ಕೊಯಮತ್ತೂರು: ಭಾನುವಾರ ಸಂಭವಿಸಿದ್ದ ಕಾರ್ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣವು ಭಯೋತ್ಪಾದನಾ ಕೃತ್ಯ ಎಂಬುದು ಖಚಿತಪಟ್ಟಿದೆ. ಈಗ ಸರ್ಕಾರವು ಈ ಪ್ರಕರಣವನ್ನು ಉಗ್ರ ನಿಗ್ರಹ ಕಾಯ್ದೆ ಯುಎಪಿಎ ಅಡಿ ತನಿಖೆಗೆ ಮುಂದಾಗಿದೆ. ಈ ಗ್ಯಾಸ್ ಸಿಲಿಂಡರ್ ಸ್ಫೋಟ (Coimbatore Blast) ಪ್ರಕರಣವು ಆಕಸ್ಮಿಕ ಸ್ಫೋಟವಲ್ಲ, ಅದು ಭಯೋತ್ಪಾದನೆ ಕೃತ್ಯವಾಗಿತ್ತು ಎಂಬ ನಿರ್ಧಾರಕ್ಕೆ ಬರಲಾಗಿದೆ. ಈ ಸ್ಫೋಟದಲ್ಲಿ ಜಮೇಶಾ ಮುಬಿನ್ ಎಂಬಾತ ಮೃತಪಟ್ಟಿದ್ದ. ಅಸಲಿಗೆ ಆತನೇ ಈ ಸ್ಫೋಟದ ರೂವಾರಿ ಎಂದು ಹೇಳಲಾಗುತ್ತಿದೆ.
ಈ ಸ್ಫೋಟದಲ್ಲಿ ಮೃತಪಟ್ಟ ಮುಬಿನ್ ಮನೆಯಿಂದ, ನಾಡ ಬಾಂಬ್ ತಯಾರಿಸಲು ಬೇಕಾದ ಪೊಟ್ಯಾಷಿಯಮ್ ನೈಟ್ರೇಟ್, ಅಲ್ಯುಮಿನಿಯಂ ಪುಡಿ, ಇದ್ದಿಲು ಮತ್ತು ಸಲ್ಫರ್ ಸೇರಿದ ಇನ್ನಿತರ ಕಚ್ಚಾವಸ್ತುಗಳನ್ನು ಪೊಲೀಸರು ಜಫ್ತಿ ಮಾಡಿದ್ದಾರೆ. ಸ್ಫೋಟದ ಸ್ಥಳದಿಂದಲೂ ಪೊಟ್ಯಾಷಿಯಂ ನೈಟ್ರೆಟ್, ಸಲ್ಫರ್ ಸಂಗ್ರಹಿಸಲಾಗಿದೆ.
ಸ್ಫೋಟ ಸಂಭವಿಸುವ ಕೆಲವು ಗಂಟೆಗಳಿಗೆ ಮೊದಲು ಮುಬಿನ್ ಹಾಗೂ ಮತ್ತಿತರು ಅನುಮಾನಕ್ಕೆ ಎಡೆ ಮಾಡಿಕೊಡುವ ವಸ್ತುವನ್ನು ತೆಗೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯ ದೃಶ್ಯಗಳು ಈಗ ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮುಬಿನ್ ಸಹವರ್ತಿಗಳನ್ನು ವಿಚಾರಣೆಗೊಳಪಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | Coimbatore Blast | ಕೊಯಮತ್ತೂರು ಸ್ಫೋಟ ಆಕಸ್ಮಿಕವಲ್ಲ, ಭಯೋತ್ಪಾದನಾ ಕೃತ್ಯ?