ದೇಶದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಹತ್ತು ವರ್ಷಗಳ ಕಳೆಯುತ್ತ ಬಂದರೂ ಅವರ ಮೇಲೆ ನೆಗೆಟಿವ್ ಇಂಪ್ರೆಷನ್ ಕ್ರಿಯೆಟ್ ಆಗಿಲ್ಲ ಅನ್ನೋದು ಪದೇಪದೇ ಸಾಬೀತಾಗಿದೆ. ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲೂ ಮೋದಿ ಪ್ರಭಾವ ಮತ್ತೊಮ್ಮೆ ಪ್ರಜ್ವಲಿಸಿದೆ. ಉತ್ತರ ಭಾರತ- ದಕ್ಷಿಣ ಭಾರತದ ಕೊಂಡಿಯಾಗಿರುವ ಮಧ್ಯಪ್ರದೇಶದಲ್ಲಿ ಯಾರೂ ಊಹೆ ಮಾಡದ ರೀತಿಯಲ್ಲಿ ಬಿಜೆಪಿ ಗೆದ್ದು ಬೀಗಿದೆ. ಐದು ರಾಜ್ಯಗಳ ಪೈಕಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ. ಮಿಜೊರಾಂ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಹಿನ್ನಡೆ ಕಂಡಿದೆ. ಹಾಗೆಂದ ಮಾತ್ರಕ್ಕೆ ಮೋದಿ ಪವಾಡ ಪುರುಷ ಅಲ್ಲ. ಅವರ ಅಸಾಧಾರಣ ಪ್ರಭಾವ ಮತ್ತು ಜನಪರ ಯೋಜನೆಗಳ ಎದುರು ಪ್ರತಿಪಕ್ಷಗಳು ಮಂಕಾಗಿವೆ ಅಷ್ಟೆ!
ದೇಶದ ರಾಜಕಾರಣದ ದಿಕ್ಕನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರತಿ ಚುನಾವಣೆಯಲ್ಲೂ ವಿಪಕ್ಷಗಳು ಎಡುವುತ್ತಿವೆ. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಶಕ್ತಿ ಹೀನ ತಂತ್ರಗಾರಿಕೆ ಫಲ ನೀಡುತ್ತಿಲ್ಲ. ಹೊಸ ತಲೆಮಾರಿನ ರಾಜಕಾರಣವನ್ನು ಅರ್ಥ ಮಾಡಿಕೊಂಡಿರುವ ಮೋದಿ, ಅಮಿತ್ ಶಾ ಟೀಮ್ ಸರಿಯಾದ ತಂತ್ರಗಾರಿಕೆ ಮಾಡಿ ಸಕ್ಸಸ್ ಆಗುತ್ತಿದೆ. ಕರ್ನಾಟಕಕ್ಕೆ ಪದೇಪದೇ ಆಗಮಿಸಿ ಟಿಕೆಟ್ ಹಂಚಿಕೆಯಲ್ಲಿ ಹಿರಿಯರ ಮಾತು ಕೇಳದೆ, ಜಾತಿ ಸಮೀಕರಣ ನೋಡದೆ ಟಿಕೆಟ್ ನೀಡಿದ್ದು ಬಿಜೆಪಿ ಸೋಲಿಗೆ ಕಾರಣವಾಗಿತ್ತು. ಸೋಲಿನ ಬಳಿಕ ಈ ಮಾತನ್ನು ಹಲವು ಬಿಜೆಪಿ ನಾಯಕರು ಸಹ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಆ ತಪ್ಪನ್ನು