ನವದೆಹಲಿ: ಕೋಚಿಂಗ್ ಸೆಂಟರ್‌ಗಳು, ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೋಚಿಂಗ್ ಸೆಂಟರ್‌ಗಳಲ್ಲಿ (Coaching Centre) 16 ವರ್ಷದೊಳಗಿನವರಿಗೆ ಪ್ರವೇಶ ನೀಡಬಾರದು ಎಂದು ಕೇಂದ್ರ ಸರ್ಕಾರವು (Central Government) ಹೊಸ ನಿಯಮಗಳನ್ನು (New Rules) ಜಾರಿಗೆ ತಂದಿದೆ. ಇದರೊಂದಿಗೆ ಕೋಚಿಂಗ್ ಸೆಂಟರ್‌ಗಳು, ಕೋಚಿಂಗ್ ಸೆಂಟರ್‌ಗಳ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು (Students Suicide) ತಡೆಯುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.
ಕೇಂದ್ರ ಶಿಕ್ಷಣ ಸಚಿವಾಲಯವು ಕೋಚಿಂಗ್ ಸೆಂಟರ್‌ಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿ ಮಾರ್ಗಸೂಚಿ ಹೊರಡಿಸಿದೆ. ಇದರ ಅನ್ವಯ ಕೋಚಿಂಗ್ ಸೆಂಟರ್‌ಗಳಲ್ಲಿ 16 ವರ್ಷದೊಳಗಿನ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬಾರದು. ಅವರಿಗೆ ರ‍್ಯಾಂಕ್, ಅಂಕಗಳು, ಒಳ್ಳೆಯ ಭವಿಷ್ಯ ಎಂದು ಮನವೊಲಿಸಿ, ತರಬೇತಿ ಹೆಸರಿನಲ್ಲಿ ಅವರ ಮೇಲೆ ಒತ್ತಡ ಹೇರಬಾರದು ಎಂದು ನಿಯಮಗಳನ್ನು ರೂಪಿಸಲಾಗಿದೆ. ಅತಿಯಾದ ಸ್ಪರ್ಧೆ, ಅಂಕಗಳ ಒತ್ತಡದಿಂದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುವುದನ್ನು ತಡೆಯಲು ಸರ್ಕಾರ ಮುಂದಾಗಿದೆ.
ಕಠಿಣ ನಿಯಮ ಜಾರಿ
ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ನಿಯಮಗಳನ್ನು ಮೀರಿ ಕೋಚಿಂಗ್ ಸೆಂಟರ್‌ಗಳು 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಿದರೆ ಅಂತಹ ಕೋಚಿಂಗ್ ಸೆಂಟರ್‌ಗಳ ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆ. ಹಾಗೆಯೇ, ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ ಹಾಗೂ ಹೆಚ್ಚಿನ ಶುಲ್ಕ ಪಡೆದುಕೊಂಡರೂ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಆದೇಶ ಹೊರಡಿಸಿದೆ. ಇತ್ತೀಚೆಗೆ ಕಾನ್ಪುರ, ಕೋಟಾ, ತಮಿಳುನಾಡು ಸೇರಿ ಹಲವೆಡೆ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಜಾಸ್ತಿಯಾದ ಕಾರಣ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕೋಚಿಂಗ್ ಸೆಂಟರ್‌ಗಳ ರಾಜಧಾನಿ ಕೋಟಾದಲ್ಲಿ ಸರಣಿ ಆತ್ಮಹತ್ಯೆ ಆತಂಕಕಾರಿ
ಕೋಟಾ ನಗರದಲ್ಲಿ 20 ವಿದ್ಯಾರ್ಥಿಗಳ ಆತ್ಮಹತ್ಯೆ
ಕೋಟಾ ನಗರದಲ್ಲಿ 2023ರಲ್ಲಿ 2೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀಟ್, ಜೆಇಇ ಸೇರಿ ಹಲವು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದದಿರುವುದು, ತೇರ್ಗಡೆ ಹೊಂದದಿರುವ ಭಯ ಸೇರಿ ಹಲವು ಭೀತಿಯಿಂದ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಹಾಸ್ಟೆಲ್, ಪಿಜಿಗಳ ಸುತ್ತ ಬಲೆ ಅಳವಡಿಕೆ, ಫ್ಯಾನ್‌ಗಳಿಗೆ ಸ್ಪ್ರಿಂಗ್ ಅಳವಡಿಕೆ, ಕೌನ್ಸೆಲಿಂಗ್ ಸೇರಿ ಹಲವು ದಿಸೆಯಲ್ಲಿ ಆತ್ಮಹತ್ಯೆ ತಡೆಗೆ ಕ್ರಮ ತೆಗೆದುಕೊಳ್ಳಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