Site icon Vistara News

Himachal Congress Crisis | ಹಿಮಾಚಲ ಗದ್ದುಗೆ ಗೆದ್ದ ಕಾಂಗ್ರೆಸ್‌ನಲ್ಲಿ ಸಿಎಂ ಗಾದಿಗಾಗಿ ಗುದ್ದಾಟ, ಹೈಕಮಾಂಡ್‌ಗೆ ತಾಕಲಾಟ

Himachal Pradesh Congress Crisis

ಶಿಮ್ಲಾ: ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಾಂಗ್ರೆಸ್‌ಗೆ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಿಕ್ಕ ಗೆಲುವು ಹೊಸ ಆಶಾಭಾವ ಮೂಡಿಸಿದೆ. ಆದರೆ, ಹಿಮಾಚಲ ಪ್ರದೇಶ ಚುನಾವಣೆ ಗೆದ್ದ ಕಾಂಗ್ರೆಸ್‌ಗೆ ಈಗ ಆಂತರಿಕ ಬಿಕ್ಕಟ್ಟು (Himachal Congress Crisis) ತಲೆನೋವಾಗಿ ಪರಿಣಮಿಸಿದೆ. ಮುಖ್ಯಮಂತ್ರಿ ಗಾದಿಗಾಗಿ ನಡೆಯುತ್ತಿರುವ ಲಾಬಿಗಳು ಹೆಚ್ಚಾಗಿದ್ದು, ಮುಖ್ಯಮಂತ್ರಿ ಆಯ್ಕೆಯು ಹೈಕಮಾಂಡ್‌ಗೆ ಕಗ್ಗಂಟಾಗಿದೆ.

ಪ್ರತಿಭಾ ಸಿಂಗ್‌ ಪರ ಹೆಚ್ಚಿದ ಒತ್ತಡ
ಹಿಮಾಚಲ ಕಾಂಗ್ರೆಸ್‌ ಅಧ್ಯಕ್ಷೆ, ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್‌ ಅವರ ಪತ್ನಿ ಪ್ರತಿಭಾ ಸಿಂಗ್‌ ಅವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಅವರ ಬೆಂಬಲಿಗರು ಹೆಚ್ಚಿನ ಒತ್ತಡ ಹೇರುತ್ತಿದ್ದಾರೆ. ಪ್ರತಿಭಾ ಸಿಂಗ್‌ ಅವರ ಬೆಂಬಲಿಗರು ಶುಕ್ರವಾರ (ಡಿಸೆಂಬರ್‌ ೯) ಶಿಮ್ಲಾದಲ್ಲಿರುವ ಕಾಂಗ್ರೆಸ್‌ ಕೇಂದ್ರ ಕಚೇರಿ ಎದುರು ಜಮಾಯಿಸಿದ ಬೆಂಬಲಿಗರು, ಪ್ರತಿಭಾ ಸಿಂಗ್‌ ಅವರ ಪರ ಘೋಷಣೆ ಕೂಗಿದ್ದಾರೆ. ಪ್ರತಿಭಾ ಸಿಂಗ್‌ ಅವರ ನಾಯಕತ್ವದಿಂದಲೇ ರಾಜ್ಯದಲ್ಲಿ ಕಾಂಗ್ರೆಸ್‌ ಬಹುಮತ ಪಡೆದಿದೆ ಎಂದು ಹೇಳಿದ್ದಾರೆ. ಇವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡದಿದ್ದರೆ ಹೈಕಮಾಂಡ್‌ ದೊಡ್ಡ ತಪ್ಪೆಸಗಿದಂತಾಗುತ್ತದೆ ಎಂಬ ಪರೋಕ್ಷ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ, ಮೂಲಗಳ ಪ್ರಕಾರ, ಪ್ರತಿಭಾ ಸಿಂಗ್‌ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಲು ಹೈಕಮಾಂಡ್‌ಗೆ ಒಲವಿಲ್ಲ ಎನ್ನಲಾಗಿದೆ.

