Site icon Vistara News

NPS Committee: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಪರಿಶೀಲನೆಗೆ ಸಮಿತಿ ರಚಿಸಿದ ಕೇಂದ್ರ, ಒಪಿಎಸ್‌ ಸೌಲಭ್ಯ ಸೇರ್ಪಡೆ?

Committee to look into NPS for government employees set up by Finance Ministry

ನವದೆಹಲಿ: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ರದ್ದುಗೊಳಿಸಿ, ಹಳೆಯ ಪಿಂಚಣಿ ವ್ಯವಸ್ಥೆಯನ್ನೇ (OPS) ಜಾರಿಗೊಳಿಸಬೇಕು ಎಂದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಹೋರಾಟ ನಡೆಯುತ್ತಿದೆ. ಕೆಲವು ರಾಜ್ಯಗಳು ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೊಳಿಸಲು ಮುಂದಾಗಿವೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಸರ್ಕಾರಿ ನೌಕರರ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಪರಿಶೀಲನೆಗೆ ಸಮಿತಿ (NPS Committee) ರಚಿಸಿದೆ. ಹಾಗಾಗಿ, ನೂತನ ಪಿಂಚಣಿ ವ್ಯವಸ್ಥೆಯಲ್ಲಿ ಒಪಿಎಸ್‌ ಸೌಲಭ್ಯಗಳನ್ನು ಸೇರ್ಪಡೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಮೂಡಿದೆ.

ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ಆಗ್ರಹ ಜಾಸ್ತಿಯಾದ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವಾಲಯವು ನಾಲ್ವರು ಸದಸ್ಯರ ಪರಿಶೀಲನಾ ಸಮಿತಿ ರಚಿಸಿದೆ. ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್‌ ಅವರು ಇದರ ಅಧ್ಯಕ್ಷರಾಗಿದ್ದಾರೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಮಾಡಬೇಕಾದ ಬದಲಾವಣೆಗಳು, ಸರ್ಕಾರಿ ನೌಕರರಿಗೆ ಸಿಗುವ ಪಿಂಚಣಿ ಸೌಲಭ್ಯಗಳ ಸುಧಾರಣೆ ಸೇರಿ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಮಿತಿಯು ಕಾರ್ಯ ನಿರ್ವಹಿಸಲಿದೆ.

ಸಮಿತಿಯ ಕಾರ್ಯ ಏನು?

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಆಗಬೇಕಾದ ಮಾರ್ಪಾಡುಗಳು, ಈಗಿರುವ ರಚನಾ ವ್ಯವಸ್ಥೆಯಲ್ಲಿ ಮಾಡಬಹುದಾದ ಬದಲಾವಣೆ, ತರಬಹುದಾದ ಸುಧಾರಣೆ, ಇದರಿಂದ ಕೇಂದ್ರ ಸರ್ಕಾರಕ್ಕೆ ಆಗುವ ವೆಚ್ಚ, ರಾಜ್ಯಗಳ ಜತೆ ಮಾತುಕತೆ ನಡೆಸುವುದು, ರಾಜ್ಯ ಸರ್ಕಾರಗಳ ಅಭಿಪ್ರಾಯ ಸಂಗ್ರಹಿಸುವುದು, ಪಿಂಚಣಿ ವ್ಯವಸ್ಥೆ ಸುಧಾರಣೆಗೆ ನೂತನ ರಚನೆ ಕುರಿತು ಚಿಂತನೆ ಸೇರಿ ಹಲವು ದಿಸೆಯಲ್ಲಿ ಸಮಿತಿಯು ಕಾರ್ಯನಿರ್ವಹಿಸಲಿದೆ.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಬದಲಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೊಳಿಸಬೇಕು ಎಂದು ಕರ್ನಾಟಕದಲ್ಲಿ ತೀವ್ರ ಹೋರಾಟ ನಡೆದಿದೆ. ಬೇರೆ ರಾಜ್ಯಗಳಲ್ಲೂ ಇದೇ ಆಗ್ರಹ ಕೇಳಿಬರುತ್ತಿದೆ. ಈಗಾಗಲೇ ರಾಜಸ್ಥಾನ, ಪಂಜಾಬ್‌, ಛತ್ತೀಸ್‌ಗಢ, ಜಾರ್ಖಂಡ್‌ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ರಾಜ್ಯ ಸರ್ಕಾರಗಳು ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೊಳಿಸಿವೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಪರಿಶೀಲನಾ ಸಮಿತಿ ರಚಿಸಿದ ಕಾರಣ ಪಿಂಚಣಿ ವ್ಯವಸ್ಥೆಯಲ್ಲಿ ಬಾರಿ ಬದಲಾವಣೆ ಆಗುವ, ಸರ್ಕಾರಿ ನೌಕರರಿಗೆ ಹೆಚ್ಚಿನ ಅನುಕೂಲಗಳಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ.

