Site icon Vistara News

Ranbir Kapoor: ರಣಬೀರ್‌ ಕಪೂರ್‌ ವಿರುದ್ಧ ಬಿತ್ತು ಕೇಸ್;‌ ಅನಿಮಲ್‌ ಸಕ್ಸೆಸ್‌ ಬೆನ್ನಲ್ಲೇ ಸಂಕಷ್ಟ

Ranbir Kapoor

Complaint against Ranbir Kapoor for 'hurting sentiments' over viral Christmas lunch video

ಮುಂಬೈ: ಬಾಲಿವುಡ್‌ ನಟ ರಣಬೀರ್‌ ಕಪೂರ್‌ (Ranbir Kapoor) ನಟಿಸಿರುವ ಅನಿಮಲ್‌ (Animal) ಚಿತ್ರವು ಭರ್ಜರಿ ಹಿಟ್‌ ಆಗಿದೆ. ಭಾರತದಲ್ಲಿಯೇ 500 ಕೋಟಿ ರೂ.ಗಿಂತ ಹೆಚ್ಚಿನ ಹಣ ಗಳಿಸಿದ್ದು, ರಣಬೀರ್‌ ಕಪೂರ್‌ ಅವರ ಸಿನಿಮಾ ಜರ್ನಿಗೆ ಹೊಸ ತಿರುವು ನೀಡಿದೆ. ಇದರ ಬೆನ್ನಲ್ಲೇ, ಧಾರ್ಮಿಕ ಭಾವನೆಗಳಿಗೆ (Religious Sentiments) ಧಕ್ಕೆ ತಂದ ಆರೋಪದ ಹಿನ್ನೆಲೆಯಲ್ಲಿ ನಟ ರಣಬೀರ್‌ ಕಪೂರ್‌ ಅವರ ವಿರುದ್ಧ ದೂರು ದಾಖಲಾಗಿದೆ. ರಣಬೀರ್‌ ಕಪೂರ್‌ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಮುಂಬೈನ ಘಟ್ಕೋಪರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಕ್ರಿಸ್‌ಮಸ್‌ ಹಿನ್ನೆಲೆಯಲ್ಲಿ ರಣಬೀರ್‌ ಕಪೂರ್‌ ಹಾಗೂ ಅವರ ಕುಟುಂಬಸ್ಥರು ಇರುವ ಸಂಭ್ರಮಾಚರಣೆಯ ವಿಡಿಯೊ ಹಂಚಿಕೊಳ್ಳಲಾಗಿದ್ದು, ರಣಬೀರ್‌ ಕಪೂರ್‌ ಹಾಗೂ ಅವರ ಕುಟುಂಬಸ್ಥರು ಆಚರಣೆ ಮಾಡಿದ ರೀತಿಯನ್ನು ಖಂಡಿಸಿ ಪ್ರಕರಣ ದಾಖಲಿಸಲಾಗಿದೆ. ಕೇಕ್‌ ಮೇಲೆ ಮದ್ಯ ಸುರಿದು, ಬೆಂಕಿ ಹಚ್ಚಿದ ಬಳಿಕ, ಜೈ ಮಾತಾ ದಿ ಎಂದು ಘೋಷಣೆ ಕೂಗಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಅಗ್ನಿಯು ಹಿಂದುತ್ವದ ಸಂಕೇತವಾಗಿದ್ದು, ರಣಬೀರ್‌ ಕಪೂರ್‌ ಅವರು ಸಂಭ್ರಮಾಚರಣೆ ಹೆಸರಿನಲ್ಲಿ ಹಿಂದುಗಳ ನಂಬಿಕೆಗೆ ಧಕ್ಕೆ ತಂದಿದ್ದಾರೆ. ಒಂದು ಧರ್ಮದ ಆಚರಣೆ ವೇಳೆ ಇನ್ನೊಂದು ಧರ್ಮೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಸಂಜಯ್‌ ತಿವಾರಿ ಎಂಬುವರು ದೂರು ದಾಖಲಿಸಿದ್ದಾರೆ.

ರಣಬೀರ್‌ ಕಪೂರ್‌, ಪತ್ನಿ ಆಲಿಯಾ ಭಟ್‌ ಸೇರಿ ಅವರ ಕುಟುಂಬಸ್ಥರು ಕ್ರಿಸ್‌ಮಸ್‌ಅನ್ನು ಸಂಭ್ರಮದಿಂದ ಆಚರಿಸಿದ ವಿಡಿಯೊ ವೈರಲ್‌ ಆಗಿತ್ತು. ಇದೇ ವೇಳೆ ಕೇಕ್‌ ಮೇಲೆ ವ್ಯಕ್ತಿಯೊಬ್ಬರು ಮದ್ಯವನ್ನು ಸುರಿದಿದ್ದರು. ಇದೇ ವೇಳೆ ಜೈ ಮಾತಾ ದಿ ಎಂಬ ಘೋಷಣೆಯೂ ಕೇಳಿಬಂದಿತ್ತು. ಇದೇ ಈಗ ವಿವಾದಕ್ಕೆ ಕಾರಣವಾಗಿದೆ. ಆದಾಗ್ಯೂ, ಕೇಸ್‌ ದಾಖಲಾಗಿರುವ ಕುರಿತು ನಟ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಣಬೀರ್ ಜತೆಗೆ ʼಅನಿಮಲ್ʼ ಚಿತ್ರದಲ್ಲಿ ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ತೃಪ್ತಿ ಡಿಮ್ರಿ, ಶಕ್ತಿ ಕಪೂರ್ ಮತ್ತು ಪ್ರೇಮ್ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ʼಅನಿಮಲ್ʼ 3 ಗಂಟೆ 21 ನಿಮಿಷಗಳ ಅವಧಿಯ ಚಲನಚಿತ್ರವಾಗಿದೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿ ಬಂದಿದೆ.

ಇದನ್ನೂ ಓದಿ: Triptii Dimri: ತೃಪ್ತಿ ಡಿಮ್ರಿ ಬೆತ್ತಲೆ ಸೀನ್‌; 5 ನಿಮಿಷಕ್ಕೊಮ್ಮೆ ನಟಿಯ ಬಳಿ ರಣಬೀರ್ ಕೇಳಿದ್ದೇನು?

‘ಜವಾನ್’, ‘ಪಠಾಣ್‌’ ಮತ್ತು ‘ಗದರ್ 2’ ನಂತರ ‘ಅನಿಮಲ್’ ಈಗ ವರ್ಷದ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರ ಹೊಮ್ಮಿದೆ. ಶಾರುಖ್ ಖಾನ್ ಅವರ ‘ಜವಾನ್’ ಭಾರತದಲ್ಲಿ 643.87 ಕೋಟಿ ರೂ. ಗಳಿಸಿದರೆ, ‘ಪಠಾಣ್’ 543.05 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಸನ್ನಿ ಡಿಯೋಲ್ ಅವರ ‘ಗದರ್ 2’ 525.45 ಕೋಟಿ ರೂ. ಗಳಿಸಿತ್ತು. ಇತ್ತ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವ ಸಾಧ್ಯತೆ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version