Site icon Vistara News

Terror Plot | ಆಡ್ವಾಣಿ ಹತ್ಯೆಗೆ ಸಂಚು ರೂಪಿಸಿದವರಿಂದಲೇ ಕೊಯಮತ್ತೂರಿನಲ್ಲಿ ಕಾರ್‌ ಸ್ಫೋಟ?

Terror

ನವದೆಹಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿ ಅಕ್ಟೋಬರ್‌ 23ರಂದು ನಡೆದ ಕಾರ್‌ ಸ್ಫೋಟದ ಹಿಂದೆ ಉಗ್ರರ ಜಾಲವಿರುವ (Terror Plot) ಕುರಿತು ದಿನೇದಿನೆ ಹೆಚ್ಚಿನ ಸಾಕ್ಷ್ಯಗಳು ಲಭ್ಯವಾಗುತ್ತಿವೆ. ಅದರಲ್ಲೂ, 1998ರಲ್ಲಿ ಬಿಜೆಪಿ ನಾಯಕ ಎಲ್‌.ಕೆ.ಆಡ್ವಾಣಿ ಅವರ ಹತ್ಯೆಗೆ ಸಂಚು ರೂಪಿಸಿದ್ದ ಉಗ್ರರ ತಂಡವೇ ಈಗಲೂ ಕೊಯಮತ್ತೂರಿನಲ್ಲಿ ದೇವಾಲಯದ ಮೇಲೆ ದಾಳಿ ನಡೆಸಲು ಸಂಚು ರೂಪಿಸಲಾಗಿದೆ ಎಂಬುದಾಗಿ ತಮಿಳುನಾಡು ಪೊಲೀಸ್‌ ಮೂಲಗಳು ತಿಳಿಸಿವೆ.

ಕೊಯಮತ್ತೂರು ದೇವಾಲಯದ ಬಳಿ ಕಾರ್‌ನಲ್ಲಿ ಸಿಲಿಂಡರ್‌ ಸ್ಫೋಟಿಸಿರುವ ಪ್ರಕರಣದ ಹಿಂದೆ ಅಲ್-ಉಮ್ಮಾಹ್‌ ಉಗ್ರ ಸಂಘಟನೆಯ ಕೈವಾಡವಿದೆ ಎಂದು ತಿಳಿದುಬಂದಿದೆ. 1998ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಬಾಂಬ್‌ ದಾಳಿಯಲ್ಲಿ 58 ಜನ ಮೃತಪಟ್ಟಿದ್ದರು. ಬಾಬ್ರಿ ಮಸೀದಿ ಧ್ವಂಸದ ಬಳಿಕ ಅಲ್‌-ಉಮ್ಮಾಹ್‌ ಉಗ್ರ ಸಂಘಟನೆಯನ್ನು (1993) ಸ್ಥಾಪಿಸಲಾಗಿದೆ.

ಕೊಯಮತ್ತೂರು ಬಾಂಬ್‌ ದಾಳಿ ಹಾಗೂ ಆಡ್ವಾಣಿ ಅವರ ಹತ್ಯೆಗೆ ಸಂಚು ರೂಪಿಸಿದ ಹಿನ್ನೆಲೆಯಲ್ಲಿ 1998ರ ಬಳಿಕ ಈ ಉಗ್ರ ಸಂಘಟನೆ ಮೇಲೆ ದೇಶದ ರಕ್ಷಣಾ ಇಲಾಖೆ ಹಾಗೂ ತನಿಖಾ ಸಂಸ್ಥೆಗಳು ಹದ್ದಿನ ಕಣ್ಣಿಡಲು ಆರಂಭಿಸಿವೆ. ಈಗ ಕಾರ್‌ ಬಾಂಬ್‌ ಸ್ಫೋಟದ ಹಿಂದೆಯೂ ಇದೇ ಸಂಘಟನೆಯ ಕೈವಾಡವಿರುವ ಕುರಿತು ತಮಿಳುನಾಡು ಪೊಲೀಸರು ತನಿಖೆ ವೇಳೆ ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.

ಶ್ರೀಲಂಕಾ ದಾಳಿಗೂ ನಂಟು?

ಶ್ರೀಲಂಕಾದಲ್ಲಿ ನಡೆದ ಈಸ್ಟರ್‌ ಬಾಂಬಿಂಗ್‌ಗೂ, ಕೊಯಮತ್ತೂರು ಕಾರ್‌ ಸ್ಫೋಟಕ್ಕೂ ಸಂಬಂಧವಿರುವ ಬಗ್ಗೆಯೂ ತಮಿಳುನಾಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರಿನಲ್ಲಿ ಸಿಲಿಂಡರ್‌ ಇಟ್ಟುಕೊಂಡು ಕೊಟ್ಟಾಯ್ ಈಶ್ವರನ್‌ ದೇವಾಲಯದ ಬಳಿ ಸ್ಫೋಟಿಸಿದ ಹತ ಉಗ್ರ ಜಮೀಶ ಮುಬಿನ್‌ನನ್ನು ಶ್ರೀಲಂಕಾ ಈಸ್ಟರ್‌ ಬಾಂಬಿಂಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಎನ್‌ಐಎ ತನಿಖೆ ನಡೆಸಿತ್ತು. ಹಾಗಾಗಿ, ಈಗ ಅಲ್‌-ಉಮ್ಮಾಹ್‌ ಮೇಲೆ ತನಿಖಾ ಸಂಸ್ಥೆಗಳು ಕೆಂಗಣ್ಣು ಬೀರಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿ ಲಭ್ಯವಾದರೆ ತನಿಖೆ ಗಂಭೀರವಾಗಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Coimbatore Blast | ಯುಎಪಿಎ ಕಾಯ್ದೆಯಡಿ ಕೊಯಮತ್ತೂರು ಸ್ಫೋಟ ತನಿಖೆ, ಯಾಕೆ ಈ ನಿರ್ಧಾರ?

Exit mobile version