ಮತ್ತೆ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮಾಡಲಿಲ್ಲ. ಗೆಲ್ಲುವ ಕುದುರೆ ಎಂದು ಕಂಡು ಬಂದರೆ 70 ವರ್ಷ ದಾಟಿದವರಿಗೂ ಟಿಕೆಟ್ ನೀಡಲಾಯಿತು. ಕೇವಲ ಶೂಟ್ ಬೂಟ್ ರಾಜಕಾರಣಿಗಳನ್ನು ಪಕ್ಷಕ್ಕೆ ಕರೆತರುವುದಕಿಂತಲೂ ಬೂತ್‌ನಲ್ಲಿ ವೋಟ್ ಇರೋ ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ನೀಡಲಾಯಿತು. ಹೀಗಾಗಿ ಬಿಜೆಪಿಯ ವೋಟ್ ಬ್ಯಾಂಕ್ ಹೆಚ್ಚಾಗಿ ಮೋದಿ, ಅಮಿತ್ ಶಾ ವಾವ್ಹ್ ಅನ್ನೋ ರೀತಿಯಲ್ಲಿ ಫಲಿತಾಂಶ ಬಂತು. ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಭೇಟಿಯಿಂದಾಗಲೇ ವಿಶ್ವಕಪ್‌ನಲ್ಲಿ ಭಾರತ ಸೋತು ಹೋಗಿದೆ ಎಂದಿದ್ದರು. ಮೋದಿಯವರನ್ನು ಪನೌತಿ (ಅಪಶಕುನದವನು) ಎಂದು ಗೇಲಿ ಮಾಡಿದ್ದರು. ಈಗ ಹೇಳಿ ರಾಹುಲ್‌ಜೀ, ಪನೌತಿ ಯಾರು ಎಂದು ಮೋದಿ ಅಭಿಮಾನಿಗಳು ಪ್ರಶ್ನಿಸುವಂತಾಗಿದೆ!
ಮುಸ್ಲಿಂ ಓಲೈಕೆ ಬಿಡದಿದ್ರೆ ಕಾಂಗ್ರೆಸ್ ಉದ್ಧಾರ ಆಗಲ್ಲ!
1950ರ ದಶಕದಿಂದಲೂ ಕಾಂಗ್ರೆಸ್ ವೋಟ್ ಬ್ಯಾಂಕ್ ಮುಸ್ಲಿಂ ಸಮುದಾಯ ಅನ್ನೋದು ಎಲ್ಲರಿಗೂ ಗೊತ್ತಿರುವಂಥದ್ದು. ಆದರೆ ಇತ್ತೀಚಿನ ದಶಕಗಳಲ್ಲಿ ಬಿಜೆಪಿ ಹಿಂದುತ್ವದ ಅಸ್ತ್ರ ಹಿಡಿದು ಚುನಾವಣೆ ಎದುರಿಸುತ್ತಿದೆ. ಎರಡು ಮಹಾ ಚುನಾವಣೆಗಳಲ್ಲಿ ಬಿಜೆಪಿ ಪ್ರಚಂಡ ಬಹಮತದಿಂದ ಜಯ ಗಳಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ಕಾಂಗ್ರೆಸ್ ಸರಣಿ ಸೋಲು ಕಾಣುತ್ತ ಬಂದಿದೆ. ಇನ್ನೊಂದೆಡೆ ಕಾಂಗ್ರೆಸ್ ತಾನು ಮುಸ್ಲಿಂ ಪರ ಎಂದು ಘೋಷಿಸಿಕೊಳ್ಳುತ್ತ, ಆಗಾಗ ಸಾಫ್ಟ್ ಹಿಂದುತ್ವ ಕಾರ್ಡ್ ಪ್ರದರ್ಶಿಸುತ್ತ ಅತ್ತ ಮುಸ್ಲಿಮರ ವಿಶ್ವಾಸವನ್ನೂ ಗಳಿಸದೆ, ಹಿಂದೂಗಳ ಮನವನ್ನೂ ಗೆಲ್ಲದೆ ತ್ರಿಶಂಕು ಸ್ಥಿತಿಯಲ್ಲಿ ಒದ್ದಾಡುತ್ತಿದೆ.
ಲೋಕಸಭಾ ಚುನಾವಣೆಗೆ ಅಡಿಗಲ್ಲು ಅಲ್ಲ!
