Site icon Vistara News

ಬಿರ್ಯಾನಿಯಲ್ಲಿ ಜೀವಂತ ಜಿರಳೆ; ರೆಸ್ಟೋರೆಂಟ್​ನಿಂದ ಗ್ರಾಹಕನಿಗೆ 20 ಸಾವಿರ ರೂಪಾಯಿ ಪರಿಹಾರ

Cockroach Found in biryani At Hyderabad

#image_title

ಹೈದರಾಬಾದ್: ಇಲ್ಲಿನ ಅಮೀರ್​ಪೇಟ್​​ನಲ್ಲಿದ್ದ ರೆಸ್ಟೋರೆಂಟ್​​ನಲ್ಲಿ ಗ್ರಾಹಕರೊಬ್ಬರಿಗೆ ಬಿರ್ಯಾನಿಯಲ್ಲಿ ಜಿರಳೆ ಸಿಕ್ಕಿದೆ (Cockroach Found in Biryani). ತಿನ್ನುವ ಅನ್ನದಲ್ಲಿ ತೆವಳುತ್ತಿರುವ ಜಿರಳೆಯನ್ನು ಕಂಡ ಆತ ಕ್ರೋಧಗೊಂಡು ಹೋಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಕೊಟ್ಟಿದ್ದ. ದೂರು ದಾಖಲಿಸಿಕೊಂಡ ಆಯೋಗ, ಆ ಗ್ರಾಹಕನಿಗೆ 20 ಸಾವಿರ ರೂಪಾಯಿ ಪರಿಹಾರ ನೀಡುವಂತೆ ರೆಸ್ಟೋರೆಂಟ್​ಗೆ ಆದೇಶ ನೀಡಿದೆ. ಈ ಘಟನೆ ನಡೆದಿದ್ದು 2021ರ ಸೆಪ್ಟೆಂಬರ್​ನಲ್ಲಿ. ಎಂ.ಅರುಣ್ ಎಂಬುವರು ಅಮೀರ್​ಪೇಟ್​​ನಲ್ಲಿರುವ ಕ್ಯಾಪ್ಟನ್​ ಕುಕ್​ ರೆಸ್ಟೋರೆಂಟ್​​ನಿಂದ ಬಿರ್ಯಾನಿ ಪಾರ್ಸೆಲ್​ ತೆಗೆದುಕೊಂಡು, ತಾವು ಕೆಲಸ ಮಾಡುವ ಸ್ಥಳಕ್ಕೆ ಹೋಗಿದ್ದರು. ಅಲ್ಲಿ ಬಿರ್ಯಾನಿ ತಿನ್ನಲೆಂದು ಪಾರ್ಸೆಲ್​ ತೆರೆಯುತ್ತಿದ್ದಂತೆ ಶಾಕ್​ಗೆ ಒಳಗಾಗಿದ್ದಾರೆ. ಆ ಬಿರ್ಯಾನಿಯಲ್ಲಿ ದೊಡ್ಡದಾದ ಜಿರಳೆಯೊಂದು ತೆವಳುತ್ತಿತ್ತು.

ಅರುಣ್ ಕೂಡಲೇ ರೆಸ್ಟೋರೆಂಟ್​ಗೆ ಕರೆ ಮಾಡಿ, ಜಿರಳೆ ಸಿಕ್ಕಿದ್ದನ್ನು ಹೇಳಿದ. ಅದಕ್ಕೆ ಪ್ರತಿಯಾಗಿ ಅಲ್ಲಿನ ಮ್ಯಾನೇಜರ್​ ಒಂದು ಕ್ಷಮೆಯನ್ನಷ್ಟೇ ಕೇಳಿದ ಮತ್ತು ರೆಸ್ಟೋರೆಂಟ್​ನಲ್ಲಿ ಜಿರಳೆ ಮತ್ತಿತರ ಕೀಟ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾಗಿ ಹೇಳಿದ. ಆದರೆ ಬರೀ ಒಂದು ಕ್ಷಮೆಗೆ ತೃಪ್ತಿಗೊಳ್ಳದ ಅರುಣ್​, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.

ಇದನ್ನೂ ಓದಿ: Viral news: ಹಳೆಪ್ರೇಮಿಯ ಮೇಲೆ ಸಿಟ್ಟಾ? ಹಾಗಿದ್ದರೆ ಕೆನಡಾದ ಜಿರಳೆಗೆ ಪ್ರೇಮಿಯ ಹೆಸರಿಡಿ!

ಈ ಕೇಸ್​ನ ವಿಚಾರಣೆಯನ್ನು ಆಯೋಗ ನಡೆಸಿಕೊಂಡು ಬಂದಿತ್ತು. ತಮ್ಮದೇನೂ ತಪ್ಪಿಲ್ಲ ಎಂದು ರೆಸ್ಟೋರೆಂಟ್ ವಿಚಾರಣೆ ವೇಳೆ ಹೇಳಿದೆ. ನಮ್ಮಲ್ಲಿ ಆಹಾರಗಳು ಸದಾ ಬಿಸಿಯಾಗಿಯೂ, ತಾಜಾ ಆಗಿಯೂ ಇರುತ್ತವೆ ಎಂದೇ ಮ್ಯಾನೇಜರ್​ ಹೇಳಿದ್ದರು. ಬಿರ್ಯಾನಿಯಲ್ಲಿ ಜಿರಳೆ ಬಿದ್ದಿದ್ದ ವಿಡಿಯೊವನ್ನು ಅರುಣ್ ಆಯೋಗಕ್ಕೆ ನೀಡಿದ್ದ. ಹೀಗಾಗಿ ರೆಸ್ಟೋರೆಂಟ್​ನ ವಾದ ನಡೆಯಲಿಲ್ಲ. ಅಂತಿಮವಾಗಿ ಅರುಣ್​ಗೆ 20 ಸಾವಿರ ರೂ.ಪರಿಹಾರ ನೀಡುವಂತೆ ಮತ್ತು ಅವರ ವೆಚ್ಚಭರಿಸಲು ಹೆಚ್ಚುವರಿಯಾಗಿ 10 ಸಾವಿರ ರೂ. ಕೊಡುವಂತೆ ಆಯೋಗ ಸೂಚನೆ ನೀಡಿದೆ.

Exit mobile version