ನವ ದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 17ರಂದು ನಡೆಯಲಿರುವ ಚುನಾವಣೆ (Congress President Election) ಪಾರದರ್ಶಕವಾಗಿ, ನ್ಯಾಯಯುತವಾಗಿ ನಡೆಯಬೇಕು ಎಂಬ ಸಲಹಾ ಪತ್ರವನ್ನು ಕಾಂಗ್ರೆಸ್ನ ಶಶಿ ತರೂರ್, ಕಾರ್ತಿ ಚಿದಂಬರಂ, ಪ್ರದ್ಯುತ್ ಬೊರ್ಡೊಲೊಯ್, ಅಬ್ದುಲ್ ಖಲೀಕ್ ಸೇರಿ ಕಾಂಗ್ರೆಸ್ನ ಆಂತರಿಕ ಚುನಾವಣಾ ಸಮಿತಿ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿ ಅವರಿಗೆ ಬರೆದಿದ್ದರು. ಮತದಾರರ ಪಟ್ಟಿ, ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್ ಎಲ್ಲ ಪ್ರಮುಖರಿಗೆ ಸಿಗುವಂತಾಗಲಿ ಎಂದೂ ಕೋರಿದ್ದರು. ಐವರು ಸಂಸದರು ಈ ಪತ್ರವನ್ನು ಗುಟ್ಟಾಗಿ ಬರೆದಿದ್ದರೂ ಅದು ಹೇಗೋ ಸೋರಿಕೆಯಾಗಿ ವಿವಾದ ಸೃಷ್ಟಿಸಿತ್ತು.
ಅದೇನೇ ಇದ್ದರೂ ಈ ಸಂಸದರ ಪತ್ರವನ್ನು ಕಾಂಗ್ರೆಸ್ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದ್ದಾರೆ. ‘ಅಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಎಲ್ಲರಿಗೂ ಎಲೆಕ್ಟೋರಲ್ ಕಾಲೇಜ್ನ 9000 ಸದಸ್ಯರ ಪಟ್ಟಿ ಕಾಣುವಂತೆ ಮಾಡಲಾಗುವುದು, ಅಂದರೆ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಮತ ಹಾಕಲು ಯಾರೆಲ್ಲ ಅರ್ಹತೆ ಪಡೆದಿದ್ದಾರೋ (ಇವರನ್ನೆಲ್ಲ ಒಟ್ಟಾಗಿ ಎಲೆಕ್ಟೊರಲ್ ಕಾಲೇಜ್ ಎಂದು ಕರೆಯಲಾಗುತ್ತದೆ) ಅವರ ಹೆಸರು ಕಾಣಸಿಗುವಂತೆ ಮಾಡಲಾಗುವುದು. ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಕಚೇರಿಯಲ್ಲಿ ಸೆಪ್ಟೆಂಬರ್ 20ರಿಂದ ಈ ಪಟ್ಟಿ ವೀಕ್ಷಣೆಗೆ ಲಭ್ಯ ಇರಲಿದೆ’ ಎಂದು ಮಧುಸೂಧನ ಮಿಸ್ತ್ರಿ ಮಾಹಿತಿ ನೀಡಿದ್ದಾರೆ.
