Site icon Vistara News

CWC Meeting: ಅಧಿಕಾರಕ್ಕೆ ಬಂದ್ರೆ ದೇಶಾದ್ಯಂತ ಜಾತಿಗಣತಿ, ಮಹಿಳೆಯರಿಗೆ ಒಬಿಸಿ ಮೀಸಲು: ಖರ್ಗೆ, ರಾಹುಲ್ ಘೋಷಣೆ

Congress is ready to Nationwide caste based census, Decision taken at CWC Meeting

ನವದೆಹಲಿ: 2024ರಲ್ಲಿ ಕಾಂಗ್ರೆಸ್ ಪಕ್ಷವು (Congress Party) ಅಧಿಕಾರಕ್ಕೆ ಬಂದರೆ, ಮಹಿಳಾ ಮೀಸಲಾತಿಯನ್ನು (Women reservation bill) ಇತರ ಹಿಂದುಳಿದ ವರ್ಗಕ್ಕೂ (OBC women) ವಿಸ್ತರಿಸಲಾಗುವುದು, ದೇಶಾದ್ಯಂತ ಜಾತಿಯಾಧರಿತ ಜನಗಣತಿಯನ್ನು (nationwide caste-based Census) ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಅವರು ಹೇಳಿದ್ದಾರೆ. ದಿಲ್ಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಖರ್ಗೆ ಅವರು, ನಾವು 2024 ರಲ್ಲಿ ಅಧಿಕಾರಕ್ಕೆ ಬಂದಾಗ ಒಬಿಸಿ ಮಹಿಳೆಯರಿಗೆ ಮೀಸಲಾತಿಯನ್ನು ವಿಸ್ತರಿಸುವುದು ಸೇರಿದಂತೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ನಾವು ಸಂಕಲ್ಪ ಮಾಡುತ್ತೇವೆ. ಪರಿಣಾಮಕಾರಿ ಸರ್ಕಾರಿ ಕಾರ್ಯಕ್ರಮಗಳು ಮತ್ತು ಕಲ್ಯಾಣ ಯೋಜನೆಗಳಿಗೆ ನಿರ್ಣಾಯಕವಾದ ರಾಷ್ಟ್ರವ್ಯಾಪಿ ಜಾತಿ ಆಧಾರಿತ ಜನಗಣತಿಯನ್ನು ಸಹ ನಾವು ಒತ್ತಾಯಿಸಿದ್ದೇವೆ ಎಂದು ಹೇಳಿದ್ದಾರೆ. ಈ ಕುರಿತಾದ ಮಾಹಿತಿಯನ್ನು ಅವರು ಎಕ್ಸ್‌ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು, ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶ, ಕರ್ನಾಟಕ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಜಾತಿಗಣತಿಯನ್ನು ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಪಕ್ಷವು ಸೂಚಿಸಿದೆ ಎಂದು ತಿಳಿಸಿದ್ದಾರೆ.

ಹಿಂಸಾಚಾರ ಪೀಡಿತ ಮಣಿಪುರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ವಿಫಲರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಮೋದಿ ಅವರಿಗೆ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಭೇಟಿ ನೀಡಲು ಪುರುಸೋತ್ತು ಇದೆ ಹೊರತು, ಗಲಭೆ ಪೀಡಿತ ರಾಜ್ಯಕ್ಕೆ ಭೇಟಿ ನೀಡಲು ಸಮಯವಿಲ್ಲ ಎಂದು ಹೇಳಿದರು. ಐದು ರಾಜ್ಯಗಳಾದ ಮಿಜೋರಾಂ, ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ವಿಧಾನಸಭಾ ಚುನಾವಣೆಗಳು ನವೆಂಬರ್‌ನಲ್ಲಿ ನಡೆಯಲಿವೆ ಎಂದು ಭಾರತೀಯ ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ.

ಕಾಂಗ್ರೆಸ್ ರಾಜ್ಯಗಳಲ್ಲಿ ಜಾತಿಗಣತಿ- ರಾಹುಲ್ ಗಾಂಧಿ

ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಜಾತಿ ಗಣತಿ ಕೈಗೊಳ್ಳುವ ಐತಿಹಾಸಿಕ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶ, ಕರ್ನಾಟಕ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಜಾತಿ ಗಣತಿ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಲಾಗಿದೆ. ಕರ್ನಾಟಕದಲ್ಲಿ ಈಗಾಗಲೇ ಗಣತಿಯನ್ನು ಮಾಡಲಾಗಿದೆ. ವರದಿಯನ್ನು ಸ್ವೀಕರಿಸುವಂತೆ ಸೂಚಿಸಲಾಗಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Caste Census: ಜಾತಿ ಗಣತಿಯಿಂದ ಜಾತಿ ದ್ವೇಷ ಸೃಷ್ಟಿಸಲು ಹೊರಟಿದ್ದಾರೆ ಎಂದ ಎಚ್‌ಡಿಕೆ

ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ನಾಲ್ಕು ಗಂಟೆಗಳ ಕಾಲ ಜಾತಿ ಸಮೀಕ್ಷೆ ಬಗ್ಗೆ ಚರ್ಚೆ ನಡೆಯಿತು.ರಾಜ್ಯ ಅಥವಾ ರಾಷ್ಟ್ರದಲ್ಲಿ ಜಾತಿ ಸಮೀಕ್ಷೆ ಆಗಬೇಕು ಎನ್ನುವ ನಿಲುವು ರಾಹುಲ್ ಗಾಂಧಿ ಅವರದ್ದಾಗಿತ್ತು. ಇದು ಜನರ, ಸಾಮಾಜಿಕ ವ್ಯವಸ್ಥೆ ಸುಧಾರಿಸಲು ಸಹಾಯಕವಾಗಲಿದೆ. ಕರ್ನಾಟಕ ದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲೂ ನಡೆದಿತ್ತು. 2017 ರಲ್ಲಿ ಆಯೋಗದ ವರದಿ ಯಾಕೆ ಜಾರಿ ಆಗಲಿಲ್ಲ ಎನ್ನುವ ಬಗ್ಗೆ ಸರ್ಕಾರದಲ್ಲಿದ್ದವರನ್ನು ಕೇಳಿದ್ರೆ ಗೊತ್ತಾಗುತ್ತದೆ. ಜಾತಿ ಗಣತಿಯಿಂದ ಯಾರಿಗಾದರೂ ತೊಂದರೆಯಾದ್ರೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಇದೆ ಎಂದು ಸಿಡಬ್ಲೂಸಿಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version