ಐದು ರಾಜ್ಯಗಳ ಚುನಾವಣೆಯಲ್ಲಿ (Assembly Election 2023) ಕಾಂಗ್ರೆಸ್ ಪಕ್ಷವು (Congress Party) ಕೇವಲ ಒಂದು ರಾಜ್ಯವನ್ನು ಗೆದ್ದುಕೊಳ್ಳುವ ಮೂಲಕ ಸೋತು ಸುಣ್ಣವಾಗಿದೆ. ವಿಶೇಷವಾಗಿ ಹಿಂದಿ ಹಾರ್ಟ್ ಲ್ಯಾಂಡ್ ಎನಿಸಿಕೊಂಡಿರುವ ಮಧ್ಯ ಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನಗಳ ಪೈಕಿ, ಮಧ್ಯ ಪ್ರದೇಶ ಹಾಗೂ ಛತ್ತೀಸ್‌ಗಢ ಸೋಲು ಅನಿರೀಕ್ಷಿತವಾಗಿದೆ. ಚುನಾವಣಾಪೂರ್ವ ಮತ್ತು ಕೆಲವು ಎಕ್ಸಿಟ್ ಪೋಲ್‌ಗಳು ಛತ್ತೀಸ್‌ಗಢ ಗೆಲ್ಲುವ ಕಾಂಗ್ರೆಸ್, ಮಧ್ಯ ಪ್ರದೇಶದಲ್ಲಿ ಫುಲ್ ಫೈಟ್ ನೀಡಲಿದೆ ಎಂದು ಹೇಳಿದ್ದವು. ಆದರೆ, ರಿಸಲ್ಟ್ ಮಾತ್ರ ಸಂಪೂರ್ಣ ಉಲ್ಟಾ ಆಗಿದ್ದು, ಬಿಜೆಪಿ (BJP Party) ಭರ್ಜರಿ ಜಯ ಸಾಧಿಸಿದೆ. ಹಾಗಾಗಿ, ಸಹಜವಾಗಿಯೇ 2024ರ ಲೋಕಸಭೆ ಚುನಾವಣೆಗಾಗಿ (Lok Sabha Election 2024) ಒಂದಾಗಿರುವ ಇಂಡಿಯಾ ಕೂಟದ (India Bloc) ಮೇಲೆ ಈ ಸೋಲು ಪರಿಣಾಮ ಬೀರುವ ಸಾಧ್ಯತೆಗಳಿವೆ. ಈಗಾಗಲೇ ಮಮತಾ ಬ್ಯಾನರ್ಜಿ, ಅಖಿಲೇಶ್ ಸಿಂಗ್ ಯಾದವ್, ಒಮರ್ ಅಬ್ದುಲ್ಲಾ ಸೇರಿ ಹಲವರು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸೋಲು, ಇಂಡಿಯಾ ಕೂಟದ ನಾಯಕತ್ವಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಹಟ್ಟು ಹಾಕಿದೆ. ಲೋಕಸಭೆ ಚುನಾವಣೆಯವರೆಗೂ ಈ ಕೂಟ ಬದುಕುಳಿಯಲಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.
#WATCH | Kolkata: On the upcoming INDIA alliance meeting on December 6, West Bengal CM Mamata Banerjee says, " I don't know, I have got no information so I kept a programme in North Bengal…If we had the information, we wouldn't have scheduled those programmes. We would have… https://t.co/iz5pDFIFK8 pic.twitter.com/3yYzikRRgu
— ANI (@ANI) December 4, 2023
ಈ ಮಧ್ಯೆ, ಮಲ್ಲಿಕಾರ್ಜುನ ಖರ್ಗೆ ಅವರು ಡಿಸೆಂಬರ್ 6ರಂದು ಇಂಡಿಯಾ ಕೂಟದ ಸಭೆ ಕರೆದಿದ್ದಾರೆ. ಮೂರು ತಿಂಗಳ ಬಳಿಕ ಇಂಡಿಯಾ ಕೂಟದ ಸಭೆ ನಡೆಯುತ್ತಿದೆ. ಆದರೆ, ಈ ಸಭೆಗೆ ತಾನು ಭಾಗವಹಿಸುತ್ತಿಲ್ಲ ಎಂದು ಹೇಳುವ ಮೂಲಕ ತೃಣಮೂಲ ಕಾಂಗ್ರೆಸ್ ಅಪಸ್ವರ ಎತ್ತಿದೆ. ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ಸೀಟ್ ಷೇರಿಂಗ್ ಮೂಲಕ ಚುನಾವಣೆ ಎದುರಿಸಿದ್ದರೆ ಖಂಡಿತವಾಗಿಯೂ ಬಿಜೆಪಿ ಸೋಲುತ್ತಿತ್ತು. ಮತಗಳ ವಿಭಜನೆಯಿಂದಾಗಿ ಬಿಜೆಪಿ ಗೆದ್ದಿದೆ ಎಂದು ತೃಣಮೂಲ ನಾಯಕಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಹೇಳಿದ್ದೇನು?
