ಭೋಪಾಲ್: ಶನಿವಾರ ಮತ್ತು ಭಾನುವಾರ ರಾತ್ರಿ ಕಾರ್ಯಾಚರಣೆ (Combing Operation) ನಡೆಸಿದ ಮಧ್ಯ ಪ್ರದೇಶ ಪೊಲೀಸರು ನಾನಾ ಪ್ರಕರಣಗಳನ್ನು ಎದುರಿಸುತ್ತಿದ್ದ 9000ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದ್ದಾರೆ. ಇದಕ್ಕಾಗಿ ಮಧ್ಯಪ್ರದೇಶ ಪೊಲೀಸ್ ಇಲಾಖೆ ಸುಮಾರು 17,000 ಪೊಲೀಸರನ್ನು ನಿಯೋಜಿಸಿತ್ತು ಎಂದು ತಿಳಿದು ಬಂದಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವುದು, ಶಾಂತಿಯನ್ನು ಪ್ರತಿಷ್ಠಾಪಿಸುವುದಕ್ಕಾಗಿ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳು, ಕ್ರಿಮಿನಲ್ಸ್ ಸೇರಿದಂತೆ ನಾನಾ ಪ್ರಕರಣಗಳನ್ನು ಎದುರಿಸುತ್ತಿರುವ ಎಲ್ಲರನ್ನೂ ರಾತ್ರೋರಾತ್ರಿ ಬಂಧಿಸಲಾಗಿದೆ. ಈ ಕಾರ್ಯಾಚರಣೆ ಕೇವಲ ಒಂದೇ ಜಿಲ್ಲೆಗೆ ಮಾತ್ರವೇ ಸೀಮಿತವಾಗಿರಲಿಲ್ಲ ಎಂದು ಹೇಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ವಿವಿಧ ವಲಯಗಳ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಶ್ರೇಣಿಯ ಅಧಿಕಾರಿಗಳು, ಡೆಪ್ಯುಟಿ ಇನ್ಸ್‌ಪೆಕ್ಟರ್‌ಗಳು, ಎಸ್‌ಪಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಅದರಿಂದಾಗಿ 9000ಕ್ಕೂ ಹೆಚ್ಚು ಜನರನ್ನು ಬಂಧಿಸಲು ಸಾಧ್ಯವಾಯಿತು. ಹಾಗಿದ್ದೂ, ಹಲವರು ಪರಾರಿಯಾಗಿದ್ದಾರೆ.
ಬಂಧಿಸಲ್ಪಟ್ಟವರ ಪೈಕಿ 6,000 ಕ್ರಿಮಿನಲ್‌ಗಳ ವಿರುದ್ಧ ಬಂಧನ ವಾರಂಟ್‌ಗಳು ಬಾಕಿ ಉಳಿದಿದ್ದವು, 2,600 ಆರೋಪಿಗಳ ವಿರುದ್ಧ ಕಾಯಂ ವಾರಂಟ್‌ಗಳಿದ್ದವು ಮತ್ತು 100 ಜನರು ತಲೆಮರೆಸಿಕೊಂಡಿದ್ದರೆ, 200 ಆರೋಪಿಗಳ ತಲೆಗೆ ಬಹುಮಾನ ಘೋಷಿಸಿಲಾಗಿತ್ತು.
ಇದನ್ನೂ ಓದಿ | Yogi Adityanath | ಉತ್ತರ ಪ್ರದೇಶದಲ್ಲಿ 5 ವರ್ಷದಲ್ಲಿ 166 ಕ್ರಿಮಿನಲ್‌ಗಳ ಹತ್ಯೆ; ಒಂದೋ ಜೈಲಲ್ಲಿರಬೇಕು, ಇಲ್ಲ ಸಾಯಬೇಕು ಎಂದ ಯೋಗಿ