ಬೇರೆ ರಾಜ್ಯಗಳ ಕಾಂಗ್ರೆಸ್ ನಾಯಕರು ಯಾರಾದರೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಇಚ್ಛಿಸಿದರೆ ಪ್ರಕ್ರಿಯೆ ಹೇಗಿರುತ್ತದೆ ಎಂಬುದನ್ನೂ ಮಿಸ್ತ್ರಿ ವಿವರಿಸಿದ್ದಾರೆ. ಯಾವುದೇ ರಾಜ್ಯದಿಂದ ಯಾವುದೇ ಕಾಂಗ್ರೆಸ್ ನಾಯಕರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಇಚ್ಛಿಸಿದರೆ, ಅವರು ಎಲೆಕ್ಟೋರಲ್ ಕಾಲೇಜ್ನಲ್ಲಿ ಇರುವ ತಮ್ಮ ರಾಜ್ಯದ 10 ಮತದಾರರ ಹೆಸರನ್ನು ಅದೇ ರಾಜ್ಯದ ಕಾಂಗ್ರೆಸ್ ಕಚೇರಿಯಲ್ಲಿ ನೋಡಿಕೊಳ್ಳಬಹುದು. ನಂತರ ಅವರು ನಾಮಪತ್ರ ಸಲ್ಲಿಸಿದ ಬಳಿಕವಷ್ಟೇ ಎಲ್ಲ 9000 ಮತದಾರರ ಪಟ್ಟಿ ಕಾಣಸಿಗುತ್ತದೆ. ಅದು ಎಐಸಿಸಿ ಕಚೇರಿಯಲ್ಲಿರುವ ಕೇಂದ್ರ ಚುನಾವಣಾ ಪ್ರಾಧಿಕಾರದ ಕಚೇರಿಯಲ್ಲಿ ಮಾತ್ರ ಇರಲಿದೆ. ಸೆಪ್ಟೆಂಬರ್ 20ರಿಂದ 24ರವರೆಗೆ ಬೆಳಗ್ಗೆ 11ಗಂಟೆಯಿಂದ, ಸಂಜೆ 6ರವರೆಗೂ ಈ ಲಿಸ್ಟ್ ವೀಕ್ಷಣೆಗೆ ಅವಕಾಶವಿದೆ’ ಎಂದು ಮಿಸ್ತ್ರಿ ಮಾಹಿತಿ ನೀಡಿದ್ದಾರೆ.
‘ಯಾವುದೇ ಕಾಂಗ್ರೆಸ್ ನಾಯಕರು ತಮ್ಮ ಬೆಂಬಲಿಗರು ಯಾರಿದ್ದಾರೆ ಎಂಬುದನ್ನು ಅರಿಯದೆ ನಾಮಪತ್ರ ಸಲ್ಲಿಸಿ, ನಂತರ ಗೊಂದಲಕ್ಕೀಡಾಗುವ ಸ್ಥಿತಿಯನ್ನು ಇದು ತಪ್ಪಿಸುತ್ತದೆ. ನಾವು ಮಾಡಿರುವ ಈ ಬದಲಾವಣೆ ಶಶಿ ತರೂರ್ ಮತ್ತು ಪತ್ರಕ್ಕೆ ಸಹಿ ಹಾಕಿದ ಎಲ್ಲ ಸಂಸದರ ಆಶಯವನ್ನು ಈಡೇರಿಸಿದೆ ಎಂದು ನಾನು ಭಾವಿಸುತ್ತೇನೆ’ ಎಂದೂ ಮಧುಸೂಧನ್ ಮಿಸ್ತ್ರಿ ಹೇಳಿದ್ದಾರೆ.
ಇನ್ನೊಂದು ಮಹತ್ವದ ವಿಷಯವೆಂದರೆ, ಈ ಹಿಂದೆ ಇಂಥ ಹಲವು ಪತ್ರಗಳನ್ನು ಕಾಂಗ್ರೆಸ್ ನಾಯಕತ್ವ ಸಾರಾಸಗಟಾಗಿ ತಿರಸ್ಕರಿಸಿತ್ತು, ಮುಖಂಡರ ಬೇಡಿಕೆಗಳ ಬಗ್ಗೆ ಉದಾಸೀನ ಮಾಡುತ್ತಿತ್ತು. ಆದರೆ ಈ ಸಲ ಐವರು ಸಂಸದರ ಪತ್ರ ಬರುತ್ತಿದ್ದಂತೆ ಅಲರ್ಟ್ ಆಗಿ, ಕೆಲವು ಬದಲಾವಣೆಗಳನ್ನು ಮಾಡಿದೆ. ಪ್ರಮುಖ ನಾಯಕರು ಪಕ್ಷ ಬಿಟ್ಟ ಬೆನ್ನಲ್ಲೇ ಈ ಸುಧಾರಣೆಯೂ ಕಾಣುತ್ತಿದೆ..! ಅಂದಹಾಗೇ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಸೆಪ್ಟೆಂಬರ್ 24ರಿಂದ ಪ್ರಾರಂಭವಾಗಲಿದೆ.
ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷ ಆಯ್ಕೆ ಚುನಾವಣೆ; ನೆಪಕ್ಕೆ ನಡೆಸುತ್ತಾರೋ ನೋಡುತ್ತೇವೆ ಎಂದ ಜಿ 23 ನಾಯಕರು