ನವದೆಹಲಿ: ಶುಕ್ರವಾರ ಸಂಜೆ ಒಡಿಶಾದಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತಕ್ಕೆ (Odisha Train Accident) ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಕಾಂಗ್ರೆಸ್ (Congress) ಹರಿಹಾಯ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸುತ್ತ ಸೃಷ್ಟಿಸಿಕೊಂಡಿರುವ ‘ಕವಚ್’ (Kavach) ಅವರನ್ನು ಎಲ್ಲ ಸಾರ್ವಜನಿಕ ವಿಮರ್ಶೆ ಮತ್ತು ದೂರದರ್ಶನಗಳ ಚರ್ಚೆಯಿಂದ ರಕ್ಷಿಸುತ್ತಿದೆ. ಅದು ದೇಶದ ಜನರನ್ನು ರಕ್ಷಿಸುವುದಿಲ್ಲ ಎಂದು ಟಾಂಗ್ ಕೊಟ್ಟಿದೆ.
ಯಾವ ಪ್ರಧಾನಿಗೂ ಈ ರೀತಿಯ ರಕ್ಷಣೆ ಇರಲಿಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿ, ಮಾಧವರಾವ್ ಸಿಂಧಿಯಾ ಮತ್ತು ನಿತೀಶ್ ಕುಮಾರ್ ಅವರಂಥವರು ಅಪಘಾತಗಳ ನಂತರ ರಾಜೀನಾಮೆ ನೀಡಿದ ಉದಾಹರಣೆಗಳಿವೆ. ರಾಜೀನಾಮೆ ಎಂದರೆ ನೈತಿಕ ಹೊಣೆಗಾರಿಕೆ. ಆದರೆ ಬಿಜೆಪಿ ಸರ್ಕಾರದಲ್ಲಿ ಜವಾಬ್ದಾರಿ ಅಥವಾ ನೈತಿಕತೆ ಇಲ್ಲ ಎಂದು ಕಾಂಗ್ರೆಸ್‌ನ ಪವನ್ ಖೇರಾ ಸುದ್ದಿಗೋಷ್ಠಿಯಲ್ಲಿ ಹೇಳಿದರು. 288ರ ಜೀವಗಳನ್ನು ಬಲಿ ಪಡೆದುಕೊಂಡ ಈ ರೈಲು ಅಪಘಾತದ ಕುರಿತು ದೂರದರ್ಶನಗಳಲ್ಲಿ ನಡೆಸಲಾದ ಎಲ್ಲ ಚರ್ಚೆಗಳಿಂದ ಕಾಂಗ್ರೆಸ್ ದೂರ ಉಳಿದಿದೆ.
ಘಟನೆಗೆ ಸಂಬಂಧಿಸಿದಂತೆ ನಾವು ಯಾರನ್ನು ರಾಜೀನಾಮೆ ಕೇಳಬೇಕು ಎಂದು ನಮಗೆ ತಿಳಿದಿಲ್ಲ. ಸಣ್ಣ ರೈಲುಗಳನ್ನು ಉದ್ಘಾಟಿಸಲು ಸಣ್ಣ ನಿಲ್ದಾಣಗಳಿಗೆ ಹೋಗುವವರು ಅಥವಾ ನಿನ್ನೆ ಬೆಳಿಗ್ಗೆಯಿಂದ ಪ್ರಚಾರದಲ್ಲಿ ನಿರತರಾಗಿರುವ ಪ್ರಧಾನಿ ಮೋದಿಜೀ, ನಿಮಗೆ ಯಾರ ರಾಜೀನಾಮೆ ಬೇಕು ಎಂದು ನೀವೇ ನಿರ್ಧರಿಸಿ. ಏಕೆಂದರೆ ಈಗ ಲಾಲ್ ಬಹದ್ದೂರ್ ಶಾಸ್ತ್ರಿ, ನಿತೀಶ್ ಕುಮಾರ್ ರಾಜೀನಾಮೆ ನೀಡಿದ ರೀತಿಯಲ್ಲಿ ನೀವು ನಿಮ್ಮ ರೈಲ್ವೆ ಸಚಿವರ ರಾಜೀನಾಮೆಯನ್ನು ಬಯಸುತ್ತೀರಿ ಎಂದು ರಾಷ್ಟ್ರವು ನಿರೀಕ್ಷಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಹೇಳಿದರು.
ನಾವು ವೇಗದ ರೈಲುಗಳ ವಿರುದ್ಧ ಇಲ್ಲ. ಆದರೆ, ಸಾಮಾನ್ಯ ಬೋಗಿಗಳ ಪರಿಸ್ಥಿತಿಯನ್ನು ನೋಡ ಹೇಗಿವೆ. ಹೀಗಿರುವಾಗ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿ ನೀವು ಏನನ್ನು ಸಾಧಿಸಲು ಹೊರಟಿದ್ದೀರಿ. ಕಳೆದ 70 ವರ್ಷಗಳಲ್ಲಿ ಹಲವು ಸರ್ಕಾರಗಳು ಭಾರತೀಯ ರೈಲ್ವೆ ಇಲಾಖೆಯನ್ನು ಬಲಶಾಲಿಗೊಳಿಸುವ ಪ್ರಯತ್ನವನ್ನು ಮಾಡಿವೆ. ಆದರೆ, ಪ್ರಾಣ ಹೋದರೂ ಪರ್ವಾಗಿಲ್ಲ. ಪಿಆರ್ ಮಾತ್ರ ಬಿಡುವುದಿಲ್ಲ ಎಂಬ ನೀತಿಯನ್ನು ಪ್ರಧಾನಿ ಅನುಸರಿಸುತ್ತಿದ್ದಾರೆಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ವ್ಯಂಗ್ಯ ಮಾಡಿದರು.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಪ್ರತಿಪಕ್ಷಗಳಿಗೆ ತಿರುಗೇಟು ನೀಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಇದು ರಾಜಕೀಯ ಮಾಡುವ ಸಮಯವಲ್ಲ. ರಕ್ಷಣಾ ಕಾರ್ಯಾಚರಣೆ ಮುಗಿದ ನಂತರ ಮುಗಿದ ನಂತರ ರೈಲ್ವೆ ಹಳಿಗಳ ಮರುಸ್ಥಾಪನೆಯತ್ತ ಗಮನ ಹರಿಸಲಾಗಿದೆ. ಅಪಘಾತಕ್ಕೆ ಮೂಲ ಕಾರಣವನ್ನು ಗುರುತಿಸಲಾಗಿದ್ದು, ತನಿಖಾ ವರದಿಯನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದು ಸಚಿವರು ಭಾನುವಾರ ಹೇಳಿದ್ದಾರೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.