ನವದೆಹಲಿ: ಕಲ್ಲಿದ್ದಲು ಕರ ಹವಾಲಾ ಹಗರಣ (coal levy money laundering case) ಕುರಿತು ಜಾರಿ ನಿರ್ದೇಶನಾಲಯವು(Enforcement Directorate) ಸೋಮವಾರ ಕಾಂಗ್ರೆಸ್ (Congress) ಶಾಸಕ ಸೇರಿದಂತೆ ಹಲವು ನಾಯಕರ ಮನೆಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದೆ. ಕಾಂಗ್ರೆಸ್ ಪಕ್ಷವು ಇದೇ ತಿಂಗಳು ರಾಯಪುರದಲ್ಲಿ ಮೂರು ದಿನಗಳ ಮಹಾಧಿವೇಶನ ಆಯೋಜಿಸಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಇ.ಡಿ ಕಾರ್ಯಾಚರಣೆ ನಡೆಸಿರುವುದು, ಭಾರೀ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವಿದ್ದು, ಭೂಪೇಶ್ ಬಾಘೇಲ್ ಅವರು ಮುಖ್ಯಮಂತ್ರಿಯಾಗಿದ್ದಾರೆ.
ಅಧಿಕಾರಿಗಳ ಪ್ರಕಾರ, ಸೋಮವಾರ ಬೆಳಗಿನಿಂದಲೇ ಶೋಧ ಕಾರ್ಯಾಚರಣೆ ಜಾರಿಯಲ್ಲಿದೆ. ಕಾಂಗ್ರೆಸ್ ಶಾಸಕ ದೇವೇಂದ್ರ ಯಾದವ್ ಸೇರಿದಂತೆ ಹಲವ ನಾಯಕರ 12 ಸ್ಥಳಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಖಜಾಂಚಿ ರಾಮಗೋಪಾಲ್ ಅಗ್ರವಾಲ್, ಸುಶೀಲ್ ಸನ್ನಿ ಅಗ್ರವಾಲ್ ಹಾಗೂ ಪಕ್ಷದ ರಾಜ್ಯ ವಕ್ತಾರ ಆರ್ ಪಿ ಸಿಂಗ್ ಅವರಿಗೆ ಸೇರಿದ ರಾಜ್ಯದ ವಿವಿಧ ಕಡೆ ಶೋಧ ನಡೆಸಲಾಗುತ್ತಿದೆ.
ಇದನ್ನೂ ಓದಿ: Congress Plenary Session: ಫೆ.24ರಿಂದ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮಹಾ ಅಧಿವೇಶನ, ಚುನಾವಣೆಗೆ ರಣತಂತ್ರ
ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ದಾಳಿಯ ಕುರಿತು ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷವು ತೀವ್ರ ವಾಗ್ದಾಳಿ ನಡೆಸಿದೆ. ಛತ್ತೀಸ್‌ಗಢ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಸುಶೀಲ್ ಆನಂದ್ ಶುಕ್ಲಾ ಅವರು ಮಾತನಾಡಿ, ರಾಯಪುರದಲ್ಲಿ ನಡೆಯಲಿರುವ ಕಾಂಗ್ರೆಸ್‌ನ 85ನೇ ಸಂಪುಟ ಸಭೆಗೆ ಬಿಜೆಪಿ ಹೆದರುತ್ತಿದೆ. ಈ ಸಭೆಗೆ ಅಡ್ಡಿಪಡಿಸುವ ಪ್ರಯತ್ನದಲ್ಲಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಪ್ರತಿಪಕ್ಷಗಳ ವಿರುದ್ಧ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಜತೆಗೆ, ಬಿಜೆಪಿಯ ಈ ನಡೆಯನ್ನು ವಿರೋಧಿಸಿ ಕಾಂಗ್ರೆಸ್ ರಾಯಪುರದಲ್ಲಿರುವ ಇ.ಡಿ ಆಫೀಸ್ ಮುತ್ತಿಗೆಯನ್ನು ಹಾಕಿ ಪ್ರತಿಭಟನೆ ನಡೆಸಿದೆ.