ನವದೆಹಲಿ: ಭಗವಾನ್ ಶ್ರೀರಾಮ, ಹಿಂದುತ್ವ, ಗೋವು, ದೇಶಭಕ್ತಿ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ರಾಜಕೀಯ ಹಾಗೂ ಸೈದ್ಧಾಂತಿಕ ತಿಕ್ಕಾಟ ನಿನ್ನೆ ಮೊನ್ನೆಯದಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಲ್ಮಾನ್ ಖುರ್ಷಿದ್ ಅವರು ರಾಮನಿಗೆ ಹೋಲಿಸಿರುವುದು ಕಾಂಗ್ರೆಸ್-ಬಿಜೆಪಿ ಮಧ್ಯೆ ಮತ್ತೊಂದು ಜಟಾಪಟಿ (Congress BJP Spar) ಏರ್ಪಡಲು ಕಾರಣವಾಗಿದೆ.
ಭಾರತ್ ಜೋಡೋ ಯಾತ್ರೆ ಕೈಗೊಳ್ಳುತ್ತಿರುವ ರಾಹುಲ್ ಗಾಂಧಿ ಅವರ ಬದ್ಧತೆ ಕುರಿತು ಡಿಸೆಂಬರ್ 26ರಂದು ಮಾತನಾಡಿದ್ದ ಸಲ್ಮಾನ್ ಖುರ್ಷಿದ್, ರಾಹುಲ್ ಗಾಂಧಿ ಅವರನ್ನು ಶ್ರೀರಾಮನಿಗೆ ಹೋಲಿಸಿದ್ದರು. “ನಾವಿಲ್ಲಿ ಚಳಿ ಎಂದು ಕುಳಿತಿದ್ದರೆ, ರಾಹುಲ್ ಗಾಂಧಿ ಅವರು ಇದಾವುದನ್ನೂ ಲೆಕ್ಕಿಸದೆ ಭಾರತ್ ಜೋಡೋ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಅವರಿಗೆ ಯೋಗಿಯ ತಪಸ್ಸಿನ ರೀತಿ ಏಕಚಿತ್ತತೆ ಇದೆ. ಅವರು ರಾಮನಂತೆ” ಎಂದಿದ್ದರು.
ಬಿಜೆಪಿ ಆಕ್ಷೇಪವೇನು?
“ಸಲ್ಮಾನ್ ಖುರ್ಷಿದ್ ಅವರು ರಾಹುಲ್ ಗಾಂಧಿ ಅವರನ್ನು ಭಗವಾನ್ ಶ್ರೀರಾಮನಿಗೆ ಹೋಲಿಸಿರುವುದು ಹಿಂದೂಗಳಿಗೆ ಮಾಡಿದ ಅವಮಾನವಾಗಿದೆ. ಹಾಗಾದರೆ, ಸಲ್ಮಾನ್ ಖುರ್ಷಿದ್ ಅವರು ರಾಹುಲ್ ಗಾಂಧಿ ಅವರನ್ನು ಬೇರೆ ಧರ್ಮದ ದೇವರಿಗೆ ಹೋಲಿಸುವ ಧೈರ್ಯವಿದೆಯೇ? ಶ್ರೀರಾಮನ ಅಸ್ತಿತ್ವವನ್ನೇ ನಿರಾಕರಿಸಿದವರು, ರಾಮಮಂದಿರವನ್ನು ತಡೆದವರು ಹಿಂದು ಅಸ್ತ್ರ ಬಳಸುವುದು ಸರಿಯಲ್ಲ. ಜನಿವಾರ ಧರಿಸಿರುವ ರಾಹುಲ್ ಗಾಂಧಿ ಅವರು ಇದನ್ನು ಒಪ್ಪುವರೇ” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | ರಾಹುಲ್ ಗಾಂಧಿ ಮಾತುಗಳು ಇಡೀ ದೇಶದಲ್ಲಿ ಕಂಪನ ಸೃಷ್ಟಿಸುತ್ತಿವೆ; ಕೈ ನಾಯಕನನ್ನು ಹೊಗಳಿದ ತಮಿಳುನಾಡು ಮುಖ್ಯಮಂತ್ರಿ