Site icon Vistara News

Jairam Ramesh: ನೂತನ ಸಂಸತ್ತನ್ನು ‘ಮೋದಿ ಮಲ್ಟಿಪ್ಲೆಕ್ಸ್’‌ ಎಂದ ಕಾಂಗ್ರೆಸ್‌ ನಾಯಕ; ಭುಗಿಲೆದ್ದ ವಿವಾದ

Jairam Ramesh On Narendra Modi Over Parliament Building

Congress leader Jairam Ramesh calls new parliament a Modi multiplex; BJP Slams

ನವದೆಹಲಿ: ಕೆಲ ದಿನಗಳ ಹಿಂದಷ್ಟೇ ನೂತನ ಸಂಸತ್‌ ಭವನದಲ್ಲಿ (New Parliament Building) ಮೊದಲ ಅಧಿವೇಶನ ನಡೆದಿದೆ. ನೂತನ ಸಂಸತ್‌ ಭವನವನ್ನು ಕೂಡ ಪ್ರಜಾಪ್ರಭುತ್ವದ ದೇಗುಲ ಎಂದೇ ಹೇಳಲಾಗುತ್ತಿದೆ. ಅತ್ಯಾಧುನಿಕವಾಗಿ ನಿರ್ಮಿಸಿರುವ ಸಂಸತ್‌ ಭವನವು ಸಕಲ ಸೌಲಭ್ಯಗಳನ್ನೂ ಹೊಂದಿರುವುದರಿಂದ ಗಮನ ಸೆಳೆದಿದೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ (Congress Leader) ಜೈರಾಮ್‌ ರಮೇಶ್‌ (Jairam Ramesh) ಅವರು ನೂತನ ಸಂಸತ್‌ ಭವನವನ್ನು “ಮೋದಿ ಮಲ್ಟಿಪ್ಲೆಕ್ಸ್”‌ (Modi Multiplex) ಎಂದು ಕರೆದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

“ನೂತನ ಸಂಸತ್‌ ಭವನಕ್ಕೆ ತುಂಬ ಜನಪ್ರಿಯತೆ ಕೊಟ್ಟು, ಹೊಗಳಿ, ವೈಭವೀಕರಿಸಿದ ಬಳಿಕ ಚಾಲನೆ ನೀಡಲಾಗಿದೆ. ಆದರೆ, ನಾಲ್ಕು ದಿನಗಳಿಂದ ನಾನು ಸಂಸತ್‌ ಕಲಾಪಗಳಲ್ಲಿ ಪಾಲ್ಗೊಂಡ ಬಳಿಕ ನನ್ನ ಅಭಿಪ್ರಾಯ ಬದಲಾಗಿದೆ. ಏಕೆಂದರೆ, ಹೊಸ ಸಂಸತ್‌ ಭವನವು ದೊಡ್ಡದಾಗಿದೆ. ಸಂಸತ್‌ ವೀಕ್ಷಣೆಗೆ ಭೂತಕನ್ನಡಿಯೇ ಬೇಕಾಗಿದೆ. ಸಂಸತ್‌ ಸದಸ್ಯರ ನಡುವೆ ಸರಿಯಾಗಿ ಸಂಭಾಷಣೆ, ಮಾತುಕತೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪ್ರಜಾಪ್ರಭುತ್ವದ ಆಶಯಗಳು ಈಡೇರುತ್ತಿಲ್ಲ. ನರೇಂದ್ರ ಮೋದಿ ಅವರ ಆಶಯದಂತೆಯೇ ಇದನ್ನು ನಿರ್ಮಿಸಿದ ಕಾರಣ ನೂತನ ಸಂಸತ್‌ ಭವನವನ್ನು ಮೋದಿ ಮಲ್ಟಿಪ್ಲೆಕ್ಸ್ ಎಂಬುದಾಗಿ ಕರೆಯುವುದೇ ಸೂಕ್ತ” ಎಂದು ಜೈರಾಮ್‌ ರಮೇಶ್‌ ಹೇಳಿದ್ದಾರೆ.

