Site icon Vistara News

ಬಿಜೆಪಿ 400 ಸೀಟು ಗೆಲ್ಲುತ್ತೆ ಅಂದಿದ್ದಾರೆ ಖರ್ಗೆ, ಕಾಂಗ್ರೆಸ್ 40 ದಾಟಲ್ಲ ಅಂದಿದ್ದಾರೆ ಮಮತಾ; ಮೋದಿ ಗೇಲಿ

Anurag Thakur

ನವದೆಹಲಿ: “ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರುವ ಮೂಲಕ ಜನರ ಹಕ್ಕುಗಳನ್ನು ಕಸಿದುಕೊಂಡಿದ್ದ ಕಾಂಗ್ರೆಸ್‌ ಈಗ ದೇಶವನ್ನು ವಿಭಜನೆ ಮಾಡುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ರಾಜ್ಯಸಭೆಯಲ್ಲಿ ರಾಷ್ಟ್ರಪತಿ ವಂದನಾ ನಿರ್ಣಯದ ಕುರಿತು ಭಾಷಣ ಮಾಡಿದ ಮೋದಿ, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. “ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಬಿಜೆಪಿಯು 400 ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಅತ್ತ, ಕಾಂಗ್ರೆಸ್‌ 40 ಸ್ಥಾನಗಳಲ್ಲಿ ಮಾತ್ರ ಗೆಲ್ಲುತ್ತದೆ ಎಂಬುದಾಗಿ ಮಮತಾ ಬ್ಯಾನರ್ಜಿ (Mamata Banerjee) ಹೇಳಿದ್ದಾರೆ. ಆದರೆ, ಕಾಂಗ್ರೆಸ್‌ ಈ ಬಾರಿ ಕನಿಷ್ಠ 40 ಸೀಟುಗಳನ್ನಾದರೂ ಉಳಿಸಿಕೊಳ್ಳಲಿ” ಎಂದು ಗೇಲಿ ಮಾಡಿದರು.

“ಕಳೆದ 10 ವರ್ಷದಲ್ಲಿ ಭಾರತವು ಭಾರಿ ಪ್ರಮಾಣದಲ್ಲಿ ಏಳಿಗೆ ಹೊಂದಿದೆ. ದೇಶದ ಆರ್ಥಿಕ, ರಕ್ಷಣೆಯ ನೀತಿಗಳು ಬದಲಾಗಿವೆ. ಹಾಗಾಗಿ, ನಮ್ಮ ಮೇಲೆ ಜನರ ಆಶೀರ್ವಾದ ಈಗಲೂ ಇದೆ. ಆದರೆ, ಕಾಂಗ್ರೆಸ್‌ನ ವಿಚಾರಗಳು ಔಟ್‌ಡೇಟೆಡ್‌ ಆಗಿವೆ. ವಿಚಾರ, ಚಿಂತನೆಗಳೇ ಔಟ್‌ಡೇಟೆಡ್‌ ಆದ ಮೇಲೆ, ಏಳಿಗೆ ಹೇಗೆ ಹೊಂದಲು ಸಾಧ್ಯವಿಲ್ಲ. ಕಾಂಗ್ರೆಸ್‌ ದುರಾಡಳಿತ, ಭ್ರಷ್ಟಾಚಾರ, ಬ್ರಿಟಿಷರ ಗುಲಾಮಿ ಮನಸ್ಥಿತಿಯಿಂದಾಗಿ ದೇಶವು ಅಭಿವೃದ್ಧಿ ಹೊಂದಲು ಸಾಧ್ಯವಾಗಲಿಲ್ಲ. ಆದರೆ, ಕಳೆದ 10 ವರ್ಷದಲ್ಲಿ ಭಾರತದ ಚಹರೆಯೇ ಬದಲಾಗಿದೆ” ಎಂದು ನರೇಂದ್ರ ಮೋದಿ ಹೇಳಿದರು.

“ಕಾಂಗ್ರೆಸ್‌ ಬ್ರಿಟಿಷರಿಂದ ಸ್ಥಾಪನೆಯಾದ ಪಕ್ಷವಾಗಿದೆ. ಇದರಿಂದಾಗಿ ಕಾಂಗ್ರೆಸ್‌ ನಾಯಕರು ಇಂಗ್ಲಿಷರಿಂದ ಪ್ರಭಾವಿತರಾಗಿದ್ದರು. ಹಾಗಾಗಿಯೇ, ದೇಶದಲ್ಲಿ ಸಂಜೆ 5 ಗಂಟೆಗೆ ಬಜೆಟ್‌ ಮಂಡಿಸಲಾಗುತ್ತಿತ್ತು. ಭಾರತದ ಬಜೆಟ್‌ ಬ್ರಿಟನ್‌ನವರಿಗೆ ತಿಳಿಯಲಿ, ಅಲ್ಲಿ ಬೆಳಗ್ಗೆಯಾದಾಗ ಭಾರತದಲ್ಲಿ ಸಂಜೆ ಬಜೆಟ್‌ ಮಂಡಿಸಲಾಗುತ್ತಿತ್ತು. ದೆಹಲಿಯ ರಾಜಪಥವು ಕರ್ತವ್ಯ ಪಥ ಎಂದು ಕರೆಯಲು ನಾವೇ ಬರಬೇಕಾಯಿತು. ಬಜೆಟ್‌ ಸಮಯವನ್ನು ಬೆಳಗ್ಗೆ ನಿಗದಿಪಡಿಸಲಾಯಿತು” ಎಂದು ಕುಟುಕಿದರು.

ಇದನ್ನೂ ಓದಿ: Narendra Modi: ನೂತನ ಚುನಾವಣಾ ಆಯುಕ್ತರ ನೇಮಕ; ಇಂದು ಮೋದಿ ಮಹತ್ವದ ಸಭೆ

ಬಿಜೆಪಿ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವ ಸಾಧಿಸಲಿದೆ ಎಂಬುದಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್‌ನಲ್ಲಿ ಹೇಳಿರುವುದನ್ನು ನರೇಂದ್ರ ಮೋದಿ ರಾಜ್ಯಸಭೆಯಲ್ಲೂ ಪ್ರಸ್ತಾಪಿಸಿದರು. “ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಬಿಜೆಪಿ ಮೇಲೆ ವಿಶ್ವಾಸ ಹೊಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರ ಆಶೀರ್ವಾದವೂ ನಮ್ಮ ಮೇಲೆ ಇರಲಿ. ನಾವು ಗೆದ್ದು ಬಂದು ಮತ್ತೆ ದೇಶವನ್ನು ಮತ್ತಷ್ಟು ಏಳಿಗೆಯತ್ತ ಕೊಂಡೊಯ್ಯುವಂತಾಗಲಿದೆ” ಎಂದು ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version