ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಆಕ್ಷೇಪಾರ್ಹವಾಗಿ ಚಿತ್ರಿಸಿರುವ ಬಿಬಿಸಿ ಡಾಕ್ಯುಮೆಂಟರಿಗೆ ಬ್ರಿಟನ್‌ನಲ್ಲಿಯೇ ವಿರೋಧ ವ್ಯಕ್ತವಾಗಿದೆ. ಆದಾಗ್ಯೂ, ಭಾರತದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋದಿ ಅವರಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿದೆ. ಹಾಗಾಗಿ, ಕೇಂದ್ರ ಸರ್ಕಾರವು ಡಾಕ್ಯುಮೆಂಟರಿಯ ಲಿಂಕ್, ಪೋಸ್ಟ್ ಹಾಗೂ ವಿಡಿಯೊಗಳನ್ನು ಟ್ವಿಟರ್ ಹಾಗೂ ಯುಟ್ಯೂಬ್‌ನಿಂದ ಡಿಲೀಟ್ ಮಾಡಿಸಿದೆ. ಆದರೂ, ಡಾಕ್ಯುಮೆಂಟರಿ ವಿಚಾರವೀಗ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಟೀಕೆ, ವಾಗ್ವಾದಕ್ಕೆ ಕಾರಣವಾಗಿದೆ.
ಬಿಬಿಸಿ ಡಾಕ್ಯುಮೆಂಟರಿ ಪರ ನಿಂತ ಕಾಂಗ್ರೆಸ್
ಇಂಡಿಯಾ: ದಿ ಮೋದಿ ಕ್ವಶ್ಚನ್ ಡಾಕ್ಯುಮೆಂಟರಿ ಪರ ಕಾಂಗ್ರೆಸ್ ನಿಂತಿದೆ. “2002ರ ಗೋದ್ರಾ ಹತ್ಯಕಾಂಡವು ಭಾರತದ ಇತಿಹಾಸದ ಕರಾಳ ಅಧ್ಯಾಯವಾಗಿದೆ. ಬಿಬಿಸಿ ಸೇರಿ ಯಾವುದೇ ಚಾನೆಲ್ ಡಾಕ್ಯುಮೆಂಟರಿ ನಿರ್ಮಿಸಿದರೆ ಅದನ್ನು ನಿರಾಕರಿಸಲು ಆಗುವುದಿಲ್ಲ. ಆದರೆ, ಈ ಸರ್ಕಾರ ಹಾಗೂ ಪ್ರಧಾನಿಯವರು ಇತಿಹಾಸದ ಕರಾಳ ಅಧ್ಯಾಯವನ್ನು ಅಳಿಸಿಹಾಕಲು ಯತ್ನಿಸುತ್ತಿದ್ದಾರೆ. ಇದು ಸಾಧ್ಯವೇ ಇಲ್ಲ” ಎಂದು ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಹೇಳಿದ್ದಾರೆ.
“ನೀವು ಯಾವುದೇ ಡಾಕ್ಯುಮೆಂಟರಿಯನ್ನು ಬ್ಯಾನ್ ಮಾಡುವ ಹಾಗಿಲ್ಲ. ಏಕೆ ಬ್ಲಾಕ್ ಮಾಡುತ್ತೀರಿ? ನೀವು ಬ್ಲಾಕ್ ಮಾಡುತ್ತೀರಿ ಎಂದಾದರೆ, ನಿಮಗೆ ಪಶ್ಚಾತ್ತಾಪ ಇದೆ ಎಂದಾಯಿತಲ್ಲವೇ? ಖಂಡಿತವಾಗಿಯೂ ಬಿಬಿಸಿ ಡಾಕ್ಯುಮೆಂಟರಿಯ ಹಿಂದೆ ದುರುದ್ದೇಶ ಇಲ್ಲ. ಡಾಕ್ಯುಮೆಂಟರಿಯನ್ನು ಬ್ಲಾಕ್ ಮಾಡುವ ಮೂಲಕ ಕೇಂದ್ರ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ” ಎಂದಿದ್ದಾರೆ.
ಟುಕ್ಡೆ ಟುಕ್ಡೆ ಗ್ಯಾಂಗ್ ಎಂದು ಜರಿದ ಬಿಜೆಪಿ
ನರೇಂದ್ರ ಮೋದಿ ಅವರ ಕುರಿತ ಸಾಕ್ಷ್ಯಚಿತ್ರವನ್ನು ಬೆಂಬಲಿಸುವವರನ್ನು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಟುಕ್ಡೆ ಟುಕ್ಡೆ ಗ್ಯಾಂಗ್ ಎಂದು ಜರಿದಿದ್ದಾರೆ. “ಭಾರತದಲ್ಲಿರುವ ಕೆಲವರು ಇನ್ನೂ ವಸಾಹತುಶಾಹಿ ನಶೆಯಿಂದ ಹೊರಬಂದಿಲ್ಲ. ಅವರು, ಬಿಬಿಸಿಯನ್ನು ಭಾರತದ ಸುಪ್ರೀಂ ಕೋರ್ಟ್‌ಗಿಂತ ಮಿಗಿಲು ಎಂದು ಭಾವಿಸಿದ್ದಾರೆ. ಇಂತಹವರು ಭಾರತದ ಘನತೆಯನ್ನು ಕುಂದಿಸಲು ಯಾವ ಹಂತಕ್ಕೂ ಹೋಗುತ್ತಾರೆ” ಎಂದು ಟೀಕಿಸಿದ್ದಾರೆ.
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರೂ ಮೋದಿ ಕುರಿತ ಬಿಬಿಸಿ ಡಾಕ್ಯುಮೆಂಟರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬ್ರಿಟನ್‌ನ ಹಲವು ಸಂಸದರು ಡಾಕ್ಯುಮೆಂಟರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದ ನಿವೃತ್ತ ನ್ಯಾಯಮೂರ್ತಿಗಳು, ಸೇನೆಯ ನಿವೃತ್ತ ಹಿರಿಯ ಅಧಿಕಾರಿಗಳು ಸೇರಿ 300ಕ್ಕೂ ಅಧಿಕ ಗಣ್ಯರು ಬಿಬಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.
ಇದನ್ನೂ ಓದಿ | ಮೋದಿ ಕುರಿತು ಬಿಬಿಸಿ ಡಾಕ್ಯುಮೆಂಟರಿ ಖಂಡಿಸಿ ದೇಶದ ನಿವೃತ್ತ ಜಡ್ಜ್‌ಗಳು, ಕನ್ನಡಿಗರು ಸೇರಿ 300 ಗಣ್ಯರಿಂದ ಪತ್ರ