ಲಖನೌ: ದೇಶದ ಹಲವೆಡೆ ಇದುವರೆಗೆ ಪ್ರತಿಪಕ್ಷಗಳ ಶಾಸಕರ ಖರೀದಿ, ಹೈಜಾಕ್, ಆಪರೇಷನ್ ಕಮಲ ಸೇರಿ ಹಲವು ರೀತಿಯ ಆರೋಪಗಳು ಬಿಜೆಪಿ ವಿರುದ್ಧ ಕೇಳಿಬರುತ್ತಿದ್ದವು. ಬಿಜೆಪಿಯೂ ಕರ್ನಾಟಕ ಸೇರಿ ಹಲವೆಡೆ ಪ್ರತಿಪಕ್ಷಗಳ ಶಾಸಕರನ್ನು ಸೆಳೆದು ಪ್ರತಿಪಕ್ಷಗಳ ಆಕ್ರೋಶಕ್ಕೂ ತುತ್ತಾಗಿದೆ. ಆದರೆ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರು ಬಿಜೆಪಿಯವರಿಗೇ ಓಪನ್ ಆಫರ್ ನೀಡಿದ್ದಾರೆ. ಆ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ.
ರಾಮ್‌ಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್, “ಉತ್ತರ ಪ್ರದೇಶದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳು ಇದ್ದಾರೆ. ಅವರಿಬ್ಬರೂ ಮುಖ್ಯಮಂತ್ರಿಯಾಗುವ ಆಸೆ ಹೊಂದಿದ್ದಾರೆ. ನಾನು ಅವರಿಗೆ ಆಫರ್ ನೀಡುತ್ತಿದ್ದೇನೆ. ಇಬ್ಬರಲ್ಲಿ ಯಾರು ಬಿಜೆಪಿಯ ೧೦೦ ಶಾಸಕರನ್ನು ಕರೆತರುತ್ತಾರೋ, ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ. ನಾವು ಅವರಿಗೆ ಬೆಂಬಲ ನೀಡುತ್ತೇವೆ” ಎಂದು ಡಿಸಿಎಂಗಳಾದ ಕೇಶವ ಪ್ರಸಾದ್ ಮೌರ್ಯ ಹಾಗೂ ಬ್ರಜೇಶ್ ಪಾಠಕ್ ಅವರಿಗೆ ಓಪನ್ ಆಫರ್ ನೀಡಿದ್ದಾರೆ.
“ಉಪ ಮುಖ್ಯಮಂತ್ರಿ ಹುದ್ದೆಯಷ್ಟೇ, ಆ ಹುದ್ದೆಯಲ್ಲಿರುವವರಿಗೆ ಅಧಿಕಾರ ಇರುವುದಿಲ್ಲ. ಒಬ್ಬ ಮೆಡಿಕಲ್ ಆಫೀಸರ್‌ನನ್ನು ವರ್ಗಾವಣೆ ಮಾಡಲು ಕೂಡ ಆಗದಿರುವ ಹುದ್ದೆ ಇದ್ದರೆ ಏನು ಪ್ರಯೋಜನ? ನೀವು ಶಾಸಕರನ್ನು ಕರೆದುಕೊಂಡು ಬನ್ನಿ, ಮುಖ್ಯಮಂತ್ರಿ ಆಗಿ. ನಿಮ್ಮ ಜತೆ ಸಮಾಜವಾದಿ ಪಕ್ಷದ ಶಾಸಕರೂ ಇದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ | ಭಾರಿ ಹಣದೊಂದಿಗೆ ಸಿಕ್ಕಿಬಿದ್ದ ಮೂವರು ಜಾರ್ಖಂಡ್ ಕೈ ಶಾಸಕರು, ಆಪರೇಷನ್ ಕಮಲದ ದುಡ್ಡು?