ನವದೆಹಲಿ: ಅದಕ್ಷತೆ, ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಟೆಲಿಕಮ್ಯುನಿಕೇಷನ್ಸ್ ಇಲಾಖೆಯ 10 ಹಿರಿಯ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಅದರಲ್ಲೂ, ಉತ್ತಮ ಆಡಳಿತದ ದಿನ ಆಚರಿಸಿದ ಮರುದಿನವೇ ಅಶ್ವಿನಿ ವೈಷ್ಣವ್ ಅವರು ಕ್ರಮ ತೆಗೆದುಕೊಂಡಿದ್ದಾರೆ.
“ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ, ಅದಕ್ಷ ಅಧಿಕಾರಿಗಳ ವಿರುದ್ಧ ಕ್ರಮದ ಭಾಗವಾಗಿ ಅಶ್ವಿನಿ ವೈಷ್ಣವ್ ಅವರು 10 ಅಧಿಕಾರಿಗಳು ಕಡ್ಡಾಯ ನಿವೃತ್ತಿ ತೆಗೆದುಕೊಳ್ಳಬೇಕು ಎಂಬುದಾಗಿ ಆದೇಶಿಸಿದ್ದಾರೆ. 10 ಹಿರಿಯ ಅಧಿಕಾರಿಗಳಲ್ಲಿ ಒಂಬತ್ತು ಅಧಿಕಾರಿಗಳು ನಿರ್ದೇಶಕರ ಶ್ರೇಣಿ ಅಧಿಕಾರಿಗಳಾಗಿದ್ದರು. ಮತ್ತೊಬ್ಬರು ಜಂಟಿ ಕಾರ್ಯದರ್ಶಿ ರ‍್ಯಾಂಕ್ ಅಧಿಕಾರಿಯಾಗಿದ್ದರು” ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಕಳೆದ ಸೆಪ್ಟೆಂಬರ್‌ನಲ್ಲಿ ಅಶ್ವಿನಿ ವೈಷ್ಣವ್ ಅವರ ನೇತೃತ್ವದಲ್ಲಿ ನಡೆದ ಸಭೆಯ ವೇಳೆ ಬಿಎಸ್‌ಎನ್‌ಎಲ್ ಹಿರಿಯ ಅಧಿಕಾರಿಯೊಬ್ಬರು ನಿದ್ದೆ ಮಾಡುತ್ತಿದ್ದರು ಎಂಬ ಕಾರಣಕ್ಕಾಗಿ ಅವರಿಗೂ ಕಡ್ಡಾಯ ನಿವೃತ್ತಿಗೆ ಸೂಚಿಸಲಾಗಿತ್ತು. ರೈಲ್ವೆ ಖಾತೆಯನ್ನೂ ಹೊಂದಿರುವ ಅಶ್ವಿನಿ ವೈಷ್ಣವ್ ಅವರು ಇದೇ ಕಾರಣಗಳಿಂದಾಗಿ 40 ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಯ ಶಿಕ್ಷೆ ವಿಧಿಸಿದ್ದಾರೆ.
ಇದನ್ನೂ ಓದಿ | Ashwini Vaishnaw | ನೂತನ ಸಮಗ್ರ ಡಿಜಿಟಲ್ ಆರ್ಥಿಕತೆ ನಿಯಂತ್ರಣ ನೀತಿ ಜಾರಿಗೆ ಕ್ರಮ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್