ಹೊಸ ವಿಧಾನದ ವಿನ್ಯಾಸ ಎಂದ ನಿರ್ಮಲಾ ಸೀತಾರಾಮನ್‌

2004ರ ನಂತರ ನೇಮಕಗೊಂಡ ನೌಕರರನ್ನು ಹಳೆಯ ಪಿಂಚಣಿ ಯೋಜನೆಗೆ ಬದಲಾಯಿಸಿದ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಜನೆಯನ್ನು ಅಳವಡಿಸಿಕೊಳ್ಳಲು ಹೊಸ ವಿಧಾನವನ್ನು ವಿನ್ಯಾಸಗೊಳಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ನಿರ್ಮಲಾ ಸೀತಾರಾಮನ್ ಅವರು ಮಾರ್ಚ್ 24 ರಂದು ಲೋಕಸಭೆಯಲ್ಲಿ ಹಣಕಾಸು ಮಸೂದೆಯ ಅಂಗೀಕಾರವನ್ನು ನಡೆಸುವಾಗ, ಸರ್ಕಾರಿ ನೌಕರರಿಗೆ ಅವರ ಆಕಾಂಕ್ಷೆಗಳನ್ನು ಹಣಕಾಸಿನ ವಿವೇಕದೊಂದಿಗೆ ಸಮತೋಲನಗೊಳಿಸುವ ರೀತಿಯಲ್ಲಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು (ಎನ್‌ಪಿಎಸ್) ಸುಧಾರಿಸಲು ಬದಲಾವಣೆಗಳನ್ನು ಪ್ರಸ್ತಾಪಿಸಲು ಸಮಿತಿ ರಚಿಸುವುದಾಗಿ ಘೋಷಿಸಿದ್ದರು.

ಪ್ರತಿಪಕ್ಷದ ಆಡಳಿತದಲ್ಲಿರುವ ಐದು ರಾಜ್ಯಗಳು ಈಗಾಗಲೇ 2004 ರ ನಂತರ ನೇಮಕಗೊಂಡ ನೌಕರರನ್ನು ಪಿಂಚಣಿಗಳನ್ನು ಖಾತರಿಪಡಿಸುವ ಹಳೆಯ ಪಿಂಚಣಿ ಯೋಜನೆಗೆ (OPS) ಬದಲಾಯಿಸಿರುವುದರಿಂದ, ಮಹಾರಾಷ್ಟ್ರದ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರವು ಎನ್‌ಪಿಎಸ್‌ನಿಂದ ಹೊರಬರುವ ಆಲೋಚನೆ ಹೊಂದಿದೆ. ಹಾಗಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಅಳವಡಿಸಿಕೊಳ್ಳಲು ಹೊಸ ವಿಧಾನವನ್ನು ವಿನ್ಯಾಸಗೊಳಿಸಲಾಗುವುದು ಎಂದು ಹೇಳಿದ್ದರು.

ಇದನ್ನೂ ಓದಿ: OPS vs NPS :‌ ಎನ್‌ಪಿಎಸ್‌ vs ಒಪಿಎಸ್‌, ಅಂತಿಮವಾಗಿ ಯಾವುದು ಬೆಸ್ಟ್

2004ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಹಳೆಯ ಪಿಂಚಣಿ ಯೋಜನೆಯನ್ನು (OPS) ಸ್ಥಗಿತಗೊಳಿಸಿ ನೂತನ ಪಿಂಚಣಿ ಯೋಜನೆಯನ್ನು (NPS)ಪರಿಚಯಿಸಿತು. ಹಳೆಯ ವಿಧಾನದಲ್ಲಿ, ಪಿಂಚಣಿಯು ನೌಕರನ ಕೊನೆಯ ಸಂಬಳದ ಶೇ.50ರಷ್ಟಿತ್ತು ಮತ್ತು ಸಂಪೂರ್ಣ ಮೊತ್ತವನ್ನು ಸರ್ಕಾರವು ಪಾವತಿಸುತ್ತಿತ್ತು. ಎನ್‌ಪಿಎಸ್‌ನಲ್ಲಿ ಇದು ನೌಕರರ ಕೊಡುಗೆ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಇಲ್ಲಿ ಸರ್ಕಾರಿ ನೌಕರರು ತಮ್ಮ ಸಂಬಳದ 10 ಪ್ರತಿಶತವನ್ನು ನಿವೃತ್ತಿ ನಿಧಿಗೆ ನೀಡಬೇಕಾಗುತ್ತದೆ. ಪಿಂಚಣಿ ನಿಧಿಗೆ ಸರ್ಕಾರ ಶೇ.14ರವರೆಗೆ ನೀಡುತ್ತದೆ.

Exit mobile version