ನವದೆಹಲಿ: ಲೋಕಸಭೆಯಲ್ಲಿ (Lok Sabha) ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದರು. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ (Central Government) ಆಡಳಿತ, ಕೈಗೊಂಡ ಅಭಿವೃದ್ಧಿ ಕೆಲಸಗಳು, ವಿಕಸಿತ ಭಾರತದತ್ತ ಹೆಜ್ಜೆ ಹಾಕುವ ರೀತಿ, ಮುಂಬರುವ ಐದು ವರ್ಷಗಳಲ್ಲಿ ಕೈಗೊಳ್ಳುವ ಅಭಿವೃದ್ಧಿಯ ಕುರಿತು ಪ್ರಸ್ತಾಪಿಸುವ ಜತೆಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್ ಈ ಬಾರಿ 100 ಕ್ಷೇತ್ರಗಳನ್ನೂ ಗೆದ್ದಿಲ್ಲ. ನಾವು ಮೂರನೇ ಬಾರಿಗೆ ಸರ್ಕಾರ ರಚಿಸಿದ್ದೇವೆ” ಎಂದು ಕುಟುಕಿದರು.
“ದೇಶದಲ್ಲಿ ಮೂರನೇ ಬಾರಿಗೆ ಆಡಳಿತಕ್ಕೆ ಬರುವುದು ಸುಲಭವಲ್ಲ. ಜನರ ಪರವಾದ ಆಡಳಿತವನ್ನೇ ತಪಸ್ಸಿನ ರೀತಿ ಮಾಡಿದ ಕಾರಣದಿಂದಾಗಿ ನಮಗೆ ದೇಶದ ಜನ ಮೂರನೇ ಬಾರಿಗೆ ಅವಕಾಶ ನೀಡಿದ್ದಾರೆ. ಕಳೆದ 60 ವರ್ಷಗಳಲ್ಲಿಯೇ ದೇಶದ ಜನರು ಯಾರನ್ನೂ ಮೂರನೇ ಬಾರಿಗೆ ಆಯ್ಕೆ ಮಾಡಿಲ್ಲ. ನಮ್ಮ ಮೇಲಿನ ಭರವಸೆ, ನಂಬಿಕೆಯಿಂದಲೇ ಮೂರನೇ ಬಾರಿಗೆ ಗೆಲ್ಲಿಸಿದ್ದಾರೆ” ಎಂದು ಹೇಳಿದರು.
ದೇಶದ ಜನರು ಕಾಂಗ್ರೆಸ್‌ಗೆ ಒಂದು ಜನಾದೇಶ ನೀಡಿದ್ದಾರೆ. ನೀವು ಪ್ರತಿಪಕ್ಷದಲ್ಲಿಯೇ ಕುಳಿತುಕೊಳ್ಳಿ, ಹೀಗೆಯೇ ಗಲಾಟೆ ಮಾಡಿ, ಕಿರುಚುತ್ತಲೇ ಇರಿ ಎಂಬುದು ಜನರ ಆದೇಶವಾಗಿದೆ. ಕಾಂಗ್ರೆಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸತತ ಮೂರನೇ ಅವಧಿಗೆ ಕಾಂಗ್ರೆಸ್ 100 ಸೀಟುಗಳನ್ನು ಕೂಡ ಗೆಲ್ಲುವಲ್ಲಿ ವಿಫಲವಾಗಿದೆ. ಕಾಂಗ್ರೆಸ್‌ನ ಇತಿಹಾಸದಲ್ಲಿಯೇ ಇದು ಮೂರನೇ ಅತಿ ದೊಡ್ಡ ಸೋಲಾಗಿದೆ. ಮೂರನೇ ಕಳಪೆ ಪ್ರದರ್ಶನವಾಗಿದೆ.
“ಮುಂದಿನ 5 ವರ್ಷಗಳಲ್ಲಿ ನಾವು ನಮ್ಮ ಹಿಂದಿನ ಎಲ್ಲ ರೆಕಾರ್ಡ್‌ಗಳನ್ನು ಮುರಿಯುತ್ತೇವೆ. ಇನ್ನೂ ಮೂರು ಕೋಟಿ ಬಡವರಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿಕೊಡುತ್ತೇವೆ. ದೇಶದ ಬಡವರು, ರೈತರು, ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ದುಡಿಯುತ್ತೇವೆ. ವಿಕಸಿತ ಭಾರತಕ್ಕೆ ಭದ್ರ ಬುನಾದಿಯನ್ನು ಹಾಕಿಕೊಡುತ್ತೇವೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ತತ್ವದಲ್ಲಿ ಆಡಳಿತ ನಡೆಸುತ್ತೇವೆ” ಎಂದು ತಿಳಿಸಿದರು.
ನೂತನ ಸಂಸದರಿಗೆ ಅಭಿನಂದನೆ
ನೂತನ ಸಂಸದರಿಗೆ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು. ಸಂಸತ್‌ಗೆ ಮೊದಲ ಬಾರಿ ಆಯ್ಕೆಯಾಗಿರುವ ನೂತನ ಸಂಸದರಿಗೆ ಅಭಿನಂದನೆಗಳು. ನೂತನ ಸಂಸದರು ಸದನದ ನಿಯಮಗಳನ್ನು, ಶಿಷ್ಟಾಚಾರಗಳನ್ನು ಅಚ್ಚುಕಟ್ಟಾಗಿ ಪಾಲಿಸುವ ಮೂಲಕ ಅನುಭವಿ ಸಂಸದರಂತೆ ವರ್ತಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ನೂತನ ಸಂಸದರು ಅಧಿವೇಶನದ ಚರ್ಚೆಯಲ್ಲಿ ಪಾಲ್ಗೊಂಡಿರುವುದು ಕೂಡ ಸಕಾರಾತ್ಮಕ ಸಂಗತಿಯಾಗಿದೆ.
ಇದನ್ನೂ ಓದಿ: Narendra Modi: ಪ್ರಜಾಪ್ರಭುತ್ವ, ಜಾತ್ಯತೀತತೆ, ಏಳಿಗೆಯೇ ನಮ್ಮ ಆದ್ಯತೆ; ಸಂಸತ್ತಿನಲ್ಲಿ ಮೋದಿ ಹೇಳಿಕೆ