ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಕಾಶಿ ವಿಶ್ವನಾಥ ದೇಗುಲದಲ್ಲಿ (Kashi Vishwanath Temple) ಭದ್ರತೆಗಾಗಿ ನಿಯೋಜಿಸಿರುವ ಪೊಲೀಸ್ ಸಿಬ್ಬಂದಿಯ ಸಮವಸ್ತ್ರವನ್ನು (Police Uniform) ಬದಲಾಯಿಸಲಾಗಿದೆ. ಪೊಲೀಸರು ಖಾಕಿ ಸಮವಸ್ತ್ರದ ಬದಲು ಧೋತಿ ಕುರ್ತಾ ದಿರಸು ಧರಿಸಲು ಆದೇಶಿಸಲಾಗಿದ್ದು, ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ, ಪೊಲೀಸರ ಸಮವಸ್ತ್ರವನ್ನು ಬದಲಾಯಿಸಿದ್ದಕ್ಕೆ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪೊಲೀಸ್ ಇಲಾಖೆಯ ನಿಯಮಗಳ ಪ್ರಕಾರ ಪೊಲೀಸರು ಅರ್ಚಕರು ಧರಿಸುವ ಬಟ್ಟೆಗಳನ್ನೇ ಧರಿಸಬಹುದೆ? ಯಾರು ಇಂತಹ ಆದೇಶವನ್ನು ಹೊರಡಿಸಿದ್ದಾರೋ, ಮೊದಲು ಅವರನ್ನು ಅಮಾನತುಗೊಳಿಸಬೇಕು. ಮುಂದಿನ ದಿನಗಳಲ್ಲಿ ಯಾರಾದರೂ ಇಂತಹ ಸಮವಸ್ತ್ರವನ್ನು ದುರುಪಯೋಗಪಡಿಸಿಕೊಂಡು, ಸಾರ್ವಜನಿಕರ ಹಣ ಲೂಟಿ ಮಾಡಿದರೆ ಯಾರು ಹೊಣೆ? ಇದಕ್ಕೆ ಉತ್ತರ ಪ್ರದೇಶ ಸರ್ಕಾರ ಹಾಗೂ ಆಡಳಿತವು ಹೊಣೆ ಹೊರಬಹುದೆ? ಇಂತಹ ಕ್ರಮವೇ ಖಂಡನೀಯವಾದುದು” ಎಂಬುದಾಗಿ ಅಖಿಲೇಶ್ ಯಾದವ್ ಅವರು ಪೋಸ್ಟ್ ಮಾಡಿದ್ದಾರೆ.
पुजारी के वेश में पुलिसकर्मियों का होना किस ‘पुलिस मैन्युअल’ के हिसाब से सही है? इस तरह का आदेश देनेवालों को निलंबित किया जाए। कल को इसका लाभ उठाकर कोई भी ठग भोली-भाली जनता को लूटेगा तो उप्र शासन-प्रशासन क्या जवाब देगा।
— Akhilesh Yadav (@yadavakhilesh) April 11, 2024
निंदनीय! pic.twitter.com/BQUFmb7xAA
ಕಾಶಿ ವಿಶ್ವನಾಥ ದೇವಾಲಯದಲ್ಲಿ ಪುರುಷ ಪೊಲೀಸರು ಧೋತಿ ಕುರ್ತಾ ಹಾಗೂ ಮಹಿಳಾ ಪೊಲೀಸರು ಸಲ್ವಾರ್ ಕುರ್ತಾ ಧರಿಸಿ ಕಾರ್ಯನಿರ್ವಹಿಸಿದ, ಭಕ್ತರನ್ನು ನಿಯಂತ್ರಿಸಿದ ವಿಡಿಯೊವನ್ನು ಸಮಾಜವಾದಿ ಪಕ್ಷವು ಹಂಚಿಕೊಂಡಿದೆ. ದೇವಾಲಯದಲ್ಲಿ ಕಾರ್ಯನಿರ್ವಹಿಸುವ, ಭದ್ರತೆ ಒದಗಿಸುವ ಪೊಲೀಸರ ಸಮವಸ್ತ್ರವನ್ನು ಬದಲಾಯಿಸಿರುವುದಕ್ಕೆ ಪಕ್ಷದ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಪೊಲೀಸ್ ಇಲಾಖೆ ನಿರ್ಧಾರದ ಕುರಿತು ಪರ-ವಿರೋಧ ಚರ್ಚೆಯಾಗುತ್ತಿದೆ.
ನಿರ್ಧಾರಕ್ಕೆ ಇಲಾಖೆ ಸಮರ್ಥನೆ
ದೇವಾಲಯದಲ್ಲಿ ನಿಯೋಜನೆಗೊಂಡ ಪೊಲೀಸರ ಸಮವಸ್ತ್ರದ ಬದಲಾವಣೆ ಕುರಿತು ವಾರಾಣಸಿ ಪೊಲೀಸ್ ಆಯುಕ್ತ ಮೋಹಿತ್ ಅಗರ್ವಾಲ್ ಅವರು ಪ್ರತಿಕ್ರಿಯಿಸಿದ್ದು, ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. “ಭಕ್ತರ ಹಿತದೃಷ್ಟಿ, ಜನರ ನಿಯಂತ್ರಣದ ದೃಷ್ಟಿಯಿಂದ ಇಂತಹ ಕ್ರಮ ತೆಗೆದುಕೊಳ್ಳಲಾಗಿದೆ. ಪೊಲೀಸ್ ಅಧಿಕಾರಿಗಳು ಧೋತಿ ಕುರ್ತಾ, ಸಲ್ವಾರ್ ಕುರ್ತಾದಲ್ಲಿ ಇದ್ದರೆ ಭಕ್ತರು ಯಾವುದೇ ಅಳುಕಿಲ್ಲದೆ ಸಂವಹನ ಸಾಧಿಸಲು ಇದು ನೆರವಾಗಲಿದೆ. ಅಷ್ಟಕ್ಕೂ, ಪೊಲೀಸರು ದೇವಾಲಯದಲ್ಲಿ ಕೆಲಸ ಮಾಡುವ ರೀತಿಯೇ ಬೇರೆಯಾಗಿರುತ್ತದೆ. ಭಕ್ತರು ಇಲ್ಲಿ ದೇವರ ದರ್ಶನಕ್ಕೆ ಬರುತ್ತಾರೆಯೇ ಹೊರತು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಮಾಡಲು ಅಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!