ನವ ದೆಹಲಿ: ಭಾರತ್ ಜೋಡೋ ಯಾತ್ರೆ ಅಲ್ಲ, ಕಾಂಗ್ರೆಸ್ ಜೋಡೋ ಯಾತ್ರೆ ಮಾಡಬೇಕಾದ ಅಗತ್ಯವಿದೆ ಎಂದು ಟೀಕಿಸುತ್ತಿರುವ, ಪಕ್ಷವನ್ನು ಬಿಟ್ಟು ಹೋಗಿರುವ ನಾಯಕರಿಗೆ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ತಿರುಗೇಟು ನೀಡಿದ್ದಾರೆ. ”ಕಾಂಗ್ರೆಸ್ ಪಕ್ಷವು ಒಗ್ಗಟ್ಟಾಗಿದೆ. ಕೆಲವರು ಪಕ್ಷವನ್ನು ಬಿಟ್ಟು ಹೋದ ಮೇಲೂ ನಮ್ಮನ್ನು ತೆಗಳುತ್ತಿದ್ದಾರೆ, ಆ ಬಗ್ಗೆ ನಾವು ಮಾತನಾಡಲು ಹೋಗುವುದಿಲ್ಲ,” ಎಂದು ಅವರು ತಿಳಿಸಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ನಾಯಕರು ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ ಬಿಕ್ಕಟ್ಟು (Congress Crisis) ಕೂಡ ಹೆಚ್ಚುತ್ತಿದೆ.
ಭಾರತ್ ಜೋಡೋ ಯಾತ್ರೆ ಬಗ್ಗೆ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ, ಕರ್ನಾಟಕದ ಸಂಸದ ಜೈರಾಂ ರಮೇಶ್ ಅವರು, ”ನಮ್ಮದು ಪ್ರಜಾಸತ್ತಾತ್ಮಕ ಪಾರ್ಟಿ, ದನಿಗಳನ್ನು ನಾವು ಹತ್ತಿಕ್ಕುವುದಿಲ್ಲ. ಯಾರಿಗೆ ತೃಪ್ತಿ ಇಲ್ಲವೋ ಅವರು ಹೇಳಿಕೆಗಳನ್ನು ನೀಡುತ್ತಾರೆ; ಇನ್ನು ಕೆಲವರು ಪತ್ರಗಳನ್ನು ಬರೆಯುತ್ತಾರೆ; ಮತ್ತೆ ಕೆಲವರು ಟ್ವೀಟ್ ಮಾಡುತ್ತಾರೆ. ಇದು ಪ್ರಜಾಪ್ರಭುತ್ವದ ಶೈಲಿ” ಎಂದು ತಿಳಿಸಿದರು.
”ಪಕ್ಷವು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿತು. ಆದರೆ, ಕೆಲವರು ನಮ್ಮನ್ನು ಬೈಯ್ದು ಪಕ್ಷವನ್ನು ಬಿಟ್ಟು ಹೊರಟು ಹೋದರು,” ಎಂದು ಗುಲಾಂ ನಬಿ ಆಜಾದ್ ಅವರನ್ನು ಉದ್ದೇಶಿಸಿ ಹೇಳಿದರು.
ಯಾರು ಬೇಕಾದರೂ ಸ್ಪರ್ಧಿಸಬಹುದು
”ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಯಾರಾದರೂ ಸ್ಪರ್ಧಿಸಬಹುದು. ಅಕ್ಟೋಬರ್ 17ರಂದು ಭಾರತ್ ಜೋಡೋ ಯಾತ್ರಾರ್ಥಿಗಳು ಕರ್ನಾಟಕದಲ್ಲಿ ಇರಲಿದ್ದಾರೆ. ಒಂದು ವೇಳೆ, ಚುನಾವಣೆಗೆ ಮತದಾನ ಮಾಡುವುದು ಅಗತ್ಯವಾದರೆ ಬೆಂಗಳೂರಲ್ಲಿ ಅವರೆಲ್ಲರೂ ಮತ ಚಲಾಯಿಸಲಿದ್ದಾರೆ,” ಎಂದು ತಿಳಿಸಿದರು.
ಚುನಾವಣಾ ನಿಯಮಗಳನ್ನು ಬಹಿರಂಗಪಡಿಸಬೇಕು ಎಂಬ ಮನಿಶ್ ತಿವಾರಿ ಮತ್ತು ಶಶಿ ತರೂರ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ”ಅನೇಕರು ತಾವು ಸ್ಪರ್ಧಿಸುವ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ. ಅವರಿಗೆ ಸ್ವಾಗತವಿದೆ. ಸ್ಪರ್ಧೆ ಮಾಡುವುದು ಅವರು ಪ್ರಜಾಪ್ರಭುತ್ವದ ಹಕ್ಕು. ಅವರು ಯಾವಾಗ ಫಾರ್ಮ್ ಭರ್ತಿ ಮಾಡುತ್ತಾರೋ ಆಗ ಅವರಿಗೆ ಎಲೆಕ್ಷನ್ ನಿಯಮಗಳು ಗೊತ್ತಾಗಲಿವೆ,” ಎಂದು ಅವರು ತಿಳಿಸಿದರು.
ಇದನ್ನೂ ಓದಿ | ಭಾರತ್ ಜೋಡೋ ಪಾದಯಾತ್ರೆ ಉಸ್ತುವಾರಿ ಬಿಕೆಎಚ್ ಹೆಗಲಿಗೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್