ಶಾಸಕರ ಮನದಲ್ಲಿ ಏನಿದೆ?
ಪ್ರತಿಭಾ ಸಿಂಗ್‌ ಪರ ಅವರ ಬೆಂಬಲಿಗರಷ್ಟೇ ಒತ್ತಾಯ ಮಾಡುತ್ತಿದ್ದಾರೆ. ಆದರೆ, ಶಾಸಕರು ಮಾತ್ರ ಯಾರ ಹೆಸರೂ ಹೇಳದೆ ಹೈಕಮಾಂಡ್‌ಗೆ ಸಿಎಂ ಆಯ್ಕೆಯನ್ನು ಬಿಟ್ಟಿದ್ದಾರೆ. ಕಾಂಗ್ರೆಸ್‌ ಶಾಸಕರು ಸಭೆ ನಡೆಸಿದ್ದು, ಹೈಕಮಾಂಡೇ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕು ಎಂಬ ನಿರ್ಣಯ ತೆಗೆದುಕೊಂಡಿದ್ದಾರೆ. ಆ ಮೂಲಕ ನಾವು ಯಾರ ಪರವೂ ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಇದು ಪ್ರತಿಭಾ ಸಿಂಗ್‌ ಅವರಿಗೆ ನಕಾರಾತ್ಮಕವಾಗಿದೆ.

ಹೈಕಮಾಂಡ್‌ ತೀರ್ಮಾನ ಏನು?
ಕಾಂಗ್ರೆಸ್‌ನ ಕೇಂದ್ರೀಯ ವೀಕ್ಷಕರಾದ, ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಘೇಲ್‌ ಹಾಗೂ ಹರಿಯಾಣ ಮಾಜಿ ಸಿಎಂ ಭೂಪಿಂದರ್‌ ಸಿಂಗ್‌ ಹೂಡಾ ಅವರು ಶಿಮ್ಲಾದ ಸೆಸಿಲ್‌ ಹೋಟೆಲ್‌ನಲ್ಲಿ ಬೀಡುಬಿಟ್ಟಿದ್ದು, ಪಕ್ಷದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸದ್ಯದ ಮಟ್ಟಿಗೆ, ಸಿಎಂ ರೇಸ್‌ನಲ್ಲಿ ಪ್ರತಿಭಾ ಸಿಂಗ್‌, ಸುಖ್‌ವಿಂದರ್‌ ಸಿಂಗ್‌, ಸಿಪಿಎಲ್‌ ಮುಖಂಡ ಮುಕೇಶ್‌ ಅಗ್ನಿಹೋತ್ರಿ, ಮತ್ತೊಬ್ಬ ನಾಯಕ ರಾಜಿಂದರ್‌ ರಾಣಾ ಇದ್ದಾರೆ. ಸುಖ್‌ವಿಂದರ್‌ ಸಿಂಗ್‌ ಅವರು ನಾನು ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟನೆ ನೀಡಿದ್ದರೂ, ಅವರೇ ಪ್ರತಿಭಾ ಸಿಂಗ್‌ ನಂತರ ಎದ್ದು ಕಾಣುತ್ತಿರುವ ನಾಯಕರಾಗಿದ್ದಾರೆ ಎನ್ನಲಾಗುತ್ತಿದೆ.

ಸಂಡೇ ನೂತನ ಸಿಎಂ ಪ್ರಮಾಣವಚನ?
ಭಾನುವಾರ (ಡಿಸೆಂಬರ್‌ ೧೧)ವೇ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ಆದರೆ, ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಕುರಿತು ಇದುವರೆಗೆ ಮಾಹಿತಿ ಲಭ್ಯವಿಲ್ಲ. ಹಾಗಾಗಿ, ಕೊನೇ ಕ್ಷಣದಲ್ಲಿ ಯಾರು ಸಿಎಂ ಆಗಲಿದ್ದಾರೆ ಎಂಬ ಕುತೂಹಲ ಮುಂದುವರಿದಿದೆ.

ಇದನ್ನೂ ಓದಿ | ಗುಜರಾತ್​-ಹಿಮಾಚಲದಲ್ಲಿ ಕೆಲಸ ಮಾಡಲಿಲ್ಲ ಆಪ್​ ‘ಉಚಿತ’ ಭರವಸೆಗಳು; ಎರಡೂ ರಾಜ್ಯಗಳ ಜನರಿಂದಲೂ ತಿರಸ್ಕಾರ

Exit mobile version