ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ರಾಜ್ಯದಲ್ಲಿ ಅಘೋಷಿತ ‘ಇನ್‌ಸ್ಟಂಟ್ ಜಸ್ಟಿಸ್’ (Instant Justice) ಎಂಬ ಪದ್ಧತಿ ಜಾರಿಗೆ ತಂದಿದ್ದಾರೆ. ಮಹಿಳೆ ಮೇಲೆ ಅತ್ಯಾಚಾರ ಎಸಗುವವರು, ಅಪರಾಧ ಕೃತ್ಯಗಳಲ್ಲಿ ತೊಡಗಿದವರ ಎನ್‌ಕೌಂಟರ್, ಅವರ ಮನೆ ನೆಲಸಮ ಸೇರಿ ಹಲವು ಕಠಿಣ ಕ್ರಮಗಳ ಮೂಲಕ ಉತ್ತರ ಪ್ರದೇಶದಲ್ಲಿ (Uttar Pradesh) ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದಾರೆ. ಇಷ್ಟೆಲ್ಲ ಕಠೋರ ನಿರ್ಣಯ ತೆಗೆದುಕೊಳ್ಳುವ ಯೋಗಿ ಆದಿತ್ಯನಾಥ್ ಅವರು ತಲೆಗೊಂದು ಸೂರು ಇಲ್ಲದ ಮಹಿಳೆಗೆ ನಿಂತ ಜಾಗದಲ್ಲಿಯೇ ಮನೆ ಮಂಜೂರು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹೌದು, ಭಾನುವಾರ (ಜುಲೈ 7) ಬೆಳಗ್ಗೆ ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರದ ಟಿಪಿ ನಗರ ಫ್ಲೈಓವರ್ ಹಾಗೂ ಷಟ್ಪಥ ರಸ್ತೆ ನಿರ್ಮಾಣದ ಕಾಮಗಾರಿ ಪರಿಶೀಲನೆ ನಡೆಸುವಾಗ, ಮನೆ ಇಲ್ಲದ ಕುರಿತು ಸಮಸ್ಯೆ ಹೇಳಿಕೊಂಡ ಮಂಜು ಎಂಬ ಮಹಿಳೆಗೆ ಶೀಘ್ರದಲ್ಲೇ ಸುಸಜ್ಜಿತ ಮನೆ ನಿರ್ಮಿಸಿಕೊಡಬೇಕು ಎಂಬುದಾಗಿ ಸೂಚಿಸಿದರು. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮಹಿಳೆಗೆ ಮನೆ ನಿರ್ಮಿಸಿಕೊಡಬೇಕು ಎಂಬುದಾಗಿ ಅಧಿಕಾರಿಗಳಿಗೆ ಆದೇಶ ನೀಡಿದರು.
ಮಂಜು ಎಂಬ ಮಹಿಳೆಯು ದಿಯೋರಿಯಾ ಬೈಪಾಸ್ ರಸ್ತೆಯ ಬಳಿ ಶೆಡ್‌ನಲ್ಲಿ ವಾಸಿಸುತ್ತಿದ್ದಾರೆ. ಮಗಳ ಜತೆ ಅವರು ವಾಸಿಸುತ್ತಿದ್ದು, ಸ್ವಂತದ್ದೊಂದು ಮನೆ ನಿರ್ಮಿಸಿಕೊಡಿ ಎಂಬುದಾಗಿ ಮುಖ್ಯಮಂತ್ರಿ ಬಳಿ ಅಳಲು ತೋಡಿಕೊಂಡರು. ಆಗ ಕೂಡಲೇ ಯೋಗಿ ಆದಿತ್ಯನಾಥ್ ಅವರು, ಮಹಿಳೆಯು ಎಲ್ಲಿ ಸ್ವಂತ ಜಾಗ ಹೊಂದಿದ್ದಾರೋ, ಅಲ್ಲಿಯೇ ಮನೆ ನಿರ್ಮಿಸಿಕೊಡಿ ಎಂಬುದಾಗಿ ಅಧಿಕಾರಿಗಳಿಗೆ ಸೂಚಿಸಿದರು.
“ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ, ನಮಗೊಂದು ಮನೆ ನಿರ್ಮಿಸಿಕೊಡಿ ಎಂಬುದಾಗಿ ಮನವಿ ಮಾಡಿದೆ. ನನ್ನ ಆರ್ಥಿಕ ದುಸ್ಥಿತಿಯ ಬಗ್ಗೆ ಅವರಿಗೆ ವಿವರಣೆ ನೀಡಿದೆ. ಒಂದು ಕ್ಷಣವೂ ಯೋಚಿಸದೆ ಅವರು ನಮಗೆ ಮನೆ ಮಂಜೂರು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದ ನಮಗೆ ಭಾರಿ ಖುಷಿಯಾಗಿದೆ. ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದಗಳು” ಎಂಬುದಾಗಿ ಮಹಿಳೆ ತಿಳಿಸಿದ್ದಾರೆ. ಇನ್ನು, ಅಭಿವೃದ್ಧಿ ಕಾರ್ಯಗಳಿಗಾಗಿ ಮಹಿಳೆಯ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಅವರಿಗೆ ಕೂಡಲೇ ಪರಿಹಾರವನ್ನೂ ಒದಗಿಸಿ ಎಂಬುದಾಗಿಯೂ ಸಿಎಂ ಸೂಚಿಸಿದರು.
ಇದನ್ನೂ ಓದಿ: Hathras Stampede: 121 ಜನರ ಸಾವಿಗೆ ಕಾರಣನಾದ ಭೋಲೆ ಬಾಬಾ ಆಸ್ತಿ ಧ್ವಂಸಕ್ಕೆ ಮುಂದಾದ ಯೋಗಿ!