Site icon Vistara News

Congress Party : ಲೋಕ ಸಭೆ ಚುನಾವಣೆ ಖರ್ಚಿಗೆ ಕಾಂಗ್ರೆಸ್​ನಿಂದ ಕ್ರೌಡ್ ಫಂಡಿಂಗ್

Congress Party

ನವದೆಹಲಿ: ಮುಂಬರುವ ಲೋಕಸಭಾ ಚುನಾವಣಾ ವೆಚ್ಚಕ್ಕಾಗಿ ಕ್ರೌಂಡ್ ಫಂಡಿಂಗ್​ ಮಾಡಲು ಕಾಂಗ್ರೆಸ್ ಪಕ್ಷ (Congress Party) ನಿರ್ಧರಿಸಿದೆ. ಡಿಸೆಂಬರ್ 18ರಂದು ‘ದೇಶಕ್ಕಾಗಿ ದೇಣಿಗೆ’ ಎಂಬ ಹೆಸರಲ್ಲಿ ಆನ್​ಲೈನ್​ ಕ್ರೌಡ್ ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸುವುದಾಗಿ ಕಾಂಗ್ರೆಸ್ ಶನಿವಾರ ಘೋಷಿಸಿದೆ. ಇದು 1920-21 ರಲ್ಲಿ ಮಹಾತ್ಮ ಗಾಂಧಿಯವರ ಐತಿಹಾಸಿಕ ‘ತಿಲಕ್ ಸ್ವರಾಜ್ ನಿಧಿ’ ಯಿಂದ ಸ್ಫೂರ್ತಿ ಪಡೆದುಕೊಂಡಿದೆ ಎಂಬುದಾಗಿಯೂ ಹೇಳಿದೆ. 138 ರೂ, 1380 ರೂ, 13,800 ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚು ದೇಣಿಗೆ ನೀಡಬಹುದು ಎಂದು ತಿಳಿಸಿದೆ. ಕಾಂಗ್ರೆಸ್​​ನ 138ನೇ ಸಂಸ್ಥಾಪನಾ ದಿನಾಚರಣೆ ಡಿಸೆಂಬರ್​ 18ರಂದು ನಡೆಯಲಿದ್ದು ಅಂದು ಅಭಿಯಾನಕ್ಕೆ ಚಾಲನೆ ಸಿಗಲಿದೆ ಹಾಗೂ ಮೊತ್ತವನ್ನು 138ರಿಂದ ಆರಂಭಗೊಳ್ಳುವಂತೆ ಮಾಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, “ಇಂದು ನಾವು ‘ದೇಶಕ್ಕಾಗಿ ದೇಣಿಗೆ ಎಂಬ ಆನ್​ಲೈನ್​ ಕ್ರೌಡ್ ಫಂಡಿಂಗ್ ಕಾರ್ಯಕ್ರಮವನ್ನು ಘೋಷಿಸುತ್ತಿದ್ದೇವೆ. ಈ ಯೋಜನೆಯು ಮಹಾತ್ಮ ಗಾಂಧಿಯವರ ಐತಿಹಾಸಿಕ “ತಿಲಕ್ ಸ್ವರಾಜ್ ನಿಧಿ” ಯಿಂದ 1920-21 ರಲ್ಲಿ ಸ್ಫೂರ್ತಿ ಪಡೆದಿದೆ. ಸಮಾನ ಸಂಪನ್ಮೂಲ ವಿತರಣೆ ಮೂಲಕ ಸಮೃದ್ಧವಾದ ಭಾರತವನ್ನು ರಚಿಸುವ ಯೋಜನೆಯೊಂದಿಗೆ ನಮ್ಮ ಪಕ್ಷವನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ಹೇಳಿದ್ದಾರೆ.

‘ಉತ್ತಮ ಭಾರತಕ್ಕಾಗಿ ದೇಣಿಗೆ’ ಎಂಬಯದಾಗಿ ಕ್ರೌಡ್ ಫಂಡಿಂಗ್​ನ ಉದ್ಘಾಟನಾ ಅಭಿಯಾನ ನಡೆಯಲಿದೆ. ಇದು ಭಾರತೀಯ ರಾಷ್ಟ್ರೀಯ ಕಾಂಗ್ರಸ್​​ನ 138 ವರ್ಷಗಳ ಪ್ರಯಾಣವನ್ನು ಸ್ಮರಿಸುತ್ತದೆ ನಮ್ಮ ಇತಿಹಾಸವನ್ನು ಸ್ವೀಕರಿಸಿ, ಉತ್ತಮ ಭಾರತಕ್ಕಾಗಿ ಪಕ್ಷದ ನಿರಂತರ ಬದ್ಧತೆಯನ್ನು ಸಂಕೇತಿಸುವ 138 ಅಥವಾ 1380 ಅಥವಾ 13,800 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ದಾನ ಮಾಡಲು ನಾವು ಬೆಂಬಲಿಗರನ್ನು ಕೋರುತ್ತೇವೆ ಎಂದು ವೇಣುಗೋಪಾಲ್ ಮಾಹಿತಿ ಹೇಳಿದ್ದಾರೆ.

