ನವದೆಹಲಿ: ಅಯೋಧ್ಯೆಯ ರಾಮಮಂದಿರ (Ram Mandir) ಉದ್ಘಾಟನೆ ಕಾರ್ಯಕ್ರಮಕ್ಕೆ ದೇಶದ 7 ಸಾವಿರ ಗಣ್ಯರಿಗೆ ಆಹ್ವಾನ (Invitation) ನೀಡಲಾಗಿದೆ. ರಾಜಕಾರಣಿಗಳು, ಪ್ರತಿಪಕ್ಷಗಳ ನಾಯಕರು, ಸಿನಿಮಾ ಸ್ಟಾರ್‌ಗಳು, ಕ್ರೀಡಾ ಸಾಧಕರು ಸೇರಿ ಸಾವಿರಾರು ಗಣ್ಯರಿಗೆ ಆಮಂತ್ರಣ ನೀಡಲಾಗಿದೆ. ಹಾಗಂತ, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಬರೀ ಸೆಲೆಬ್ರಿಟಿಗಳನ್ನು ಆಮಂತ್ರಿಸಿಲ್ಲ. ಗ್ರಾಮೀಣ ಭಾಗದಲ್ಲಿ ಸಾಧನೆ ಮಾಡಿದವರು, ಕರಸೇವಕರು ಸೇರಿ ಸಾಮಾನ್ಯ ಜನರಿಗೂ ಆಹ್ವಾನ ನೀಡಲಾಗಿದೆ. ಅವರಲ್ಲಿ ಕೆಲವು ಸಾಮಾನ್ಯ ವ್ಯಕ್ತಿಗಳ ಪರಿಚಯ ಇಲ್ಲಿದೆ.
700 ಶವಪರೀಕ್ಷೆ ಮಾಡಿದ ಮಹಿಳೆಗೆ ಆಮಂತ್ರಣ
ಛತ್ತೀಸ್‌ಗಢದ ನರಹರಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸಹಾಯಕಿ ಆಗಿರುವ, ಸುಮಾರು 700 ಶವ ಪರೀಕ್ಷೆ ಮಾಡಿರುವ ಸಂತೋಷಿ ದುರ್ಗಾ ಅವರಿಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಲಾಗಿದೆ. ಕಳೆದ 18 ವರ್ಷದಿಂದ ಮರಣೋತ್ತರ ಪರೀಕ್ಷೆ ಮಾಡಿರುವ ಇವರ ಸೇವೆಯನ್ನು ಗುರುತಿಸಿ ಆಹ್ವಾನ ನೀಡಲಾಗಿದೆ. “ಭಗವಾನ್ ರಾಮನೇ ನನ್ನನ್ನು ಕರೆದಂತೆ ಭಾಸವಾಗುತ್ತಿದೆ. ಆಮಂತ್ರಣ ನೀಡಿರುವುದು ಸಂತಸ ತಂದಿದೆ” ಎಂದು ಸಂತೋಷಿ ದುರ್ಗಾ ಹೇಳಿದ್ದಾರೆ.
ಚಿಂದಿ ಆಯುವ ಮಹಿಳೆಗೂ ‘ರಾಮನ’ ಕರೆ
ಛತ್ತೀಸ್‌ಗಢದ ಗಾರಿಯಾಬಂದ್ ಜಿಲ್ಲೆಯಲ್ಲಿ ಚಿಂದಿ ಆಯುವ ಬಿದುಲಾ ಬಾಯಿ ಎಂಬ 85 ವರ್ಷದ ಮಹಿಳೆಗೂ ಆಹ್ವಾನ ನೀಡಲಾಗಿದೆ. ಚಿಂದಿ ಸಂಗ್ರಹಿಸಿ ನಿತ್ಯ ಸುಮಾರು 40 ರೂ. ದುಡಿದು, ಅಷ್ಟರಲ್ಲೇ ಜೀವನ ಸಾಗಿಸುವ ಬಿದುಲಾ ಬಾಯಿ ಅವರು ರಾಮಮಂದಿರದ ದೇಣಿಗೆ ಸಂಗ್ರಹಿಸುವ ವೇಳೆ ತಮ್ಮ ದಿನದ ದುಡಿಮೆಯ ಅರ್ಧ ಭಾಗದಷ್ಟು ಅಂದರೆ, 20 ರೂಪಾಯಿಯನ್ನು ರಾಮಮಂದಿರ ನಿರ್ಮಿಸಲು ದೇಣಿಗೆ ನೀಡಿದ್ದರು. ಇವರನ್ನು ಕೂಡ ಉದ್ಘಾಟನೆ ಕಾರ್ಯಕ್ರಮಕ್ಕೆ ಆಮಂತ್ರಿಸಲಾಗಿದೆ.
