Site icon Vistara News

ಕಾಂಗ್ರೆಸ್‌ನಂತೆ 15 ತಿಂಗಳಲ್ಲಿ ಪ್ರತಿಪಕ್ಷಗಳೂ ರಾಹುಲ್‌ ಗಾಂಧಿಯಿಂದ ನಿರ್ನಾಮ; ಆಚಾರ್ಯ ಪ್ರಮೋದ್‌ ಸ್ಫೋಟಕ ಹೇಳಿಕೆ!

Acharya Pramod Krishnam

Congress finished in 15 years, Oppn will also be finished in 15 months: Acharya Pramod Krishnam

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ (Rahul Gandhi) ಗಾಂಧಿ ಅವರು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಹೊರಹೊಮ್ಮಿದ್ದಾರೆ. ಪ್ರತಿಪಕ್ಷ ನಾಯಕನಾಗಿ ಅವರು ಕಾಂಗ್ರೆಸ್‌ ಜತೆಗೆ ಇಂಡಿಯಾ ಒಕ್ಕೂಟವನ್ನೂ (INDIA Bloc) ಸಂಸತ್‌ನಲ್ಲಿ ಪ್ರತಿನಿಧಿಸಲಿದ್ದಾರೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ ಮಾಜಿ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣಂ (Acharya Pramod Krishnam) ಅವರು ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಕಾಂಗ್ರೆಸ್‌ನಂತೆ ಪ್ರತಿಪಕ್ಷಗಳನ್ನೂ ರಾಹುಲ್‌ ಗಾಂಧಿ ನಿರ್ನಾಮ ಮಾಡಲಿದ್ದಾರೆ” ಎಂದು ಅವರು ಹೇಳಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಐಎಎನ್‌ಎಸ್‌ ಸುದ್ದಿಸಂಸ್ಥೆಯೊಂದಿಗೆ ಆಚಾರ್ಯ ಪ್ರಮೋದ್‌ ಕೃಷ್ಣಂ ಮಾತನಾಡಿದರು. “ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ಅನ್ನು ಮುಗಿಸಲು 15 ವರ್ಷ ತೆಗೆದುಕೊಂಡರು. ಇನ್ನು, ರಾಹುಲ್‌ ಗಾಂಧಿ ಅವರು ಪ್ರತಿಪಕ್ಷಗಳನ್ನು 15 ತಿಂಗಳೊಳಗೇ ಮುಗಿಸಲಿದ್ದಾರೆ” ಎಂದು ಹೇಳಿದರು. ಸಂಸತ್‌ನಲ್ಲಿ ಪ್ರಮಾಣವಚನ ಸ್ವೀಕರಿಸುವ ವೇಳೆ ಜೈ ಪ್ಯಾಲೆಸ್ತೀನ್‌ ಎಂದು ಅಸಾದುದ್ದೀನ್‌ ಓವೈಸಿ ಘೋಷಣೆ ಕೂಗಿದ ಕುರಿತು ಪ್ರತಿಕ್ರಿಯಿಸಿದ ಅವರು, “ಇದು ಭಾರತ ಸಂಸತ್ತು. ಭಾರತದ ಸಂಸತ್‌ನಲ್ಲಿ ಹಾಗೆ ಘೋಷಣೆ ಕೂಗುವುದು ಸರಿಯಲ್ಲ. ಅವರು ಕೂಡಲೇ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದರು.

ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಕಾಂಗ್ರೆಸ್‌ ನಾಯಕರೂ ಆಗಿದ್ದರು. ಕಲ್ಕಿ ಧಾಮದ ಪೀಠಾಧೀಶರೂ ಆಗಿರುವ ಇವರನ್ನು ಕೆಲವು ತಿಂಗಳ ಹಿಂದಷ್ಟೇ ಕಾಂಗ್ರೆಸ್‌ ಉಚ್ಚಾಟನೆ ಮಾಡಿದೆ. ಕಲ್ಕಿ ದೇವಾಲಯಕ್ಕೆ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ ಬಳಿಕ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಉಚ್ಚಾಟನೆ ಮಾಡಿತ್ತು. ಇದಾದ ಬಳಿಕ ನರೇಂದ್ರ ಮೋದಿ ಅವರು ಕಲ್ಕಿ ದೇವಾಲಯಕ್ಕೆ ಭೇಟಿ ನೀಡಿ, ಆಚಾರ್ಯ ಪ್ರಮೋದ್‌ ಕೃಷ್ಣಂ ಅವರನ್ನು ಹೊಗಳಿದ್ದರು.

“ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಕಲ್ಕಿ ಧಾಮ ದೇವಾಲಯ ನಿರ್ಮಾಣಕ್ಕಾಗಿ ಹೋರಾಡಿದರು. ಇದಕ್ಕೂ ಮೊದಲಿನ ಸರ್ಕಾರಗಳು ಕಲ್ಕಿ ಧಾಮ ದೇವಾಲಯ ನಿರ್ಮಾಣಕ್ಕೆ ಅವಕಾಶ ಕೊಡಲಿಲ್ಲ. ಕಾನೂನು ಹೋರಾಟವನ್ನೂ ಪ್ರಮೋದ್‌ ಕೃಷ್ಣಂ ಅವರು ಮಾಡಬೇಕಾಯಿತು. ಕಲ್ಕಿ ಮಂದಿರ ನಿರ್ಮಾಣವಾದರೆ ಕಾನೂನು ಸುವ್ಯಸ್ಥೆಗೆ ಧಕ್ಕೆಯುಂಟಾಗುತ್ತದೆ ಎಂದರು. ಆದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಕಲ್ಕಿ ಮಂದಿರ ನಿರ್ಮಾಣಕ್ಕಶಂಕುಸ್ತಾಪನೆ ನೆರವೇರಿಸಲಾಗುತ್ತದೆ” ಎಂದು ಪ್ರತಿಪಕ್ಷಗಳಿಗೆ ಮೋದಿ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದರು.

ಇದನ್ನೂ ಓದಿ: Parliament Session 2024: ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಹುಲ್‌ ಗಾಂಧಿ ಮಾಡಿದ್ದೇನು ಗೊತ್ತಾ? ವೈರಲಾಯ್ತು ವಿಡಿಯೋ

Exit mobile version