ಕಾಂಗ್ರೆಸ್ ಪಕ್ಷವು ತೆಲಂಗಾಣದಲ್ಲಿ ಗೆದ್ದಿದೆ. ಅವರು ಮಧ್ಯ ಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನವನ್ನೂ ಗೆಲ್ಲಬಹುದಾಗಿತ್ತು. ಇಂಡಿಯಾ ಕೂಟದ ಕೆಲವು ಪಕ್ಷಗಳು ವೋಟ್ ಕಟ್ ಮಾಡಿವೆ. ಇದುವೇ ಸತ್ಯ. ಹಾಗಾಗಿ ನಾವು ಸೀಟ್ ಷೇರಿಂಗ್ ಬಗ್ಗೆ ಸಲಹೆ ನೀಡಿದ್ದೆವು. ಮತ ವಿಭಜನೆಯಿಂದಾಗಿಯೇ ಕಾಂಗ್ರೆಸ್ ಸೋತಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕಾಂಗ್ರೆಸ್‌ಗೆ ಈಗ ‘ಇಂಡಿಯಾ’ ನೆನಪಾಗಿದೆ- ಓಮರ್
ಕಾಂಗ್ರೆಸ್ ಪಕ್ಷಕ್ಕೆ ಮೈತ್ರಿಕೂಟವು ತಡವಾಗಿ ನೆನಪಾಗಿದೆ. ಡಿಸೆಂಬರ್ 6ರಂದು ಕಾಂಗ್ರೆಸ್ ಅಧ್ಯಕ್ಷರು ಇಂಡಿಯಾ ಕೂಟದ ನಾಯಕರಿಗೆ ಊಟಕ್ಕೆ ಆಹ್ವಾನಿಸಿದ್ದಾರೆ. ಮೂರು ತಿಂಗಳ ನಂತರ ಇಂಡಿಯಾ ಕೂಟವನ್ನು ತಡವಾಗಿ ನೆನಪಿಸಿಕೊಂಡಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಲೇವಡಿ ಮಾಡಿದರು.
ನಮ್ಮ ಕಡೆಯಿಂದಲೂ ತಪ್ಪಾಗಿದೆ ಎಂದರಾ ಖರ್ಗೆ?
ತಪ್ಪುಗಳು ನಡೆದಿವೆ ಮತ್ತು ನಾವು ತಿದ್ದುಪಡಿ ಮಾಡಿಕೊಳ್ಳೋಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆಂದು ಮೂಲಗಳ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ಕೆಲವು ರಾಜ್ಯಗಳಲ್ಲಿ ಅತಿಯಾದ ವಿಶ್ವಾಸ ಮತ್ತು ಸರಿಯಾದ ಅಭ್ಯರ್ಥಿಗಳಿಗೆ ಮನ್ನಣೆ ನೀಡದಿರುವುದು ಮತ್ತು ಚುನಾವಣೆಯ ಕೊನೆಯ ಕೆಲವು ದಿನಗಳಲ್ಲಿ ನಾವು ಭಾರೀ ಹಿನ್ನಡೆ ಅನುಭವಿಸಿದ್ದು ಸೋಲಿಗೆ ಕಾರಣವಾಯಿತು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸೋಲು ಇಂಡಿಯಾ ಕೂಟದ ಮೇಲೆ ಪರಿಣಾಮ ಇಲ್ಲ
ಇಷ್ಟಾಗಿಯೂ ಎಸ್‌ಪಿ ನಾಯಕ ಅಖಿಲೇಶ್ ಯಾದವ್, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಸೇರಿದಂತೆ ಬಹುತೇಕ ನಾಯಕರು, ಕಾಂಗ್ರೆಸ್ ಪಕ್ಷದ ಸೋಲು ಇಂಡಿಯಾ ಕೂಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ. ನಾವು ಯಾವ ಉದ್ದೇಶಕ್ಕೆ ಕೂಟವನ್ನು ರಚಿಸಿದ್ದೇವೆಯೋ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆಗಾಗಿ ನಾವು ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ. 2024ರಲ್ಲಿ ಬದಲಾವಣೆಯಾಗಲಿದ್ದು, ಐತಿಹಾಸಿಕ ಫಲಿತಾಂಶ ಸಿಗಲಿದೆ ಎಂದು ಅವರು ಹೇಳಿದ್ದಾರೆ.
ಇಂಡಿಯಾ ಕೂಟದ ಮೇಲೆ ಪರಿಣಾಮ ಏನು?
-ಕೂಟದಲ್ಲಿ ನಾಯಕರ ಮೇಲುಗೈಗೆ ಹೆಚ್ಚಿನ ಸಂಘರ್ಷವಾಗಬಹುದು.
-ಸೋತಿದ್ದರಿಂದ ಕಾಂಗ್ರೆಸ್ ನಾಯಕತ್ವಕ್ಕೆ ಹೆಚ್ಚಿನವರು ಒಪ್ಪಲಿಕ್ಕಿಲ್ಲ
-ಮಮತಾ, ನಿತೀಶ್, ಕೇಜ್ರಿವಾಲ್ ಸೇರಿ ಹಲವುರ ನಾಯಕತ್ವಕ್ಕೆ ಒತ್ತಾಯಿಸಬಹುದು.
-ಒಮ್ಮತ ಮೂಡದಿದ್ದರೆ ಲೋಕಸಭೆ ಚುನಾವಣೆ ಮುನ್ನವೇ ಕೂಟ ಛಿದ್ರವಾಗಬಹುದು.
-ಲೋಕಸಭೆ ಎಲೆಕ್ಷನ್ ವೇಳೆ, ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ನಿಂದ ಹೆಚ್ಚಿನ ಸೀಟಿಗೆ ಒತ್ತಾಯಿಸಬಹುದು.
-ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಬಹುದು.
-ಇಂಡಿಯಾ ಕೂಟದ ಕಚ್ಚಾಟವು ಬಿಜೆಪಿ ಲಾಭ ತಂದುಕೊಡಬಹುದು.
ಈ ಸುದ್ದಿಯನ್ನೂ ಓದಿ: Assembly Elections 2023: ಬಿಜೆಪಿಗೆ ನಾಲ್ಕನೇ ಮೂರು ಬಹುಮತ, ಕಾಂಗ್ರೆಸ್‌ಗೆ ಒಂದೇ ಗ್ಯಾರಂಟಿ!