಪ್ರಾಯೋಗಿಕವಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಇದೇ ತಂತ್ರಜ್ಞಾನ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version