“ನಾನು ಸಂಸತ್ತಿನ ಎರಡೂ ಸದನಗಳಲ್ಲಿ ಓಡಾಡಿದ್ದೇನೆ. ಹಳೆಯ ಸಂಸತ್‌ ಭವನದಲ್ಲಿ ಕಲಾಪಗಳ ಮಧ್ಯೆ ತಿರುಗಾಡಬಹುದಿತ್ತು. ಒಬ್ಬರಿಗೊಬ್ಬರು ಚರ್ಚೆ, ಸಂವಾದದಲ್ಲಿ ನಿರತರಾಗಬಹುದಿತ್ತು. ಎರಡೂ ಕಲಾಪಗಳಿಗೆ ಓಡಾಡಲು, ಕಾರಿಡಾರ್‌ನಲ್ಲಿ ತಿರುಗಾಡುವುದು ಸುಲಭವಾಗಿತ್ತು. ಆದರೆ, ಹೊಸ ಸಂಸತ್‌ ಭವನದಲ್ಲಿ ಇದೆಲ್ಲದಕ್ಕೂ ಅವಕಾಶವಿಲ್ಲ. ಸಂಸತ್‌ ಭವನದ ವಿನ್ಯಾಸವು ಪ್ರಜಾಪ್ರಭುತ್ವವನ್ನೇ ಕೊಲ್ಲುವಂತಿದೆ. ನರೇಂದ್ರ ಮೋದಿ ಅವರು ಸಂವಿಧಾನವನ್ನು ಬದಲಾಯಿಸದೆಯೇ ಪ್ರಜಾಪ್ರಭುತ್ವವನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: ವಿಸ್ತಾರ Explainer: New Parliament Building: ನೂತನ ಸಂಸತ್ ಭವನದ ರಚನೆ, ವಿನ್ಯಾಸ ಅದ್ಭುತ! ವಿಡಿಯೊ ನೋಡಿ

ಜೆ.ಪಿ.ನಡ್ಡಾ ತಿರುಗೇಟು

ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಟೀಕೆಗಳಿಗೆ ಬಿಜೆಪಿ ತಿರುಗೇಟು ನೀಡಿದೆ. “ಕಾಂಗ್ರೆಸ್‌ ಮಾತ್ರ ಇಂತಹ ಕನಿಷ್ಠ ಮನಸ್ಥಿತಿಯನ್ನು ಪ್ರದರ್ಶಿಸಲು ಸಾಧ್ಯ. ಹೀನ ಮನಸ್ಥಿತಿಯ ಭಾಗವಾಗಿಯೇ ಕಾಂಗ್ರೆಸ್‌ ಸಂಸತ್‌ ವಿರುದ್ಧ ಮಾತನಾಡುತ್ತಿದೆ. ಆ ಮೂಲಕ ದೇಶದ 140 ಕೋಟಿ ಜನರ ಆಶಯಗಳಿಗೆ ವಿರುದ್ಧವಾದ, ಅವರಿಗೆ ಅವಮಾನ ತೋರುವ ವರ್ತನೆ ಪ್ರದರ್ಶಿಸುತ್ತಿದೆ” ಎಂದಿದ್ದಾರೆ.

“ಸಂಸತ್‌ ವಿರೋಧಿ ಮನಸ್ಥಿತಿಯನ್ನು ಕಾಂಗ್ರೆಸ್‌ ಇದೇ ಮೊದಲ ಬಾರಿಗೆ ಪ್ರದರ್ಶಿಸುತ್ತಿಲ್ಲ. 1975ರಲ್ಲೂ ಇಂತಹ ಮನಸ್ಥಿತಿ ತೋರಿತು. ಆದರೆ, ಆ ಪ್ರಯತ್ನದಲ್ಲಿ ಕಾಂಗ್ರೆಸ್‌ ವಿಫಲವಾಯಿತು” ಎಂದು ಜೆ.ಪಿ.ನಡ್ಡಾ ಎಕ್ಸ್‌ ಸಾಮಾಜಿಕ ಜಾಲತಾಣ ಪೋಸ್ಟ್‌ ಮೂಲಕ ತಿರುಗೇಟು ನೀಡಿದ್ದಾರೆ.

Exit mobile version