ಜಗದಲ್‌ಪುರ, ಛತ್ತೀಸ್‌ಗಢ: ಜಾತಿ ಗಣತಿಯ (caste census) ಮೂಲಕ ಕಾಂಗ್ರೆಸ್ ಪಕ್ಷವು (Congress Party) ಹಿಂದೂಗಳಲ್ಲಿ ಒಡಕು ಮೂಡಿಸುತ್ತಿದೆ (Dividing Hindus) ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದ್ದಾರೆ. ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ(Chhattisgarh Assembly Election) ನಡೆಯಲಿರುವ ಛತ್ತೀಸ್‌ಗಢ ಜಗದಲ್‌ಪುರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಭಾರತದ ಸಂಪನ್ಮೂಲಗಳ ಮೇಲಿನ ಹಕ್ಕನ್ನು ಬಡವರು ಹೊಂದಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ನಿನ್ನೆ ರಾಜಸ್ಥಾನದಲ್ಲಿ ಮಾತನಾಡಿದ್ದ ಪ್ರಧಾನಿ ಅವರು, ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ಜಾತಿ ಗಣತಿಯ ಮೂಲಕ ಪ್ರತಿಪಕ್ಷಗಳು ದೇಶವನ್ನು ಒಡೆಯುವ ಸಂಚು ರೂಪಿಸಿವೆ ಎಂದು ಹೇಳಿದ್ದರು.
ಜನಸಂಖ್ಯೆ ಎಷ್ಟಿದೆಯೋ ಅಷ್ಟೇ ಹಕ್ಕು ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಛತ್ತೀಸ್‌ಗಢದ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುವ ಇತಿಹಾಸವು ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದು ಹೇಳಿದರು. ದೇಶದ ಅತಿದೊಡ್ಡ ಜನಸಂಖ್ಯೆ ಎಂದರೆ ಬಡವರು ಮಾತ್ರ. ಅವರಿಗೆ ನಮ್ಮ ಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
ಈ ಹಿಂದೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಅಲ್ಪಸಂಖ್ಯಾತರದ್ದು ಎಂದು ಹೇಳಿದ್ದರು. ಈಗ ಕಾಂಗ್ರೆಸ್ ಪಕ್ಷವು ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಸಮುದಾಯಕ್ಕೆ ಮೊದಲ ಹಕ್ಕು ಎಂದು ಹೇಳುತ್ತಿದೆ. ಹಾಗಾದರೆ, ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರ ಹಕ್ಕನ್ನು ಕಸಿದುಕೊಳ್ಳಲು ಹುನ್ನಾರ ನಡೆಸುತ್ತಿದೆಯೇ ಎಂದು ವ್ಯಂಗ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ತಿವಿದರು.
ಈ ಸುದ್ದಿಯನ್ನೂ ಓದಿ: PM Narendra Modi: ಪ್ರಧಾನಿ ಮೋದಿ ಗಿಫ್ಟ್ ನಿಮಗೂ ಬೇಕಾ? ಹಾಗಾದ್ರೆ, ಆನ್‌ಲೈನ್ ಹರಾಜಿನಲ್ಲಿ ಭಾಗವಹಿಸಿ
ಕಾಂಗ್ರೆಸ್ ಪಕ್ಷವು ದೇಶವನ್ನು ನಾಶ ಮಾಡುವ ಪಣ ತೊಟ್ಟಂತೆ ಕಾಣುತ್ತಿದೆ. ಹಿಂದೂಗಳನ್ನು ವಿಭಜಿಸಿ, ಸಮಾಜದಲ್ಲಿ ತಾರತಮ್ಯವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡುತ್ತಿದೆ. 70 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು, ಬಡತನವನ್ನು ಬಿಟ್ಟು ದೇಶಕ್ಕೆ ಬೇರೇನೂ ಕೊಟ್ಟಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ಈಗ ದೇಶವಿರೋಧಿಗಳ ಜತೆ ಸೇರಿಕೊಂಡಿದೆ. ದೇಶವನ್ನು ನಾಶ ಮಾಡಲು ಹೊರಟಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ಮೂಲ ಕಾಂಗ್ರೆಸ್ ಜನರು ನಡೆಸುತ್ತಿಲ್ಲ. ಇದನ್ನೆಲ್ಲ ನೋಡಿದ ಕಾಂಗ್ರೆಸ್‌ನ ಹಿರಿಯ ನಾಯಕರು ಕೇಳಲೂ ಇಲ್ಲ, ಮಾತನಾಡುವ ಧೈರ್ಯವೂ ಇಲ್ಲ ಎಂದು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಈಗ ಕಾಂಗ್ರೆಸ್ ಅನ್ನು ಹೊರಗುತ್ತಿಗೆ ನೀಡಲಾಗಿದೆ ಎಂದು ಹೇಳಿದರು.