ರಾಯಪುರ, ಛತ್ತೀಸ್‌ಗಢ: ಭಾರತ್ ಜೋಡೋ ಯಾತ್ರೆ(Bharat Jodo Yatra)ಯ ಯಶಸ್ಸಿನಿಂದ ಮೈಕೊಡವಿ ಎದ್ದುನಿಂತಿರುವ ಕಾಂಗ್ರೆಸ್ ಪಕ್ಷವು(Congress), ಮತ್ತೊಂದು ಅದೇ ರೀತಿಯ ಪಾದಯಾತ್ರೆಯನ್ನು ಕೈಗೊಳ್ಳುವ ಯೋಜನೆಯನ್ನು ಹಾಕಿಕೊಂಡಿದೆ. ಕಾಂಗ್ರೆಸ್ ಪಕ್ಷದ 85ನೇ ಮಹಾಧಿವೇಶನದಲ್ಲಿ (Congress plenary Session) ಈ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಭಾರತ್ ಜೋಡೋ ಯಾತ್ರೆಯಿಂದ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಬಂದಿದೆ. ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಪುಟಿದೆದ್ದಿದೆ. ಈಗ ಪೂರ್ವದಿಂದ ಪಶ್ಚಿಮಕ್ಕೆ ಕಾಂಗ್ರೆಸ್ ಮತ್ತೊಂದು ಪಾದಯಾತ್ರೆಯನ್ನು ಕೈಗೊಳ್ಳಲಿದೆ. ಅರುಣಾಚಲ ಪ್ರದೇಶದ ಪಾಸಿಘಾಟ್‌ನಿಂದ ಗುಜರಾತ್‌ನ ಪೋರ್‌ಬಂದರ್‌ವರೆಗೆ ಈ ಯಾತ್ರೆ ನಡೆಯಲಿದೆ. ಆದರೆ, ಭಾರತ್ ಜೋಡೋ ಯಾತ್ರೆಗಿಂತ ಈ ಯಾತ್ರೆಯ ವಿನ್ಯಾಸ ತುಸು ಭಿನ್ನವಾಗಿರಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಾಂಗ್ರೆಸ್ ಮಹಾಧಿವೇಶನದಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತು
ಪೂರ್ವ-ಪಶ್ಚಿಮ ಯಾತ್ರೆಯಲ್ಲಿ ಸಾಕಷ್ಟು ಅರಣ್ಯ ಮತ್ತು ನದಿಗಳು ಎದುರಾಗಲಿವೆ. ಇದು ಬಹು-ಮಾದರಿ ಯಾತ್ರೆಯಾಗಿರಬಹುದು, ಆದರೆ ಹೆಚ್ಚಾಗಿ ಇದು ಪಾದಯಾತ್ರೆಯಾಗಿರುತ್ತದೆ ಜೈ ರಾಮ್ ರಮೇಶ್ ಅವರು ಹೇಳಿದ್ದಾರೆ.
ಇದನ್ನೂ ಓದಿ: Congress Plenary Session: ಅದಾನಿಯ ಸತ್ಯ ಗೊತ್ತಾಗುವ ತನಕ ಪ್ರಶ್ನೆ ಕೇಳುತ್ತೇವೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ರಾಹುಲ್ ಗಾಂಧಿಯನ್ನು ಅಣಕ ಮಾಡಿದ ಬಿಜೆಪಿ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೇಶವನ್ನು ಹಾಳು ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಅಲ್ಲದೇ, ರಾಹುಲ್ ಅವರನ್ನು ಅಣಕ ಮಾಡಿದೆ. ಇಡೀ ಜಗತ್ತೇ ಭಾರತವನ್ನು ಮೆಚ್ಚಿ ಕೊಂಡಾಡುತ್ತಿದೆ. ಕಾಂಗ್ರೆಸ್‌ಗೆ ಮಾತ್ರ ಸಮಸ್ಯೆಗಳು ಕಾಣುತ್ತಿವೆ ಎಂದು ಬಿಜೆಪಿ ಹೇಳಿದೆ.