ನವದೆಹಲಿ: 2016ರಲ್ಲಿ ಉರಿ ದಾಳಿ ಬಳಿಕ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರರ ಮೇಲೆ ಕೈಗೊಂಡ ಸರ್ಜಿಕಲ್ ಸ್ಟ್ರೈಕ್ (Surgical Strike) ಸಾಕ್ಷ್ಯದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಸರ್ಜಿಕಲ್ ಸ್ಟ್ರೈಕ್ ಸಾಕ್ಷ್ಯ ಕೇಳಿದ್ದು, ಇದಕ್ಕೆ ಬಿಜೆಪಿ ಭಾರಿ ಟೀಕೆ ವ್ಯಕ್ತಪಡಿಸಿದೆ. ಮತ್ತೊಂದೆಡೆ, ಕಾಂಗ್ರೆಸ್ ಅಂತರ ಕಾಯ್ದುಕೊಳ್ಳುವ ಮೂಲಕ ರಕ್ಷಣಾತ್ಮಕ ತಂತ್ರ ಬಳಸಿದೆ.
ದಿಗ್ವಿಜಯ್ ಸಿಂಗ್ ಹೇಳಿದ್ದೇನು?
“ನಿರ್ದಿಷ್ಟ ದಾಳಿ ಬಗ್ಗೆ ಕೇಂದ್ರ ಸರ್ಕಾರ ಮಾತನಾಡುತ್ತದೆ. ಭಾರತದ ಯೋಧರು ಉಗ್ರರನ್ನು ಹತ್ಯೆ ಮಾಡಿದರು ಎಂಬುದಾಗಿ ಪ್ರಸ್ತಾಪಿಸುತ್ತದೆ. ಆದರೆ, ಇದುವರೆಗೆ ಸರ್ಜಿಕಲ್ ಸ್ಟ್ರೈಕ್ ಸಾಕ್ಷ್ಯ ಒದಗಿಸಿಲ್ಲ. ಹಾಗೆಯೇ, ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಲೇ 2019ರಲ್ಲಿ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆಯಿತು” ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ
ದಿಗ್ವಿಜಯ್ ಸಿಂಗ್ ಹೇಳಿಕೆ ನೀಡುತ್ತಲೇ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. “ಬೇಜವಾಬ್ದಾರಿಯುತ ಹೇಳಿಕೆ ನೀಡುವುದು ಕಾಂಗ್ರೆಸ್‌ಗೆ ರೂಢಿಯಾಗಿದೆ. ಆದರೆ, ಸೈನಿಕರ ವಿರುದ್ಧ ಮಾತನಾಡುವುದನ್ನು ದೇಶದ ಜನ ಸಹಿಸುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ದ್ವೇಷಿಸುವ ಭರದಲ್ಲಿ ರಾಹುಲ್ ಗಾಂಧಿ ಹಾಗೂ ದಿಗ್ವಿಜಯ್ ಸಿಂಗ್ ಅವರ ಬಳಿ ದೇಶಪ್ರೇಮವೇ ಉಳಿದಿಲ್ಲ” ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತರ ಕಾಯ್ದುಕೊಂಡ ಕಾಂಗ್ರೆಸ್
ಸರ್ಜಿಕಲ್ ಸ್ಟ್ರೈಕ್ ಕುರಿತು ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿರುವ ವಿಚಾರದಲ್ಲಿ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. “ದಿಗ್ವಿಜಯ್ ಸಿಂಗ್ ಅವರು ನೀಡಿದ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ. ದೇಶದ ಹಿತಾಸಕ್ತಿಯನ್ನು ಎತ್ತಿಹಿಡಿಯುವ ಸೈನಿಕರಿಗೆ ಕಾಂಗ್ರೆಸ್ ಯಾವಾಗಲೂ ಗೌರವ ಸಲ್ಲಿಸುತ್ತದೆ” ಎಂದು ಎಐಸಿಸಿ ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | Anti Naxal Operation | ಸರ್ಜಿಕಲ್ ಸ್ಟ್ರೈಕ್ನಲ್ಲಿ ಸತ್ತಿದ್ದಾನಾ ನಕ್ಸಲ್ ನಾಯಕ ಹಿದ್ಮಾ? ಮಾವೋವಾದಿ ವಕ್ತಾರೆ ಹೇಳಿದ್ದೇನು?