Site icon Vistara News

Delhi CM | ಕಾಂಗ್ರೆಸ್ ಮುಗಿದ ಕತೆ, ಅವರ ಬಗ್ಗೆ ಕೇಳಬೇಡಿ: ಅರವಿಂದ ಕೇಜ್ರಿವಾಲ್

AAP MLAs to hold door-to-door campaign against arrest of Sisodia, Jain

ನವ ದೆಹಲಿ: ಕಾಂಗ್ರೆಸ್ ಕತೆ ಮುಗಿದಿದ್ದು, ಗುಜರಾತ್‌ ವಿಧಾನಸಭೆಯ ಎಲ್ಲ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಾರ್ಟಿ(ಆಪ್) ಸ್ಪರ್ಧಿಸಲಿದೆ ಎಂದು ದಿಲ್ಲಿ ಮುಖ್ಯಮಂತ್ರಿ (Delhi CM) ಅರವಿಂದ್ ಕೇಜ್ರಿವಾಲ್ ಹೇಳಿದರು.

ಗುಜರಾತ್‌ನ ಅಹ್ಮದಾಬಾದ್‌ ನಗರದಲ್ಲಿ ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಭೆ ನಡೆಯಿತು ಈ ವೇಳೆ ಮಾತನಾಡಿದ ಅವರು, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಪಂಜಾಬ್‌ನಲ್ಲಿ ಆಪ್ ಸರ್ಕಾರ ದಿವಾಳಿಗೆ ಬಂದು ನಿಂತಿದೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ. ಆದರೂ, ಗುಜರಾತ್‌ನಲ್ಲಿ ಚುನಾವಣಾ ಪ್ರಚಾರಕ್ಕಾಗಿ, ಜಾಹೀರಾತಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿರುವ ಬಗ್ಗೆ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದರು.

ಈ ಪ್ರಶ್ನೆಗೆ ಉತ್ತರಿಸಿದ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಕತೆ ಮುಗಿದಿದೆ. ಅವರ ಪ್ರಶ್ನೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅವರ ಪ್ರಶ್ನೆಗಳಿಗೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ ಎಂದರು. ಇಷ್ಟು ಹೇಳುತ್ತಿದ್ದಂತೆ ನೆರೆದಿದ್ದ ಆಪ್ ಕಾರ್ಯಕರ್ತರು ಜಯಕಾರ ಹಾಕಿದರು.

ಮತ್ತೊಬ್ಬ ಪತ್ರಕರ್ತರು, ಮೇಧಾ ಪಾಟ್ಕರ್ ಅವರನ್ನು ಆಪ್ ಕಣಕ್ಕಿಳಿಸಲಿದೆ ಎಂದು ಬಿಜೆಪಿ ಆರೋಪಿಸುತ್ತಿದೆ ಎಂದರು. ಅದಕ್ಕೆ ಉತ್ತರಿಸಿದ ಕೇಜ್ರಿವಾಲ್, ನರೇಂದ್ರ ಮೋದಿ ಅವರ ಬಳಿಕ ಸೋನಿಯಾ ಗಾಂಧಿ ಅವರನ್ನು ಪಿಎಂ ಸ್ಥಾನಕ್ಕೆ ಬಿಜೆಪಿ ತರಲಿದೆ ಎಂದು ನಾನು ಕೇಳಿದ್ದೇನೆ. ಈ ಬಗ್ಗೆ ಹೋಗಿ ಅವರನ್ನು ಕೇಳಿದೆ ಎಂದು ಟಾಂಗ್ ನೀಡಿದರು.

ಗುಜರಾತ್‌ನಲ್ಲಿ ಆಪ್‌ಗೆ ಬಿಜೆಪಿಯೇ ಎದುರಾಳಿ ಹೊರತು ಕಾಂಗ್ರೆಸ್‌ವಲ್ಲ. ಗುಜರಾತ್ ಮತದಾರರು ಕಾಂಗ್ರೆಸ್‌ಗೆ ವೋಟ್ ಮಾಡಬಾರದು. ರಾಜ್ಯದಲ್ಲಿ ಬಿಜೆಪಿಗೆ ಆಪ್ ಮಾತ್ರವೇ ಪರ್ಯಾಯ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.

ಇದನ್ನೂ ಓದಿ | ಬಿಜೆಪಿಯಲ್ಲೇ ಇದ್ದುಕೊಂಡು ಆಪ್​​ಗಾಗಿ ಕೆಲಸ ಮಾಡಿ; ಕಾರ್ಯಕರ್ತರಿಗೆ ಕರೆ ನೀಡಿದ ಅರವಿಂದ್ ಕೇಜ್ರಿವಾಲ್​

Exit mobile version