Site icon Vistara News

Privilege Motion: ನೆಹರು ಕುಟುಂಬಕ್ಕೆ ಅವಮಾನ, ಮೋದಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಕಾಂಗ್ರೆಸ್

Congress decided to Privilege motion against PM Modi

ನವದೆಹಲಿ: ನೆಹರು ಕುಟುಂಬವನ್ನು ಅವಮಾನಗೊಳಿಸಿದ್ದಾರೆಂದು ಆರೋಪಿಸಿ, ಕಾಂಗ್ರೆಸ್‌ ಸಂಸದ ಕೆ.ಸಿ. ವೇಣುಗೋಪಾಲ್ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಹಕ್ಕು ಚ್ಯುತಿ(Privilege motion) ಮಂಡಿಸಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಮಾತನಾಡುವಾಗ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ವಿರುದ್ಧ ಅವಮಾನಕಾರಿಯಾಗಿ ಮಾತನಾಡಿದ್ದಾರೆಂದು ಮನವಿಯಲ್ಲಿ ತಿಳಿಸಲಾಗಿದೆ.

ಕಳೆದ ತಿಂಗಳು ನಡೆದ ಸಂಸತ್ ಕಲಾಪದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ರಾಜ್ಯ ಸರ್ಕಾರಗಳನ್ನು ಉರುಳಿಸಲು ಜವಾಹರ್ ಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ಅವರು ಪದೇ ಪದೇ ಸಂವಿಧಾನದ 356ನೇ ವಿಧಿಯನ್ನು ಬಳಸಿಕೊಂಡಿದ್ದರು. ಅಲ್ಲದೇ, ನೆಹರು ಅಡ್ಡಹೆಸರನ್ನು ಬಳಸಿಕೊಳ್ಳಲು ನಾಚಿಕೆ ಏಕೆ ಪಟ್ಟುಕೊಳ್ಳುತ್ತೀರಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಮತ್ತೊಂದೆಡೆ, ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅಮಾನತುಗೊಳಿಸಲು ಬಿಜೆಪಿ ಪ್ಲ್ಯಾನ್ ಮಾಡುತ್ತಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ರಾಹುಲ್ ಗಾಂಧಿ ಒಂದೊಮ್ಮೆ ಅವರು ಕ್ಷಮೆ ಕೇಳದಿದ್ದರೆ, ಅವರನ್ನು ಲೋಕಸಭೆಯಿಂದಲೇ ಅಮಾನತುಗೊಳಿಸುವ ಪ್ರಯತ್ನಕ್ಕೆ ಭಾರತೀಯ ಜನತಾ ಪಾರ್ಟಿ(BJP) ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆಡಳಿತ ಪಕ್ಷವು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರನ್ನು ಸಂಪರ್ಕಿಸಿದ್ದು, ರಾಹುಲ್ ಗಾಂಧಿಯನ್ನು ಅಮಾನತುಗೊಳಿಸುವ ಸಾಧ್ಯತೆಯನ್ನು ಅನ್ವೇಷಿಸಲು ವಿಶೇಷ ಸಮಿತಿಯನ್ನು ರಚಿಸಲು ಕೋರಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ರಾಹುಲ್ ಗಾಂಧಿ ಅವರ ಈ ಸಮಸ್ಯೆಯನ್ನು ಬಿಜೆಪಿಯು ಗಂಭೀರವಾಗಿ ಪರಿಗಣಿಸಿದೆ. ಇದು ಹಕ್ಕು ಬಾದ್ಯತೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಹಾಗಾಗಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ನಾವು ಕೋರುತ್ತಿದ್ದೇವೆ ಎಂಬ ಬಿಜೆಪಿಯ ಹಿರಿಯ ನಾಯಕರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: Budget Session 2023: ಕೇಂದ್ರ ಸರ್ಕಾರವು ರಾಹುಲ್ ಗಾಂಧಿಗೆ ಕ್ಷಮೆ ಕೇಳಲಿ: ಕಾಂಗ್ರೆಸ್

2005ರಲ್ಲಿ ಪ್ರಶ್ನೆಗಾಗಿ ಹಣ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಮಿತಿಯನ್ನು ರಚಿಸಲಾಗಿತ್ತು. ಕಾಂಗ್ರೆಸ್ ಸಂಸದ ಪವನ್ ಕುಮಾರ್ ಬನ್ಸಲ್ ನೇತೃತ್ವದ ಈ ಸಮಿತಿ, ಹಗರಣದ ಆರೋಪ ಹೊತ್ತ 10 ಲೋಕಸಭಾ ಸದಸ್ಯರ ವಿರುದ್ಧ ತನಿಖೆ ಮಾಡಿತ್ತು. ಬಳಿಕ, ಸಂಸದರಾಗಿ ಅವರನ್ನು ಮುಂದುವರಿಸುವುದು ಅಸಮರ್ಥನೀಯ ಎಂದು ಹೇಳಿತ್ತು. ಪರಿಣಾಮ ಅವರನ್ನು ಅಮಾನತು ಮಾಡಲಾಯಿತು ಎಂಬ ವಿಷಯವನ್ನು ಬಿಜೆಪಿ ಸ್ಪೀಕರ್ ಗಮನಕ್ಕೆ ತಂದಿದೆ. ಲೋಕಸಭೆಯಲ್ಲಿ ಬಿಜೆಪಿ ಪ್ರಚಂಡ ಬಹುಮತ ಪಡೆದುಕೊಂಡಿರುವುದರಿಂದ, ಸಮಿತಿಯಲ್ಲಿ ಸಹಜವಾಗಿಯೇ ಬಿಜೆಪಿಗೆ ಮೇಲುಗೈ ಸಿಗಲಿದೆ.

Exit mobile version