ಈ ಆನ್ಲೈನ್ ಕ್ರೌಡ್​ಫಂಡಿಂಗ್​ಗಾಗಿ ಎರಡು ಚಾನೆಲ್​ಗಳನ್ನು ರಚಿಸಲಾಗಿದೆ. ಒಂದು ಅದಕ್ಕೆಂದೇ ಮೀಸಲಾದ ಆನ್ಲೈನ್ ಪೋರ್ಟಲ್ ಆಗಿದ್ದು donateinc.in ಮೂಲಕ ದೇಣಿಗೆ ನೀಡಬಹುದು. ಎರಡನೆಯದು ಅಧಿಕೃತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವೆಬ್​ಸೈಟ್​ www.inc.in ಮೂಲಕ ದೇಣಿಗೆ ನೀಡಬಹುದು ಎಂದು ಅವರು ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರಿಂದ ಚಾಲನೆ

ದೇಣಿಗೆ ಲಿಂಕ್ ಏಕಕಾಲಕ್ಕೆ ಲೈವ್ ಆಗಲಿದೆ. ಡಿಸೆಂಬರ್ 18ರಂದು ನವದೆಹಲಿಯಲ್ಲಿ ಐಎನ್​ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ಅಭಿಯಾನವನ್ನು ಅಧಿಕೃತವಾಗಿ ಪ್ರಾರಂಭಿಸಲಿದ್ದಾರೆ ಎಂದು ವೇಣುಗೋಪಾಲ್ ಹೇಳಿದರು.

ಇದನ್ನೂ ಓದಿ: Lok Sabha : ಉನ್ನತ ಸಮಿತಿಯಿಂದ ಸಂಸತ್​ ಭದ್ರತೆ ಉಲ್ಲಂಘನೆಯ ಪ್ರಕರಣ ತನಿಖೆ

“ಪತ್ರಿಕಾಗೋಷ್ಠಿಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲು ನಾವು ಎಲ್ಲಾ ರಾಜ್ಯ ಘಟಕದ ಮುಖ್ಯಸ್ಥರಿಗೆ ಕರೆ ನೀಡುತ್ತೇವೆ. ಈ ಅಭಿಯಾನವು ಪ್ರಾಥಮಿಕವಾಗಿ ಸಂಸ್ಥಾಪನಾ ದಿನವಾದ ಡಿಸೆಂಬರ್ 28 ರವರೆಗೆ ಆನ್ ಲೈನ್ ನಲ್ಲಿರಲಿದೆ. ನಂತರ ನಾವು ಸ್ವಯಂಸೇವಕರು ಮನೆ ಮನೆಗೆ ಭೇಟಿ ನೀಡುವುದು ಸೇರಿದಂತೆ ತಳ ಹಂತದಲ್ಲಿ ಅಭಿಯಾನಗಳನ್ನು ನಡೆಸುತ್ತೇವೆ. ಪ್ರತಿ ಬೂತ್ ನಲ್ಲಿ ಕನಿಷ್ಠ ಹತ್ತು ಮನೆಗಳನ್ನು ಗುರಿಯಾಗಿಸಿಕೊಂಡು ಪ್ರತಿ ಮನೆಯಿಂದ ಕನಿಷ್ಠ 138 ರೂ.ಗಳ ದೇಣಿಗೆಯನ್ನು ಪಡೆಯುತ್ತೇವೆ ” ಎಂದು ಅವರು ಹೇಳಿದರು.

ನಮ್ಮ ರಾಜ್ಯ ಮಟ್ಟದ ಪದಾಧಿಕಾರಿಗಳು, ನಮ್ಮ ಚುನಾಯಿತ ಪ್ರತಿನಿಧಿಗಳು, ಡಿಸಿಸಿ ಅಧ್ಯಕ್ಷರು, ಪಿಸಿಸಿ ಅಧ್ಯಕ್ಷರು ಮತ್ತು ಎಐಸಿಸಿ ಪದಾಧಿಕಾರಿಗಳು ತಲಾ ಕನಿಷ್ಠ 1,380 ರೂ.ಗಳನ್ನು ನೀಡುವುದನ್ನು ನಾವು ಆಶಿಸುತ್ತೇವೆ ಎಂದು ಅವರು ಹೇಳಿದರು.

28ರಂದು ಬೃಹತ್​ ರ್ಯಾಲಿ

ಸಂಸ್ಥಾಪನಾ ದಿನವಾದ ಡಿಸೆಂಬರ್ 28 ರಂದು ನಾಗ್ಪುರದಲ್ಲಿ ಪಕ್ಷವು ಬೃಹತ್ ರ್ಯಾಲಿಯನ್ನು ನಡೆಸಲಿದೆ ಎಂದು ವೇಣುಗೋಪಾಲ್ ಹೇಳಿದರು. “ಶುಕ್ರವಾರ (ಡಿಸೆಂಬರ್​15ರಂದು) ನಾವು ನಾಗ್ಪುರದಲ್ಲಿ ವಿವರವಾದ ಸಭೆ ನಡೆಸಿದ್ದೇವೆ. ಕನಿಷ್ಠ 10 ಲಕ್ಷ ಕಾರ್ಯಕರ್ತರು ಈ ಮೆಗಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಭಾರತದಾದ್ಯಂತದ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ವೇಣುಗೋಪಾಲ್ ಹೇಳಿದರು.

ದೇಣಿಗೆ ನೀಡಲು ಬಯಸುವವರು ಭಾರತೀಯ ಪ್ರಜೆಯಾಗಿರಬೇಕು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಎಂದು ಕಾಂಗ್ರೆಸ್ ಖಜಾಂಚಿ ಅಜಯ್ ಮಾಕೆನ್ ಹೇಳಿದ್ದಾರೆ. ದಾನಿಗಳು ದೇಣಿಗೆ ಪ್ರಮಾಣಪತ್ರವನ್ನು ಸಹ ಪಡೆಯುತ್ತಾರೆ ಎಂದು ಮಾಕೆನ್ ಹೇಳಿದರು.

Exit mobile version