ನವದೆಹಲಿ: ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ (Congress Party) ರಾಜೀನಾಮೆ ನೀಡಿದ್ದ ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚವಾಣ್ (Ashok Chavan) ಅವರು ಮಂಗಳವಾರ ಭಾರತೀಯ ಜನತಾ ಪಾರ್ಟಿಯನ್ನು (BJP Party) ಸೇರ್ಪೆಯಾದರು. ಇದರ ಬೆನ್ನಲ್ಲೇ ಅವರು ರಾಜ್ಯಸಭೆ ಚುನಾವಣೆಲ್ಲಿ (Rajya Sabha Election) ಸ್ಪರ್ಧಿಸಲು ಮುಂದಾಗಿದ್ದು, ಫೆಬ್ರವರಿ 14ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಗ್ರ್ಯಾಂಡ್ ಓಲ್ಡ್ ಪಕ್ಷ ಕಾಂಗ್ರೆಸ್‌ಗೆ ಮತ್ತೊಂದು ಹೊಡೆತವನ್ನು ನೀಡಿದ ಚವಾಣ್ ಅವರು ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷದ ನಿರ್ಧಾರಗಳ ಬಗ್ಗೆ ಮಾಜಿ ಕಾಂಗ್ರೆಸ್ ನಾಯಕ ಅತೃಪ್ತರಾಗಿದ್ದರು ಎಂದು ವರದಿಯಾಗಿದೆ.
ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದ್ದ ಅಶೋಕ್ ಚವಾಣ್ ಅವರು, ಸೋಮವಾರ ಮಧ್ಯಾಹ್ನದಿಂದಲೇ ಜಾರಿಗೆ ಬರುವಂತೆ ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.
ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಕೇಂದ್ರದ ಮಾಜಿ ಗೃಹ ಸಚಿವ ಎಸ್ ಬಿ ಚವಾಣ್ ಅವರ ಪುತ್ರರಾಗಿರುವ ಅಶೋಕ್ ಚವಾಣ್ ಅವರು ರಾಜೀನಾಮೆ ಕಾಂಗ್ರೆಸ್ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು ಮುಂಬೈನ ಕಾಂಗ್ರೆಸ್‌ನ ಹಿರಿಯ ನಾಯಕ ಬಾಬಾ ಸಿದ್ಧಿಕ್ ಅವರು ಪಕ್ಷವನ್ನು ತೊರೆದು ಅಜಿತ್ ಪವಾರ್ ನೇತೃತ್ವದ ರಾಷ್ಟ್ರವಾದ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದರು. ಜನವರಿಯಲ್ಲಿ ಕಾಂಗ್ರೆಸ್‌ನ ಮತ್ತೊಬ್ಬ ಪ್ರಮುಖ ನಾಯಕರಾಗಿದ್ದ ಮಿಲಿಂದ್ ದಿಯೋರಾ ಕೂಡ ರಾಜೀನಾಮೆ ನೀಡಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರ್ಪಡೆಯಾಗಿದ್ದರು.
ಈ ಸುದ್ದಿಯನ್ನೂ ಓದಿ: Ashok Chavan: ಕಾಂಗ್ರೆಸ್ ತೊರೆದ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚವಾಣ್ ಇಂದು ಬಿಜೆಪಿ ಸೇರ್ಪಡೆ?