Site icon Vistara News

Congress Candidates: ಕಾಂಗ್ರೆಸ್‌ 4ನೇ ಪಟ್ಟಿ ಪ್ರಕಟ; ಮೋದಿ ವಿರುದ್ಧ ಅಜಯ್‌ ರಾಯ್ ಕಣಕ್ಕೆ

Ajay Rai

Congress Announces 4th Candidates List; Ajay Rai To Contest Against Narendra Modi In Varanasi

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election) ಭರ್ಜರಿಯಾಗಿಯೇ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್‌ ನಾಲ್ಕನೇ ಅಭ್ಯರ್ಥಿಗಳ (Congress Candidates) ಪಟ್ಟಿ ಬಿಡುಗಡೆ ಮಾಡಿದೆ. ನಾಲ್ಕನೇ ಪಟ್ಟಿಯಲ್ಲಿ 46 ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ಕಾಂಗ್ರೆಸ್‌ ಅಜಯ್‌ ರಾಯ್ ಅವರನ್ನು ಕಣಕ್ಕಿಳಿಸಿದೆ. ನರೇಂದ್ರ ಮೋದಿ ಅವರು ವಾರಾಣಸಿಯಿಂದಲೇ ಮೂರನೇ ಬಾರಿ ಸ್ಪರ್ಧಿಸುತ್ತಿದ್ದು, ಇವರಿಗೆ ಅಜಯ್‌ ರಾಯ್ ಸವಾಲೊಡ್ಡಿದ್ದಾರೆ.

ಕಾಂಗ್ರೆಸ್‌ ನಾಲ್ಕನೇ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿಲ್ಲ. ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಹಾಗೂ ಬಳ್ಳಾರಿ ಕ್ಷೇತ್ರಗಳಿಗೆ ನಾಲ್ಕನೇ ಪಟ್ಟಿಯಲ್ಲಿ ಟಿಕೆಟ್‌ ಘೋಷಿಸಿಲ್ಲ. ಈ ನಾಲ್ಕು ಕ್ಷೇತ್ರ ಬಿಟ್ಟು ಉಳಿದೆಲ್ಲ ಕ್ಷೇತ್ರಗಳಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಮಾಡಿದೆ. ಇನ್ನು ನಾಲ್ಕನೇ ಪಟ್ಟಿಯಲ್ಲಿ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ಹೆಸರಿದ್ದು, ಅವರು ಶಿವಗಂಗಾ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿದಿದ್ದಾರೆ.

ಡ್ಯಾನಿಶ್‌ ಅಲಿಗೆ ಟಿಕೆಟ್‌

ಕೆಲ ದಿನಗಳ ಹಿಂದಷ್ಟೇ ಬಿಎಸ್‌ಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಆಪ್ತರೂ ಆದ ಡ್ಯಾನಿಶ್‌ ಅಲಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಡ್ಯಾನಿಶ್‌ ಅಲಿ ಅವರು ಉತ್ತರ ಪ್ರದೇಶ ಅಮ್ರೋಹದಿಂದ ಕಣಕ್ಕಿಳಿದಿದ್ದಾರೆ. ಅವರು ಕಳೆದ ಬಾರಿಯೂ ಇದೇ ಕ್ಷೇತ್ರದಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಾಗ್ಪುರದಲ್ಲಿ ವಿಕಾಸ್‌ ಠಾಕ್ರೆಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ನಾಗ್ಪುರದಲ್ಲಿ ನಿತಿನ್‌ ಗಡ್ಕರಿ ವಿರುದ್ಧ ವಿಕಾಸ್‌ ಠಾಕ್ರೆ ಸೆಣಸಾಡಲಿದ್ದಾರೆ. ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಅವರು ರಾಯಗಢ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಸಚಿವರ ಮಕ್ಕಳಿಗೆ ಕಾಂಗ್ರೆಸ್‌ ಟಿಕೆಟ್‌

ಕರ್ನಾಟಕದಲ್ಲಿ ಸಚಿವರ ಪುತ್ರರು ಹಾಗೂ ಪುತ್ರಿಯರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಬೆಳಗಾವಿ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಪುತ್ರ ಮೃಣಾಲ್‌ ಹೆಬ್ಬಾಳ್ಕರ್,‌ ಚಿಕ್ಕೋಡಿಯಿಂದ ಸತೀಶ್‌ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಮತ್ತು ಬೀದರ್‌ನಿಂದ ಈಶ್ವರ್‌ ಖಂಡ್ರೆ ಅವರ ಪುತ್ರ ಸಾಗರ್‌ ಖಂಡ್ರೆ ಅವರಿಗೆ ಟಿಕೆಟ್‌ ನೀಡಲಾಗಿದೆ. ಇದಲ್ಲದೆ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ, ಶಿವಾನಂದ ಪಾಟೀಲ್‌ ಪುತ್ರಿ ಸಂಯುಕ್ತಾ ಪಾಟೀಲ್‌, ಎಸ್‌.ಎಸ್‌. ಮಲ್ಲಿಕಾರ್ಜುನ್‌ ಪತ್ನಿ ಪ್ರಭಾ ಮಲ್ಲಿಕಾರ್ಜುನ್‌, ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ಅವರಿಗೆ ಟಿಕೆಟ್‌ ನೀಡಲಾಗಿದೆ.

ಇದನ್ನೂ ಓದಿ: Voter Id : ಮನೆಯಲ್ಲೇ ಕುಳಿತು ಮತಪಟ್ಟಿಗೆ ಈಗಲೂ ನಿಮ್ಮ ಹೆಸರು ಸೇರಿಸಬಹುದು; ಮಾ.25 ಲಾಸ್ಟ್ ಡೇಟ್

ಮಾರ್ಚ್‌ 8ರಂದು ಬಿಡುಗಡೆಯಾದ ಮೊದಲ ಪಟ್ಟಿಯಲ್ಲಿ ಏಳು ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದ ಕಾಂಗ್ರೆಸ್‌ ಎರಡನೇ ಪಟ್ಟಿಯಲ್ಲಿ 17 ‌ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ. ಇನ್ನು ನಾಲ್ಕು ಕ್ಷೇತ್ರಗಳ ಟಿಕೆಟ್‌ ಪೆಂಡಿಂಗ್‌ ಇಡಲಾಗಿತ್ತು. ರಾಜ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನವನ್ನು ಗಳಿಸಿದ್ದ ಕಾಂಗ್ರೆಸ್‌ ಈ ಬಾರಿ 20 ಸ್ಥಾನಗಳ ಟಾರ್ಗೆಟ್‌ ಇಟ್ಟುಕೊಂಡು ಅಳೆದೂ ತೂಗಿ ಟಿಕೆಟ್‌ ಹಂಚಿಕೆ ನಡೆಸಿದೆ. ರಾಜ್ಯಮಟ್ಟದಲ್ಲಿ ತಲಾ ಎರಡು ಅಥವಾ ಮೂರು ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಕೇಂದ್ರೀಯ ಚುನಾವಣಾ ಸಮಿತಿಯನ್ನು ಮುಕ್ತ ಚರ್ಚೆ ನಡೆಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version