ಮೋದಿ ಪರ ಧ್ವನಿ ಎತ್ತಿದ್ದ ಅಮೆರಿಕ ವೈದ್ಯನಿಗೂ ಆಮಂತ್ರಣ
ಅಮೆರಿಕವು ನರೇಂದ್ರ ಮೋದಿ ಅವರಿಗೆ 10 ವೀಸಾ ನಿಷೇಧದ ಬಳಿಕ ಮೋದಿ ಅವರ ಪರವಾಗಿ ಧ್ವನಿ ಎತ್ತಿದ, ಈ ಕುರಿತು ಹೋರಾಟ ನಡೆಸಿದ ವೈದ್ಯ ಭಾರತ್ ಬರಾಯಿ ಅವರಿಗೂ ರಾಮಮಂದಿರದ ಆಮಂತ್ರಣ ನೀಡಲಾಗಿದೆ. ಅಮೆರಿಕದಲ್ಲಿ ನೆಲೆಸಿರುವ ಭಾರತ್ ಬರಾಯಿ ಅವರಿಗೆ ಆಹ್ವಾನ ಪತ್ರಿಕೆಯನ್ನು ಕಳುಹಿಸಲಾಗಿದೆ.
ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಇಕ್ಬಾಲ್ ಅನ್ಸಾರಿ
ಬಾಬ್ರಿ ಮಸೀದಿ ಪರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಇಕ್ಬಾಲ್ ಅನ್ಸಾರಿ ಅವರಿಗೂ ರಾಮಮಂದಿರ ಟ್ರಸ್ಟ್‌ನಿಂದ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ನೀಡಲಾಗಿದೆ. ಮಸೀದಿ ಪರ ಹೋರಾಡಿದ್ದ ಇಕ್ಬಾಲ್ ಅನ್ಸಾರಿ ಅವರು ಇತ್ತೀಚೆಗೆ ಮೋದಿ ಅವರು ಅಯೋಧ್ಯೆಗೆ ತೆರಳಿದ್ದಾಗ ಅವರ ಮೇಲೆ ಹೂಗಳನ್ನು ಚೆಲ್ಲಿ ಸ್ವಾಗತಿಸಿದ್ದರು.
ಇಬ್ಬರು ಕರಸೇವಕರ ಸಹೋದರಿಗೆ ಆಹ್ವಾನ
1990ರಲ್ಲಿ ನಡೆದ ರಾಮಮಂದಿರ ಹೋರಾಟದ ವೇಳೆ ಪೊಲೀಸರ ಗುಂಡಿಗೆ ಬಲಿಯಾದ ರಾಮ್ ಕುಮಾರ್ ಕೊಠಾರಿ ಹಾಗೂ ಶರದ್ ಕುಮಾರ್ ಕೊಠಾರಿ ಎಂಬ ಇಬ್ಬರು ಕರಸೇವಕರ ಸಹೋದರಿಯಾದ ಪೂರ್ಣಿಮಾ ಕೊಠಾರಿ ಅವರಿಗೆ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಆಹ್ವಾನ ನೀಡಲಾಗಿದೆ.
ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆ ಸಮಾರಂಭದ ಆಹ್ವಾನ ಪಡೆದ ದಕ್ಷಿಣ ಭಾರತ ಸಿನಿರಂಗದ ತಾರೆಯರು; ಫೋಟೊ ಗ್ಯಾಲರಿ ಇಲ್ಲಿದೆ
ಇದರಿಂದಾಗಿ ಪೂರ್ಣಿಮಾ ಕೊಠಾರಿ ಅವರಿಗೆ ಭಾರಿ ಸಂತಸವಾಗಿದೆ. 1990ರ ನವೆಂಬರ್ 2ರಂದು ಅಯೋಧ್ಯೆಯಲ್ಲಿ ನಡೆದ ಪೊಲೀಸ್ ಗುಂಡಿನ ದಾಳಿಯಲ್ಲಿ ರಾಮ್ ಮತ್ತು ಶರದ್ ಮೃತಪಟ್ಟಿದ್ದರು. 1990ರಲ್ಲಿ ನಡೆದ ರಾಮ ರಥ ಯಾತ್ರೆಯನ್ನು ಪಾಲ್ಗೊಂಡಿದ್ದ ಅವರು ಬಾಬರಿ ಕಟ್ಟಡದ ಮೇಲೆ ಕೇಸರಿ ಧ್ವಜವನ್ನು ನೆಟ್ಟಿದ್ದರು. ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ಪೂರ್ಣಿಮಾ ಕೊಠಾರಿ ಅವರು ಈಗಾಗಲೇ ಅಯೋಧ್ಯೆ ತಲುಪಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