Site icon Vistara News

TS Singh Deo ರಾಜ್ಯಗಳಿಗೆ ಮೋದಿ ಎಂದೂ ತಾರತಮ್ಯ ಮಾಡಿಲ್ಲ; ಕಾಂಗ್ರೆಸ್‌ ಉಪ ಮುಖ್ಯಮಂತ್ರಿ ಮೆಚ್ಚುಗೆ

Narendra Modi And TS Singh Deo

Congress deputy CM TS Singhdeo Praises PM Narendra Modi, Says no bias For states

ರಾಯ್‌ಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇತ್ತೀಚೆಗೆ ದೆಹಲಿಯಲ್ಲಿ ಜಿ 20 ಶೃಂಗಸಭೆಯನ್ನು (G20 Summit 2023) ಯಶಸ್ವಿಯಾಗಿ ಆಯೋಜಿಸಿದ್ದಕ್ಕೆ ಪ್ರತಿಪಕ್ಷಗಳ ನಾಯಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಛತ್ತೀಸ್‌ಗಢ ಉಪ ಮುಖ್ಯಮಂತ್ರಿ ಟಿ.ಎಸ್‌. ಸಿಂಗ್‌ ದೇವ್‌ (TS Singh Deo) ಅವರು ಕೂಡ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಮೆಚ್ಚಿದ್ದಾರೆ. “ನರೇಂದ್ರ ಮೋದಿ ಅವರು ಎಂದಿಗೂ ರಾಜ್ಯಗಳ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಧೋರಣೆ ಅನುಸರಿಸಿಲ್ಲ” ಎಂದು ಹೇಳಿದ್ದಾರೆ.

ಛತ್ತೀಸ್‌ಗಢ ರಾಜಧಾನಿ ರಾಯ್‌ಪುರದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಟಿ.ಎಸ್‌.ಸಿಂಗ್‌ ದೇವ್‌ ಅವರು ಒಂದೇ ವೇದಿಕೆ ಹಂಚಿಕೊಂಡಿದ್ದರು. ಇದೇ ವೇಳೆ ಮೋದಿ ಅವರು ರಕ್ತಹೀನತೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅನುಕೂಲವಾಗಲಿ ಎಂದು ಒಂದು ಲಕ್ಷ ರಕ್ತಹೀನತೆ ಕೌನ್ಸೆಲಿಂಗ್‌ ಕಾರ್ಡ್‌ಗಳನ್ನು (Sickle Cell Counselling Cards) ವಿತರಣೆ ಮಾಡಿದರು. ಹಾಗೆಯೇ, ವೇದಿಕೆ ಮೇಲೆ ಮಾತನಾಡಿದ ಟಿ.ಎಸ್.‌ ಸಿಂಗ್‌ ದೇವ್‌ ಅವರು ಮೋದಿ ಸರ್ಕಾರದ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದರು.

“ಛತ್ತೀಸ್‌ಗಢದಲ್ಲಿ 10 ಜನರಲ್ಲಿ ಒಬ್ಬರು ರಕ್ತಹೀನತೆಯಿಂದ (Sickle Cell) ಬಳಲುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಇಂತಹ ಕಾಯಿಲೆಯಿಂದ ಬಳಲುತ್ತಿರುವವರಿಗೆ ನೆರವು ಸಿಗುತ್ತಿದೆ. ನನ್ನ ಅನುಭವದಲ್ಲಿ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಎಂದಿಗೂ ತಾರತಮ್ಯ ಧೋರಣೆ ಅನುಸರಿಸಿಲ್ಲ. ನಾವು ಕೇಳಿದ್ದೆಲ್ಲವನ್ನೂ ಕೇಂದ್ರ ಸರ್ಕಾರ ನೀಡಿದೆ. ಮುಂದಿನ ದಿನಗಳಲ್ಲೂ ಇಂತಹ ಸಹಕಾರದೊಂದಿಗೆ ಏಳಿಗೆ ಸಾಧಿಸೋಣ” ಎಂದು ಹೇಳಿದ್ದಾರೆ. ಆಗ ಮೋದಿ ಅವರು ನಮಸ್ಕಾರದ ಮೂಲಕ ಟಿ.ಎಸ್.ಸಿಂಗ್‌ ದೇವ್‌ ಅವರ ಮೆಚ್ಚುಗೆಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: PM Narendra Modi: ವಿಶ್ವದ ಜನಪ್ರಿಯ ನಾಯಕ ಪ್ರಧಾನಿ ಮೋದಿಯ ನಂ.1 ಸ್ಥಾನ ಅಬಾಧಿತ!

ಸಿಎಂ ವರ್ಸಸ್‌ ಡಿಸಿಎಂ

ಛತ್ತೀಸ್‌ಗಢ ಡಿಸಿಎಂ ಟಿ.ಎಸ್‌.ಸಿಂಗ್‌ ದೇವ್‌ ಅವರು ಕೇಂದ್ರ ಸರ್ಕಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಬೆನ್ನಲ್ಲೇ, ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಮಧ್ಯೆ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.

ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜ್ಯಕ್ಕೆ ನೀಡಬೇಕಾದ ಅಬಕಾರಿ ಸುಂಕದ ಪಾಲು ನೀಡಿಲ್ಲ, ತಾರತಮ್ಯ ಮಾಡುತ್ತದೆ ಎಂದು ಆರೋಪಿಸಿದ್ದರು. ಈಗ ಟಿ.ಎಸ್‌.ಸಿಂಗ್‌ ದೇವ್‌ ಅವರು ಕೇಂದ್ರ ಸರ್ಕಾರವನ್ನು ಹೊಗಳಿದ್ದಾರೆ. ಬಘೇಲ್‌ ಅವರ ಸುಳ್ಳನ್ನು ಸಿಂಗ್‌ ದೇವ್‌ ಅವರು ಬಯಲು ಮಾಡಿದ್ದಾರೆ ಎಂದೇ ಹೇಳಲಾಗುತ್ತಿದೆ.

Exit mobile version