Site icon Vistara News

ಅಂಬೇಡ್ಕರ್‌ಗೆ ಭಾರತರತ್ನ ಕೊಡದೆ ನಮಗೆ ತಾವೇ ಪ್ರಶಸ್ತಿ ಕೊಟ್ಟುಕೊಂಡರು! ಕಾಂಗ್ರೆಸ್‌ಗೆ ಮೋದಿ ಚಾಟಿ

Narendra Modi

Congress denied Bharat Ratna to Ambedkar for decades; Says PM Narendra Modi In Rajya Sabha

ನವದೆಹಲಿ: ಪ್ರತಿಪಕ್ಷ ಕಾಂಗ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜ್ಯಸಭೆಯಲ್ಲೂ ವಾಗ್ದಾಳಿ ಮುಂದುವರಿಸಿದ್ದಾರೆ. “ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ (Dr BR Ambedkar) ಅವರಿಗೆ ದಶಕಗಳವರೆಗೆ ಭಾರತರತ್ನ ಪ್ರಶಸ್ತಿ ನೀಡಿರಲಿಲ್ಲ. ಆದರೆ, ಕಾಂಗ್ರೆಸ್‌ ನಾಯಕರು ತಮಗೆ ತಾವೇ ಭಾರತರತ್ನ (Bharat Ratna) ಪ್ರಶಸ್ತಿ ಕೊಟ್ಟುಕೊಂಡರು. ಆ ಮೂಲಕ ಕಾಂಗ್ರೆಸ್‌ ನಾಯಕರು ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದರು” ಎಂದು ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

“ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಭಾರತರತ್ನ ಕೊಡುವ ಮನಸ್ಸೇ ಕಾಂಗ್ರೆಸ್‌ಗೆ ಇರಲಿಲ್ಲ. ಬಿಜೆಪಿ ಸಹಯೋಗದ ಸರ್ಕಾರವು ಅಂಬೇಡ್ಕರ್‌ ಅವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಿತು. ದಮನಿತ ಸಮುದಾಯದ ಸೀತಾರಾಮ್‌ ಕೇಸರಿ ಅವರಿಗೂ ಕಾಂಗ್ರೆಸ್‌ ಅವಮಾನ ಮಾಡಿತು. ಜವಾಹರ ಲಾಲ್‌ ನೆಹರು ಅವರಂತೂ ಅಲ್ಪಸಂಖ್ಯಾತರ ಹಕ್ಕುಗಳನ್ನೇ ಪರಿಗಣಿಸಿರಲಿಲ್ಲ. ಈಗ ಆದಿವಾಸಿ ಮಹಿಳೆ ರಾಷ್ಟ್ರಪತಿಯಾಗಿರುವುದನ್ನು ಸಹಿಸದ ಕಾಂಗ್ರೆಸ್ಸಿಗರು ರಾಷ್ಟ್ರಪತಿ ಕುರಿತೂ ಅಗೌರವದಿಂದ ಮಾತನಾಡುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ಅಂಬೇಡ್ಕರ್‌ ಅವರನ್ನು ಕಾಂಗ್ರೆಸ್‌ ಸೋಲಿಸಿತು. ಅವರ ವಿಚಾರಧಾರೆಗಳನ್ನು ಬದಿಗೆ ತಳ್ಳಿತು. ಗಾಂಧಿ ಕುಟುಂದ ಹೊರತಾದ ರಾಜಕಾರಣಿಗಳನ್ನು ಬೀದಿಗೆ ತಂದರು. ಜಮ್ಮು-ಕಾಶ್ಮೀರದಲ್ಲಿ ದಲಿತರು, ಹಿಂದುಳಿದವರ ಹಕ್ಕುಗಳನ್ನು ಕಡೆಗಣಿಸಿತು. ಎಸ್‌ಸಿ, ಎಸ್‌ಟಿ, ಒಬಿಸಿ, ಆದಿವಾಸಿಗಳನ್ನು ನಿರ್ಲಕ್ಷಿಸಿತು. ಉದ್ಯೋಗ ಮೀಸಲಾತಿಯನು ಜವಾಹರ ಲಾಲ್‌ ನೆಹರು ವಿರೋಧಿಸಿದ್ದರು. ಆದರೆ, ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿತು” ಎಂದು ತಿಳಿಸಿದರು.

ಇದನ್ನೂ ಓದಿ: ಬಿಜೆಪಿ 400 ಸೀಟು ಗೆಲ್ಲುತ್ತೆ ಅಂದಿದ್ದಾರೆ ಖರ್ಗೆ, ಕಾಂಗ್ರೆಸ್ 40 ದಾಟಲ್ಲ ಅಂದಿದ್ದಾರೆ ಮಮತಾ; ಮೋದಿ ಗೇಲಿ

“ಕಳೆದ 10 ವರ್ಷಗಳಲ್ಲಿ ಬಿಜೆಪಿ ಸರ್ಕಾರವು ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಒಳ್ಳೆಯ ಸ್ಕಾಲರ್‌ಶಿಪ್‌ ನೀಡಿದೆ. ಎಸ್‌ಸಿ, ಎಸ್‌ಟಿ ಸಮುದಾಯದ ಮಕ್ಕಳು ಶಾಲೆ ಪ್ರವೇಶಾತಿ ಪಡೆಯುವ ಪ್ರಮಾಣ ಜಾಸ್ತಿಯಾಗಿದೆ. ಏಕಲವ್ಯ ಶಾಲೆಗಳನ್ನು ಸ್ಥಾಪಿಸಿದ್ದೇವೆ. ಎರಡು ಬುಡಕಟ್ಟು ವಿಶ್ವವಿದ್ಯಾಲಯಗಳು ಇವೆ. ದಲಿತರು, ಆದಿವಾಸಿಗಳ ಹೆಣ್ಣುಮಕ್ಕಳು ಕಾಲೇಜು ಮೆಟ್ಟಿಲು ಹತ್ತಲು ಆಗುತ್ತಿರಲಿಲ್ಲ. ಆದರೆ, ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವ ಮೂಲಕ ಆದಿವಾಸಿಗಳ ಮಕ್ಕಳು ಕೂಡ ಕಾಲೇಜು ಮೆಟ್ಟಿಲು ಹತ್ತುವ, ಎಂಜಿನಿಯರಿಂಗ್‌, ವೈದ್ಯಕೀಯ ಶಿಕ್ಷಣ ಪಡೆಯುವಂತೆ ಮಾಡಿದ್ದೇವೆ” ಎಂದು ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version