ಯಾವುದೇ ರಾಜ್ಯದ ಚುನಾವಣೆ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲು ಸಾಧ್ಯವೇ ಇಲ್ಲ. ಇದು ಹಲವು ಸಂದರ್ಭಗಳಲ್ಲಿ ಸಾಬೀತು ಆಗಿದೆ. ಹಲವು ಬಾರಿ ರಾಜ್ಯಗಳಲ್ಲಿ ಗೆದ್ದ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಮಣ್ಣು ಮುಕ್ಕಿವೆ. 2018ರಲ್ಲಿ ರಾಜಸ್ಥಾನ ಮತ್ತು ಮಧ್ಯಪ್ರದೇಶ ಕಾಂಗ್ರೆಸ್ ತೆಕ್ಕೆಗೆ ಜಾರಿದಾಗ ನರೇಂದ್ರ ಮೋದಿ ಎರಡನೇ ಬಾರಿ ಬರುವುದು ಡೌಟ್ ಅಂತ ರಾಹುಲ್ ಗಾಂಧಿ ಟೀಮ್ ಮಾತನಾಡಿಕೊಂಡಿತ್ತು. 2019ರ ಲೋಕಸಭಾ ಚುನಾವಣೆ ಮುಗಿದ ತಕ್ಷಣ ರಾಹುಲ್ ಗಾಂಧಿ ಟೀಮ್ ನಲ್ಲಿ ಸಾಮಾಜಿಕ ಜಾಲತಾಣ ನೋಡಿಕೊಳ್ಳುತ್ತಿದ್ದವರು ಒಬ್ಬರು ನಮ್ಮದೇ ಗೆಲುವು, ನಿನಗೆ ಈ ಖಾತೆ, ನನಗೆ ಈ ಖಾತೆ ಅಂತ ಹಂಚಿಕೊಂಡಿದ್ರಂತೆ! ಆದರೆ ಆಗಿದ್ದೇ ಬೇರೆ. ಈಗ ಬಿಜೆಪಿ ಮೂರು ರಾಜ್ಯಗಳಲ್ಲಿ ಗೆದ್ದಿರುವುದರಿಂದ ಮೂರನೇ ಬಾರಿಯೂ ನಮ್ಮದೇ ಆಟ ಅಂದುಕೊಂಡ್ರೆ ವರ್ಲ್ಡ್ ಕಪ್‌ನ ಎಲ್ಲ ಪಂದ್ಯಗಳಲ್ಲಿ ಗೆದ್ದು ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಭಾರತ ಸೋತಂತೆ ಆದೀತು!
ಗ್ಯಾರಂಟಿ ಎಲ್ಲ ಕಡೆ ವರ್ಕೌಟ್ ಆಗಲ್ಲ!
ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿಯೇ ಎಲ್ಲ ಕಡೆ ಗೆಲ್ತೀವಿ ಎಂದಿದ್ದ ಸುರ್ಜೇವಾಲಾ ಲೆಕ್ಕಾಚಾರ ತಪ್ಪಿದೆ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೇ ಅದರ ಲಾಭ ಪಡೆದು ಸರ್ಕಾರವನ್ನೇ ಬೈಯುವುದನ್ನು ನಾವು ನಿತ್ಯ ಕಾಣುತ್ತಿದ್ದೇವೆ. ಹೀಗಾಗಿ ಕಾಂಗ್ರೆಸ್ ಗ್ಯಾರಂಟಿ ಜಪ ಮಾಡುವುದನ್ನು ಬಿಟ್ಟು ರಾಷ್ಟ್ರೀಯ ಹಿತಾಸಕ್ತಿ ಮತ್ತು ಅಭಿವೃದ್ಧಿ ಕಡೆಗೆ ಗಮನ ಹರಿಸುವುದು ಒಳ್ಳೆಯದು.
ಇದನ್ನೂ ಓದಿ: ವಿಧಾನಸೌಧ ರೌಂಡ್ಸ್: ಕಂಬಳದಲ್ಲಿ ಡಿಕೆಶಿ ಕೋಣ! ವಿಜಯೇಂದ್ರ ಆಯ್ಕೆಯಾಗುತ್ತಿದ್ದಂತೆ ತಣ್ಣಗಾದ ಕಾಂಗ್ರೆಸ್ ಕದನ!